ಬುಧವಾರ, ಜನವರಿ 22, 2020
25 °C
ಮೊಳಕಾಲ್ಮುರು ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆ

ಆರೋಗ್ಯ ರಕ್ಷಾ ಸಮಿತಿ ಸಭೆ ಕರೆಯಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು: ಸಾರ್ವಜನಿಕ ಆಸ್ಪತ್ರೆ ಆರೋಗ್ಯರಕ್ಷಾ ಸಮಿತಿ ಸಭೆಯನ್ನು ತಕ್ಷಣವೇ ಕರೆಯಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಶ್ರೀಕಾಂತರೆಡ್ಡಿ ಸೂಚಿಸಿದರು.ಗುರುವಾರ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಕ್ಷಾ ಸಮಿತಿ ಸಭೆಯನ್ನು ಬಹುದಿನಗಳಿಂದ ಕರೆಯದೇ ಇರುವ ಕಾರಣ ಆರೋಗ್ಯ ಇಲಾಖೆ ಮಾಹಿತಿ ಪಡೆಯಲು ಹಾಗೂ ಸಮಸ್ಯೆ ತಿಳಿದುಕೊಳ್ಳಲು ಅಡ್ಡಿಯಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ. ತುಳಸಿ ರಂಗನಾಥ್‌ ಡಿ. 20ರ ಒಳಗಾಗಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.ತಾಲ್ಲೂಕಿನ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಯಾವುದೇ ಕಾರಣಕ್ಕೂ ಹಿರಿಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ನಿಯೋಜನೆ ಮಾಡಬಾರದು. ಈ ಬಗ್ಗೆ ತಾಲ್ಲೂಕು ಪಂಚಾಯ್ತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷರು ಹೇಳಿದರು.ತಾಲ್ಲೂಕಿನಲ್ಲಿ ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರದವರು ಸುವರ್ಣಗ್ರಾಮ ಯೋಜನೆ ಸೇರಿದಂತೆ ಕೋಟ್ಯಂತರ ಮೊತ್ತದ ಕಾಮಗಾರಿ ಮಾಡುತ್ತಾರೆ. ಆದರೆ, ಎಷ್ಟೇ ನೋಟಿಸ್ ಜಾರಿ ಮಾಡಿದರೂ ಇಲಾಖೆ ಅಧಿಕಾರಿ ಗಳು ತಾಲ್ಲೂಕು ಪಂಚಾಯ್ತಿ ಸಭೆಗಳಿಗೆ ಬಂದು ಮಾಹಿತಿ ನೀಡುತ್ತಿಲ್ಲ. ಹೀಗಾಗಿ, ಯೋಜನೆಗಳ ಅನುಷ್ಠಾನ, ಪ್ರಗತಿ ಕುರಿತು ಮಾಹಿತಿ ಸಿಗುತ್ತಿಲ್ಲ ಎಂದು ಇಒ ರುದ್ರಮುನಿಯಪ್ಪ ಹೇಳಿದರು.ಜಿಲ್ಲಾ ಪಂಚಾಯ್ತಿ ಕಾರ್ಯಪಾಲಕ ಎಂಜಿನಿಯರ್‌ ವೆಂಕಟರಮಣಪ್ಪ ಮಾಹಿತಿ ನೀಡಿ, ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿದರೆ ಒಂದೆರಡು ದಿನಗಳಲ್ಲಿ ಬತ್ತಿ ಹೋಗುತ್ತಿವೆ. ಆದ್ದರಿಂದ ಕೈಪಂಪ್‌ ಬಳಸುವ ಮೂಲಕ ಸಮಸ್ಯೆ ತಿಳಿಗೊಳಿಸಲು ಸಾಧ್ಯ ಎಂದರು.ಸಾಮಾಜಿಕ ಅರಣ್ಯಾಧಿಕಾರಿಯು ಉದ್ಯೋಗಖಾತ್ರಿ ಯೋಜನೆ ಅನುಷ್ಠಾನ ಬಗ್ಗೆ ನೀಡಿದ ಉತ್ತರಕ್ಕೆ ಬೇಸರಗೊಂಡ ಅಧ್ಯಕ್ಷರು ಹಾಗೂ ಇಒ, ‘ಈ ವರ್ಷ ಅಂದಾಜು ರೂ 3 ಕೋಟಿ ಅನುದಾನವನ್ನು ವಲಯ ಅರಣ್ಯ ವ್ಯಾಪ್ತಿಗೆ ನೀಡಲಾಗಿದೆ.ಅನುಷ್ಠಾನ ಅಧಿಕಾರಿಯಾಗಿರುವ ನೀವು, ಕೇವಲ ಕ್ರಿಯಾಯೋಜನೆ ಸಿದ್ಧಪಡಿಸುವ ಕೆಲಸವಷ್ಟೇ ಉಳಿದಿದ್ದು, ನನಗೆ ಸಂಬಂಧವಿಲ್ಲ. ನನಗೆ ಬೇರೆ ಕೆಲಸವಿರುತ್ತದೆ ಎಂದು ಹೇಳುತ್ತೀರಿ. ಇಂತಹ ಉದ್ಧಟತನ ತೋರಿದಲ್ಲಿ ಜಿಲ್ಲಾಪಂಚಾಯ್ತಿಗೆ ವರದಿ ಮಾಡಲಾಗುವುದು’ ಎಂದು ಖಾರವಾಗಿ ಹೇಳಿದರು.ಬಾಂಡ್ರಾವಿ, ಮೇಗಳಕಣಿವೆ ಮುಂತಾದ ಕಡೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವುದಿಲ್ಲ. ಮುಂಚಿತವಾಗಿ ಮುಚ್ಚಲಾಗುತ್ತಿದೆ. ಸಮಸ್ಯೆ ಇರುವ ಶಾಲೆಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಬಿಇಒಗೆ ಸೂಚಿಸಿದರು.ಈ ವರ್ಷ ತಾಲ್ಲೂಕಿನಲ್ಲಿ 78 ಸಾವಿರ ಕೆಜಿ ಬಿಳಿಗೂಡು ರೇಷ್ಮೆ ಉತ್ಪಾದಿಸುವ ಮೂಲಕ ದಾಖಲೆ ಮಾಡಲಾಗಿದೆ. ಈ ಪ್ರಮಾಣ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಒಟ್ಟು ಬಿಳಿಗೂಡಿನ ಶೇ 70ರಷ್ಟು ಆಗಿದೆ. 30 ಸಾವಿರ ಬಿಳಿಗೂಡಿಗೆ ಸರ್ಕಾರ ಪ್ರೋತ್ಸಾಹಧನ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಪಶು ಅಧಿಕಾರಿ ಡಾ.ಬೊಮ್ಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಚಿದಾನಂದ ಉಪಸ್ಥಿತರಿದ್ದರು.ಪುಸ್ತಕ ನೀಡಲು ಕ್ರಮ

ಆದರ್ಶ ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಆಗಿರುವ ಪಠ್ಯಪುಸ್ತಕ ಕೊರತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಗುರುವಾರವೇ ಪುಸ್ತಕ ಖರೀದಿಗೆ ಕಳುಹಿಸಿಕೊಡಲಾಗಿದೆ. ಒಂದೆರಡು ದಿನಗಳಲ್ಲಿ ನೀಡಲಾಗುವುದು ಎಂದು ಬಿಇಒ ಅಬ್ದುಲ್‌ ಬಷೀರ್‌ ಹೇಳಿದರು.ಪಠ್ಯಪುಸ್ತಕ ನೀಡದಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಗುರುವಾರ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿಕ್ರಿಯಿಸಿ (+)