ಗುರುವಾರ , ಫೆಬ್ರವರಿ 25, 2021
24 °C

ಆರೋಪಿಗಳ ಪಾಲಿಗೆ ‘ಅಚ್ಛೇ ದಿನ್’: ದಿಗ್ವಿಜಯ್ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರೋಪಿಗಳ ಪಾಲಿಗೆ ‘ಅಚ್ಛೇ ದಿನ್’: ದಿಗ್ವಿಜಯ್ ವ್ಯಂಗ್ಯ

ನವದೆಹಲಿ (ಪಿಟಿಐ): ಲಲಿತ್ ಮೋದಿ ಅವರ ವೀಸಾ ನೆರವು ವಿವಾದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ಪಾಲಿಗೆ ‘ಸುದಿನಗಳು’ (ಅಚ್ಛೇ ದಿನ್) ಬಂದಿವೆ ಎಂದು ಅಣಕವಾಡಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ‘ನಕಲಿ ಎನ್‌ಕೌಂಟರ್‌, ಹಣಲೇವಾದೇವಿ ಪ್ರಕರಣಗಳ ಅಮಿತ್ ಷಾ, ರಾಮದೇವ್‌ ಅವರಿಂದ ಹಿಡಿದು ಲಲಿತ್‌ ಮೋದಿವರೆಗೂ ಎಲ್ಲಾ ಆರೋಪಿಗಳಿಗೆ ಸುದಿನಗಳು ಬಂದಿವೆ’ ಎಂದು ವ್ಯಂಗ್ಯವಾಡಿದ್ದಾರೆ.

ರಾಜೀನಾಮೆಗೆ ಮನವಿ!: ಇನ್ನು, ಲಲಿತ್ ಮೋದಿ ಅವರ ವೀಸಾ ನೆರವು ವಿವಾದದಲ್ಲಿ ಸಿಲುಕಿರುವ ಸುಷ್ಮಾ ಸ್ವರಾಜ್ ಅವರ ಬಗ್ಗೆ ‘ಅನುಕಂಪ’ದ ಮಾತುಗಳನ್ನಾಡಿರುವ ದಿಗ್ವಿಜಯ್‌, ‘ಸುಷ್ಮಾಜಿ ಅವರ ಬಗ್ಗೆ ನನಗೆ ಗೌರವವಿದೆ. ಆದರೆ, ಆರೋಪಿಯೊಬ್ಬನಿಗೆ ನೆರವಾಗಲು ಅವರು ಮಧ್ಯ ಪ್ರವೇಶಿಸುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ!. ಸುಷ್ಮಾ ಅವರು ಬಿಜೆಪಿ ಪಕ್ಷದೊಳಗಿನ ಆಂತರಿಕ ಸಮರದ ಬಲಿಪಶು ಆಗಿರಬಹುದು. ಆದರೆ, ವಿಷಯ ಇದೀಗ ಸಾರ್ವಜನಿಕ ರಂಗಕ್ಕೆ ಬಂದಾಗಿದೆ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ನಾನು ಕೋರುತ್ತೇನೆ’ ಎಂದು ಅವರು ಟ್ವೀಟಿಸಿದ್ದಾರೆ.

ಅಲ್ಲದೇ, ‘ಸ್ಕಾಟ್ಲೆಂಡ್‌ನಲ್ಲಿ ಆಸ್ತಿ ಖರೀದಿಸಿದಕ್ಕಾಗಿ ರಾಮದೇವ್ ಹಾಗೂ ಬಾಲಕೃಷ್ಣ ಅವರೂ ಕೂಡ ಹಣಲೇವಾದೇವಿ ಆರೋಪದಡಿ ಜಾರಿ ನಿರ್ದೇಶನಾಲದ ತನಿಖೆ ಎದುರಿಸುತ್ತಿದ್ದಾರೆ. ಈ ಪ್ರಕರಣವೂ ಸಮಾಪ್ತಿಯಾಗಬಹುದು’ ಎಂದು ಕಟಕಿಯಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.