ಗುರುವಾರ , ಮೇ 6, 2021
33 °C

ಆಮ್ರಪಾಲಿ ವಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತಿಹಾಸದ ಪುಟಗಳಲ್ಲಿ ಬರುವ ಆಮ್ರಪಾಲಿ ವೈಶಾಲಿಯ ಅಪ್ರತಿಮ ಸುಂದರಿ. ಆಕೆಯ ಚೆಲುವಿನ ಬಗ್ಗೆಯೇ ಸಂಸ್ಕೃತ ಸಾಹಿತ್ಯದಲ್ಲಿ ಯಥೇಚ್ಛ ವರ್ಣನೆಗಳಿವೆ.ಭಗವಾನ್ ಬುದ್ಧನನ್ನೇ ದಿಟ್ಟತನದಿಂದ ಪ್ರಶ್ನಿಸಿ ಆತನ ಶಿಷ್ಯತ್ವ ಸಂಪಾದಿಸುತ್ತಾಳೆ.

ಜೈಪುರ ಮೂಲದ ಮನಮೋಹಕ ವಿನ್ಯಾಸಗಳ ಆಭರಣ ಬ್ರಾಂಡ್‌ಗೂ ಆಮ್ರಪಾಲಿ ಎಂದೇ ಹೆಸರು. ಅದು ಅನನ್ಯ ಚೆಲುವು, ಸೌಂದರ್ಯದ ಪ್ರತೀಕ.

ರಾಜಸ್ತಾನ, ಗುಜರಾತ್‌ನ ಬುಡಕಟ್ಟು ಜನರ ಸಮೃದ್ಧ ಡಿಸೈನ್‌ಗಳು, ಮೀನಾಕಾರಿ, ಜಡಾವ್ ಕಲೆಗಳು, ಭವ್ಯ ಮುಘಲ್ ಶೈಲಿಗಳನ್ನೆಲ್ಲ ಸಮಕಾಲೀನ ಅಭಿರುಚಿಗೆ ತಕ್ಕಂತೆ ಪುನರ್ ವಿನ್ಯಾಸಗೊಳಿಸಿದ ಆಭರಣಗಳು `ಆಮ್ರಪಾಲಿ~ಯ ವಿಶೇಷ.ಹೀಗಾಗಿಯೇ ಈ ಆಭರಣಗಳು ಬಾಲಿವುಡ್ ನಟಿಯರು ಮಾತ್ರವಲ್ಲದೆ ಅಂಜಲಿನಾ ಜೋಲಿ ಸೇರಿದಂತೆ ಹಾಲಿವುಡ್‌ನ ಹೆಸರಾಂತ ತಾರೆಗಳಿಗೂ ಮೋಡಿ ಹಾಕಿವೆ.

ಪ್ರತಿ ವರ್ಷ, ಪ್ರತಿ ಋತುವಿಗೂ ಹೊಸ ಹೊಸ ಡಿಸೈನ್‌ಗಳನ್ನು ಪರಿಚಯಿಸುವುದು ಆಮ್ರಪಾಲಿಯ ವಿಶೇಷ.ಈ ಸಲ ಅದು ಮುಂಬೈಯಲ್ಲಿ ನಡೆದ ಇಂಡಿಯಾ ಇಂಟರ್‌ನ್ಯಾಷನಲ್ ಜುವೆಲರಿ ವೀಕ್‌ನ ಎರಡನೇ ಆವೃತ್ತಿಯಲ್ಲಿ ಪ್ರದರ್ಶಿಸಿದ ವಧು ಸಂಗ್ರಹಗಳು ವೈಭವ, ಅದ್ಧೂರಿ, ಮೋಹಕ ವಿನ್ಯಾಸಗಳಿಂದ ಎಲ್ಲರನ್ನೂ ಮೋಡಿ ಮಾಡಿದವು.

 

ಬಾಲಿವುಡ್ ತಾರಾಮಣಿಗಳಾದ ಸೋನಮ್ ಕಪೂರ್ ಮತ್ತು ಕಂಗನಾ ರಣಾವತ್ ಈ ಆಭರಣಗಳನ್ನು ಧರಿಸಿ ರ‌್ಯಾಂಪ್ ಮೇಲೇರಿ ರಮ್ಯ ಲೋಕವನ್ನೇ ಸೃಷ್ಟಿಸಿದರು.ಅಷ್ಟಕ್ಕೂ ಈ ಶ್ರೇಣಿಯ ಆಭರಣಗಳ ವಿಶೇಷ ಏನು? 22 ಕ್ಯಾರಟ್ ಚಿನ್ನದಲ್ಲಿ ರೂಪುಗೊಂಡಿದ್ದು ವೈಭವೋಪೇತ ಮುಘಲ್ ಮತ್ತು ವಿಕ್ಟೋರಿಯನ್ ಡಿಸೈನ್‌ನ ಛಾಪು ಎದ್ದು ಕಾಣುತ್ತದೆ.

