ಶನಿವಾರ, ಏಪ್ರಿಲ್ 17, 2021
33 °C

ಆರ್ಥಿಕ ಮೂಲ ಅಂಶಗಳು ಬಲಿಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ದೇಶದ ಆರ್ಥಿಕ ಪ್ರಗತಿಯ ಮುನ್ನೋಟವನ್ನು ಜಾಗತಿಕ ರೇಟಿಂಗ್ ಸಂಸ್ಥೆ ತಗ್ಗಿಸಿ ಪ್ರಕಟಿಸಿರುವ ವರದಿ ಕಳವಳಕಾರಿಯಾಗಿದೆ~ ಎಂದು ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, `ನಮ್ಮ ಆರ್ಥಿಕ ವ್ಯವಸ್ಥೆಯ ಮೂಲ ಅಂಶಗಳು ಬಹಳ ಬಲಿಷ್ಠವಾಗಿಯೇ ಇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.`ಈ ಬಗೆಯ ಮುನ್ನೋಟ ವರದಿ ಬಂದಿರುವುದು ಕಳವಳಕಾರಿ ಸಂಗತಿಯೇ. ಆದರೆ, ಖಾಸಗಿ ಸಂಸ್ಥೆಯೊಂದು ನೀಡುವ ಇಂತಹ ನಿರಾಧಾರದ ರೇಟಿಂಗ್ ಪರಿಗಣಿಸಿ ದೇಶದ ಆರ್ಥಿಕ ಪ್ರಗತಿ ಗತಿಯನ್ನು ವಿಶ್ಲೇಷಿಸಲು ಸಾಧ್ಯವಿಲ್ಲ. ಪ್ರತಿಕೂಲ ಸಂಗತಿಗಳ ನಡುವೆಯೂ ಕಳೆದ ಹಣಕಾಸು ವರ್ಷದಲ್ಲಿ ಶೇ 6.5ರಷ್ಟು `ಜಿಡಿಪಿ~ ದಾಖಲಿಸಿದ್ದೇವೆ~ ಎಂದು ಅವರು `ಮೂಡೀಸ್~ ರೇಟಿಂಗ್ ಕುರಿತು ಶನಿವಾರ ಇಲ್ಲಿ ಪ್ರತಿಕ್ರಿಯಿಸಿದ್ದಾರೆ.`ಜಾಗತಿಕ ಆರ್ಥಿಕ ಅಸ್ಥಿರತೆ~ ಹಿನ್ನೆಲೆಯಲ್ಲಿ ಮೂಡೀಸ್ ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಪ್ರಮಾಣವನ್ನು ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಶೇ 5.5ಕ್ಕೆ ತಗ್ಗಿಸಿ ವರದಿ ಪ್ರಕಟಿಸಿದೆ.`ಪ್ರವರ್ಧಮಾನಕ್ಕೆ ಬರುತ್ತಿರುವ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿಯೇ ಇದೆ. ಹೂಡಿಕೆ ಮತ್ತು ಉಳಿತಾಯ ಕೂಡ ಗರಿಷ್ಠ ಮಟ್ಟದಲ್ಲಿವೆ. ಈ ನಿಟ್ಟಿನಲ್ಲಿ 2012-13ನೇ ಸಾಲಿನಲ್ಲಿ ಕಳೆದ ವರ್ಷಕ್ಕಿಂತಲೂ ಉತ್ತಮ `ಜಿಡಿಪಿ~ ನಿರೀಕ್ಷಿಸಬಹುದಾಗಿದೆ~ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಿರಾಕರಣೆ ಮನಸ್ಥಿತಿ: ಬಿಜೆಪಿ ಟೀಕೆ

ನವದೆಹಲಿ(ಪಿಟಿಐ): ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು `ನಿರಾಕರಣೆ ಮನಸ್ಥಿತಿ~ಯಲ್ಲಿರುವುದು ತರವಲ್ಲ ಎಂದು ಟೀಕಿಸಿರುವ ಬಿಜೆಪಿ, ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಈಗಿನ ವರದಿಯನ್ನು ಎಚ್ಚರಿಕೆ ಗಂಟೆ ಎಂದು ಪರಿಗಣಿಸುವಂತೆ ಕಿವಿಮಾತು ಹೇಳಿದೆ.`ರೋಗಿ ಚಿಕಿತ್ಸೆ ಬೇಡ ಎನ್ನುತ್ತಿದ್ದರೆ ಆತ ತನಗೆ ಕಾಯಿಲೆ ಬಂದಿರುವುದನ್ನು ಅರ್ಥ ಮಾಡಿಕೊಂಡಿಲ್ಲ ಎಂದೇ ಅರ್ಥ~ ಎಂದು ರಾಜ್ಯಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಕುಟುಕಿದ್ದಾರೆ.    ದೇಶದ ಆರ್ಥಿಕ ವ್ಯವಸ್ಥೆಯ ಮೂಲ ಅಂಶಗಳು ಬಲಿಷ್ಠವಾಗಿಯೇ ಇವೆ ಎಂದಿರುವ ಪ್ರಧಾನಿ ಹೇಳಿಕೆ ಅಚ್ಚರಿ ಉಂಟು ಮಾಡುವಂತಿದೆ ಎಂದು ಟೀಕಿಸಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.