ಶುಕ್ರವಾರ, ಮೇ 14, 2021
30 °C

ಆರೋಪ ಪಟ್ಟಿ ಪರಿಶೀಲಿಸಲು ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಸಲ್ಲಿಸುವ ಆರೋಪ ಪಟ್ಟಿಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಅದರಲ್ಲಿ ತಪ್ಪು ಕಂಡುಬಂದರೆ ಸರಿಪಡಿಸಬೇಕು. ತನಿಖೆಯನ್ನು ಮನಸೋ ಇಚ್ಛೆ ಮಾಡುವಂತಿಲ್ಲ' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್ ಅವರಿಗೆ ಹೈಕೋರ್ಟ್ ಶುಕ್ರವಾರ ತಾಕೀತು ಮಾಡಿದೆ.ಮಂಡ್ಯ ಜಿಲ್ಲೆಯಲ್ಲಿ ನಡೆದ, ದಲಿತ ಸಮುದಾಯಕ್ಕೆ ಸೇರಿದ ಸಿದ್ದಯ್ಯ ಎಂಬುವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೆ. ಶ್ರೀಧರ ರಾವ್ ಮತ್ತು ನ್ಯಾಯಮೂರ್ತಿ ಎಚ್.ಬಿಳ್ಳಪ್ಪ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ತನಿಖೆಯಲ್ಲಿ ಅಸಂಗತ ವಿಚಾರಗಳು, ಲೋಪಗಳು ನುಸುಳಬಾರದು' ಎಂದು ಹೇಳಿದೆ.ಸಿದ್ದಯ್ಯ ಅವರನ್ನು ಗುರುಲಿಂಗಪ್ಪ ಎಂಬುವರು ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕೃತ್ಯಕ್ಕೆ ಸಿದ್ದಯ್ಯ ಅವರ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, `ವಿಧಿ ವಿಜ್ಞಾನ ಪ್ರಯೋಗಾಲಯ ನೀಡುವ ವರದಿ, ಶವ ಮಹಜರು ವರದಿ ಮತ್ತು ಅಪರಾಧಿಗಳನ್ನು ಗುರುತಿಸಲು ನಡೆಸುವ ಕವಾಯತುಗಳು ಕರಾರುವಾಕ್ ಆಗಿರಬೇಕು' ಎಂದು ನ್ಯಾಯಪೀಠ ಹೇಳಿತು.`ಅಪರಾಧ ನಡೆದ ನಂತರ ಸಾಕ್ಷ್ಯಗಳ ಹೇಳಿಕೆ ಸಂಗ್ರಹಿಸುವಲ್ಲಿ ವಿಳಂಬ ಆಗುತ್ತಿರುವುದುನ್ನು ನಾವು ಗಮನಿಸಿದ್ದೇವೆ. ಇದು ಸರಿಯಲ್ಲ. ತಕ್ಷಣವೇ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಕಾರ್ಯ ಆಗಬೇಕು. ವಿಳಂಬ ಆದರೆ ಅದಕ್ಕೆ ಕಾರಣ ನೀಡಬೇಕು' ಎಂದು ಪೀಠ ನಿರ್ದೇಶನ ನೀಡಿತು.`ಹಿಂದೆಯೂ ನಾವು ಇದೇ ಮಾದರಿಯ ನಿರ್ದೇಶನಗಳನ್ನು ನೀಡಿದ್ದೆವು. ಆದರೆ ಅವುಗಳ ಅನುಷ್ಠಾನಕ್ಕೆ ಏನು ಕ್ರಮ ಕೈಗೊಂಡಿದ್ದೀರಿ?' ಎಂದು ಪೀಠ ಪ್ರಶ್ನಿಸಿತು. `ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಮತ್ತು ಆರೋಪ ಪಟ್ಟಿಯಲ್ಲಿ ಯಾವುದೇ ವ್ಯತ್ಯಾಸ ಇರಬಾರದು ಎಂದು ಕೆಳ ಹಂತದ ಅಧಿಕಾರಿಗಳಿಗೆ ಸೂಚನೆ ನೀಡಿ' ಎಂದು ಪಚಾವ್ ಅವರಿಗೆ ಪೀಠ ಹೇಳಿತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ಜಿ. ಜ್ಯೋತಿಪ್ರಕಾಶ್ ಮಿರ್ಜಿ ಅವರೂ ನ್ಯಾಯಾಲಯದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.