ಭಾನುವಾರ, ಜೂನ್ 13, 2021
25 °C

ಆರೋಗ್ಯ ಕೇಂದ್ರದ ಸಮಸ್ಯೆ: ಶಾಸಕರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶನಿವಾರ ಭೇಟಿ ನೀಡಿದ್ದ ಶಾಸಕ ಕೆ.ವೆಂಕಟಸ್ವಾಮಿ ಅವರಿಗೆ ಆಸ್ಪತ್ರೆ ಸಮಸ್ಯೆಗಳನ್ನು ಪರಿಹರಿಸುವಂತೆ ಸಾರ್ವಜನಿಕರು ಮನವಿ ಸಲ್ಲಿಸಿದರು.  ಆರೋಗ್ಯ ಕೇಂದ್ರ ಪ್ರಾರಂಭವಾಗಿ 6 ತಿಂಗಳು ಕಳೆದರೂ ಅಗತ್ಯ ವೈದ್ಯರು, ದಾದಿಯರು ಮತ್ತು ಇತರೆ ಸಿಬ್ಬಂದಿಯ ನೇಮಕ ನಡೆದಿಲ್ಲ. ವೈದ್ಯಕೀಯ ಉಪಕರಣಗಳು ಇಲ್ಲದ ಕಾರಣ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸೂಕ್ತ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದರು.ಸಮುದಾಯ ಆರೋಗ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ತಿಮ್ಮಾರೆಡ್ಡಿ ಅವರ ಬಳಿ ಶಾಸಕರು ಸಮಸ್ಯೆಗಳ ಕುರಿತು ಚರ್ಚಿಸಿದರು.  ವಿಜಯಪುರದ ಆರೋಗ್ಯ ಕೇಂದ್ರವು 30 ಹಾಸಿಗೆ ಸಾಮರ್ಥ್ಯದ್ದಾಗಿದೆ. 5 ವೈದ್ಯರು ಕಾರ್ಯನಿರ್ವಹಿಸಬೇಕಾಗಿದ್ದು, ಇಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.  ದಾದಿಯರ 10 ಹುದ್ದೆಗಳಲ್ಲಿ  3ಕ್ಕೆ ಮಾತ್ರ ನೇಮಕ ಮಾಡಲಾಗಿದೆ. 12 ಮಂದಿ ಗ್ರೂಪ್ ಡಿ ನೌಕರರು ಕಾರ್ಯನಿರ್ವಹಿಸಬೇಕಾಗಿದ್ದು, ಮೂರು ಮಂದಿ ಮಾತ್ರ ಸೇವೆಯಲ್ಲಿದ್ದಾರೆ. ರಾಜ್ಯದಲ್ಲಿ ಇದೀಗ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಕೆಲವು ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.ಆಸ್ಪತ್ರೆಯಲ್ಲಿ ಇಬ್ಬರು ಮಹಿಳಾ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, 24 ತಾಸುಗಳು ಸೇವೆ ಮಾಡುತ್ತಿದ್ದಾರೆ. ಆಸ್ಪತ್ರೆಯು ಪಟ್ಟಣದಿಂದ 2 ಕಿ.ಮೀ. ದೂರದಲ್ಲಿರುವುದರಿಂದ ವೈದ್ಯರು ರಾತ್ರಿ ಸಮಯದಲ್ಲಿ  ಕಾರ್ಯ ನಿರ್ವಹಿಸಲು ರಕ್ಷಣೆ ಇಲ್ಲ ಎಂದು ಮಾಹಿತಿ ನೀಡಿದರು.ಮುಖಂಡ ಬೈರಾಪುರ ರಾಜಣ್ಣ ಮಾತನಾಡಿ,  ವಿಜಯಪುರ ಪಟ್ಟಣಕ್ಕೆ ಹೊಂದಿಕೊಂಡಂತೆ ಶಿಡ್ಲಘಟ್ಟ ತಾಲ್ಲೂಕಿನ ಸುಮಾರು 25 ರಿಂದ 30 ಹಳ್ಳಿಗಳಿದ್ದು, ಒಟ್ಟು ಆಸ್ಪತ್ರೆ ವಲಯದಲ್ಲಿ 250 ಹಳ್ಳಿಗಳು  ಸೇರುತ್ತವೆ.  ಆದ್ದರಿಂದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಎಂದು ಆಗ್ರಹಿಸಿದರು.ಶಾಸಕರ ಭರವಸೆ: ಆಸ್ಪತ್ರೆಯ ಸಮಸ್ಯೆಗಳ ಮಾಹಿತಿ ಪಡೆದ ಶಾಸಕರು, ಈ ಬಗ್ಗೆ ಆಯುಕ್ತರು ಮತ್ತು ಸಚಿವರೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಕೂಡಲೇ ಆಸ್ಪತ್ರೆಯ ಸಲಹಾ ಸಮಿತಿಯನ್ನು ಪುನರ್ ರಚಿಸಲು ಹೇಳಿದರು. ಇದಕ್ಕೂ ಮುನ್ನ ಪಟ್ಟಣದ 5,6,7,8 ಮತ್ತು 11ನೇ ವಾರ್ಡ್‌ಗಳಿಗೆ  ಪುರಸಭಾ ಮುಖ್ಯಾಧಿಕಾರಿ   ಮತ್ತು ಸದಸ್ಯರೊಂದಿಗೆ ಭೇಟಿ ನೀಡಿದ ಶಾಸಕರು ಇಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.ನಾಳೆ ಭೇಟಿ: ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಪಟ್ಟಣದ 12, 13, 14 ಮತ್ತು 15 ನೇ ವಾರ್ಡ್‌ಗಳಲ್ಲಿ ಶಾಸಕರು ಭೇಟಿ ನೀಡುವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.