ಸೋಮವಾರ, ಮೇ 17, 2021
21 °C

ಆರೋಪಿಗಳ ವಿರುದ್ಧ ಇಲಾಖಾ ತನಿಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಅರಕಲಗೂಡು ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರದ ತನಿಖೆ ಈಗ ಅಂತಿಮ ಘಟ್ಟ ಸಮೀಪಿಸುತ್ತಿದ್ದು, ಒಟ್ಟಾರೆ 38 ಅಧಿಕಾರಿಗಳಿಗೆ ಈಗಾಗಲೇ ಅಮಾನತು ಆದೇಶ ನೀಡಲಾಗಿದೆ.ಕಳೆದ ತಿಂಗಳ 30ರಂದು 16 ಮಂದಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಎಂಟು ಮಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿ 29 ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರೆ, ಗುರುವಾರ (ಸೆ.8) ಇನ್ನೂ ಒಂಬತ್ತು ಮಂದಿಯನ್ನು ಅಮಾನತು ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಈ ಅಧಿಕಾರಿಗಳು ದುರ್ಬಳಕೆ ಮಾಡಿರುವುದರಿಂದ  ಮತ್ತು ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರು ದಾಖಲೆಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಇವರನ್ನು ಅಮಾನತು ಮಾಡಲು ಆದೇಶ ನೀಡಲಾಗಿದೆ.ಅಕ್ರಮದ ಆರೋಪ, ಪ್ರತ್ಯಾರೋಪಗಳು ಬಂದು ಒಂದು ಹಂತದ ತನಿಖೆಯಾಗಿ ಸಾಕಷ್ಟು ದಿನಗಳು ಕಳೆದ ನಂತರ ಜಿಲ್ಲಾ ಪಂಚಾಯಿತಿ ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ.ಅರಕಲಗೂಡು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಹಲವು ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಿಸಿ, ತನಿಖೆಗೆ ಆಗ್ರಹಿಸಿದ್ದರು. ಆದರೆ ಆ ಬಗ್ಗೆ ಯಾವುದೇ ಕ್ರಮ ನಡೆಯದಿರುವುದರಿಂದ ಅವರು ವಿಧಾನಸೌಧದಲ್ಲಿ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಚಿವರ ಗಮನ ಸೆಳೆದರು. ಅಲ್ಲಿಂದ ತನಿಖೆ ಆರಂಭವಾಗಿತ್ತು.ಆದರೆ ಒಂದು ಹಂತಕ್ಕೆ ಬಂದು ತನಿಖೆ ನಿಂತಿದ್ದರಿಂದ ರಾಮಸ್ವಾಮಿ ಮತ್ತೆ ಪ್ರತಿಭಟನೆಗೆ ಇಳಿದು ಜಿ.ಪಂ. ಸಿಇಓ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೊನೆಗೆ ತನಿಖೆ ಚುರುಕುಗೊಂಡು ಹಲವು ಅಧಿಕಾರಿಗಳು ಮಾತ್ರವಲ್ಲದೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರೂ ತಪ್ಪಿತಸ್ಥರೆಂದು ಪರಿಗಣಿಸಿ ಹಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು. ದೂರು ದಾಖಲಾಗಿದ್ದರೂ ಅಧಿಕಾರಿಗಳ ಬಂಧನವಾಗಲಿ, ಅಮಾನತಾಗಲಿ ಆಗಿರಲಿಲ್ಲ. ಈಗ ಜಿ.ಪಂ. ಕ್ರಮ ಆರಂಭಿಸಿದೆ. ಇಲಾಖೆ ತನಿಖೆ: `ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಒಂದು ಕಡೆ ಪೊಲೀಸರು ತನಿಖೆ ನಡೆಸುತ್ತಿದ್ದರೆ, ಇನ್ನೊಂದೆಡೆ ಜಿಲ್ಲಾ ಪಂಚಾಯಿತಿ ಇಲಾಖಾ ತನಿಖೆಯನ್ನೂ ಆರಂಭಿಸಿದೆ. ಒಂದೆರಡು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸಿ ವರದಿ ನೀಡಲಾಗುವುದು. ಇದಾದ ಬಳಿಕ ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು~ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಂಜನ್  ಕುಮಾರ್ ತಿಳಿಸಿದ್ದಾರೆ.

ಬೇರೆಬೇರೆ ಇಲಾಖೆಯ ಹಲವು ಅಧಿಕಾರಿಗಳನ್ನು ತನಿಖೆಗೆ ನೇಮಕ ಮಾಡಿದ್ದೇವೆ. ಪ್ರತಿಯೊಬ್ಬ ಅಧಿಕಾರಿಯೂ ಮೂರು - ನಾಲ್ಕು ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.`ತಾಲ್ಲೂಕಿನಲ್ಲಿ ಅಕ್ರಮ ನಡೆದಿರುವುದು ನಿಜ. ಆದರೆ ಎಲ್ಲ ಕಡೆ ಹಣ ದುರುಪಯೋಗವಾಗಿದೆ ಎಂದು ಹೇಳುವಂತಿಲ್ಲ. ಕೆಲವೆಡೆ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದಿರುವುದರಿಂದ ಆ ಹಣದ ಲೆಕ್ಕ ಸಿಗುತ್ತಿಲ್ಲ. ಇನ್ನೂ ಕೆಲವು ಕಡೆ ಕೆಲಸ ಮಾಡುವ ಕ್ರಮವನ್ನು ಸರಿಯಾಗಿ ಪಾಲಿಸಿಲ್ಲ. ಇದರಿಂದಾಗಿ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ತನಿಖೆ ಆದರೆ ಎಷ್ಟು ಹಣ ದುರ್ಬಳಕೆಯಾಗಿದೆ ಎಂಬುದು  ನಿಖರವಾಗಿ ತಿಳಿಯುತ್ತದೆ~ ಎಂದು ಅವರು ತಿಳಿಸಿದರು.ಸರ್ಕಾರವೇ ನೇಮಕ ಮಾಡಿರುವ ಮೂರನೇ ಸಂಸ್ಥೆಯೊಂದು ಪ್ರಕರಣದ ತನಿಖೆ ನಡೆಸುತ್ತಿದ್ದು, ಈ ಸಮಿತಿ ಈಗಾಗಲೇ ವಿವಿಧ ಗ್ರಾ.ಪಂ.ಗಳಿಂದ 8.36 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಸೂಚನೆ ನೀಡಿದೆ. ಇತ್ತ ಇಲಾಖಾ ತನಿಖೆಯನ್ನೂ ಆರಂಭಿಸಿದ ಜಿಲ್ಲಾ ಪಂಚಾಯಿತಿ ಎರಡು ತಿಂಗಳೊಳಗೆ ಅದನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.