 

ಸಾಣೆ ಹಿಡಿಯದ ಚಿಕ್ಕ ದೊಡ್ಡ ಗಾತ್ರದ ವಜ್ರಗಳು, ಪಚ್ಚೆ ಮತ್ತು ಇತರ ಅಮೂಲ್ಯ ಹರಳುಗಳನ್ನು ಅಚ್ಚುಕಟ್ಟಾಗಿ ಆಕರ್ಷಕವಾಗಿ ಕಾಣುವಂತೆ ಅಳವಡಿಸಲಾಗಿದೆ. ಬಗೆಬಗೆಯ ಶೈಲಿ, ಆಕಾರಗಳು ಅಂದ ನೂರ್ಮಡಿಸಿವೆ.ಹೀಗಾಗಿಯೇ ಇವನ್ನು ಧರಿಸಿದಾಗ ಕಣ್ಣು ಕೋರೈಸುತ್ತವೆ. ಎಂಥವರನ್ನೂ ತಮ್ಮತ್ತ ಸೆಳೆಯುವಷ್ಟು ಮೋಹಕವಾಗಿವೆ. ವಿನ್ಯಾಸ, ಸೂಕ್ಷ್ಮ ಕುಸುರಿ, ಸೃಜನಶೀಲತೆಯ ಎರಕ ಇವು. ಈ ಸಂಗ್ರಹದ ಅನೇಕ ಆಭರಣಗಳ ಹಿಂಭಾಗದಲ್ಲಿ ಮೀನಾಕಾರಿ ಕಲೆ ಇರುವುದರಿಂದ ಎರಡೂ ಕಡೆಯೂ ಧರಿಸಬಹುದು.ಭಾರತೀಯ ಜೀವನ ವಿಧಾನದಲ್ಲಿ ಮದುವೆ ಅತ್ಯಂತ ಮಹತ್ವದ ಘಟ್ಟ. ಆ ಸಂದರ್ಭದಲ್ಲಿ ವಧು ಸರ್ವಾಲಂಕರಣ ಭೂಷಿತೆಯಾಗಿ ಎಲ್ಲರಿಗಿಂತ ಹೆಚ್ಚು ಗಮನ ಸೆಳೆಯಬೇಕು. ಅದಕ್ಕೆ ಪೂರಕವಾಗಿ ವಧು ಸಂಗ್ರಹ ವಿನ್ಯಾಸಗೊಂಡಿದೆ ಎನ್ನುತ್ತದೆ ಆಮ್ರಪಾಲಿ.ನೆಕ್‌ಲೇಸ್, ಟೀಕಾ, ಕಿವಿಯೋಲೆ, ಬೈತಲೆ ಬೊಟ್ಟು, ಸೊಂಟಪಟ್ಟಿ, ತೋಳಬಂದಿ ಸೇರಿದಂತೆ ಸುಮಾರು 100 ಡಿಸೈನ್‌ಗಳ ಈ ಸಂಗ್ರಹಗಳು ಈಗ ಬೆಂಗಳೂರಿನ ಗ್ರಾಹಕರಿಗೂ ಲಭ್ಯ. ಅವರವರ ಪರ್ಸ್ ಸಾಮರ್ಥ್ಯಕ್ಕೆ ತಕ್ಕಂತೆ ಗರಿಷ್ಠ 30 ಲಕ್ಷ ರೂ ಬೆಲೆ ವರೆಗಿನ ಆಭರಣಗಳು ಇದರಲ್ಲಿವೆ.ಆಮ್ರಪಾಲಿ ಲಗ್ಷುರಿ ಬ್ರಾಂಡ್‌ನ ಈ ಆಭರಣಗಳನ್ನು ಕಸ್ತೂರಬಾ ರಸ್ತೆ ಮಳಿಗೆಯಲ್ಲಿ (ಜುವೆಲ್ ಡಿ ಪ್ಯಾರಾಗಾನ್ ಪಕ್ಕ) ನೋಡಬಹುದು. ಮನಕ್ಕೊಪ್ಪಿದರೆ ಕೊಳ್ಳಬಹುದು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.