ಮಂಗಳವಾರ, ಜನವರಿ 28, 2020
24 °C

ಆರ್‌ಎಸ್‌ಎಸ್ ತಪ್ಪು ಮಾಡಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಆರ್‌ಎಸ್‌ಎಸ್‌ಗೂ ಶ್ರೀರಾಮಸೇನೆಗೂ ಯಾವುದೇ ಸಂಬಂಧ ಇಲ್ಲ~ ಎಂದು ಹೇಳಿರುವ ಗೃಹ ಸಚಿವ ಆರ್. ಅಶೋಕ, ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ `ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಮುಖ್ಯಮಂತ್ರಿ ಜತೆ ಚರ್ಚಿಸಿ, ಸಂಸ್ಥೆಯ ನಿಷೇಧ ಕುರಿತು ನಿರ್ಧರಿಸಲಾಗುವುದು~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಸಂಘಟನೆಯ ಯಾವುದೇ ಪಾತ್ರವಿಲ್ಲ ಎಂದು ಸಚಿವರು ಹೇಳಿದರು.ಕಮಾಂಡೊ ಪಡೆ: ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ವಿರುದ್ಧದ ಕಾರ್ಯಾಚರಣೆಗೆ ವಿಶೇಷ ಕಮಾಂಡೊ ಪಡೆ ತರಬೇತಿ ಪಡೆಯುತ್ತಿದ್ದು, ಮೊದಲ ಹಂತದಲ್ಲಿ ತರಬೇತಿ ಪಡೆದ 80 ಮಂದಿಯ ಪಡೆ ನಗರದಲ್ಲಿ ಕೆಲಸ ನಿರ್ವಹಿಸುತ್ತಿದೆ. ಒಟ್ಟು 300ಕ್ಕೂ ಹೆಚ್ಚು ಮಂದಿ ಹಂತ ಹಂತವಾಗಿ ತರಬೇತಿ ಪಡೆಯಲಿದ್ದು, ಗುಲ್ಬರ್ಗ, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ನಗರಗಳಲ್ಲಿ ಈ ಪಡೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.ಪರಿಸ್ಥಿತಿ ಶಾಂತ: ಉಪ್ಪಿನಂಗಡಿಯಲ್ಲಿ ನಡೆದ ಕೋಮು ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪರಿಸ್ಥಿತಿ ಶಾಂತವಾಗಿದೆ ಎಂದು ಸಚಿವರು ಹೇಳಿದರು.  ಕಲ್ಲು ತೂರಾಟದಲ್ಲಿ ಪೊಲೀಸರು ಕೂಡ ಗಾಯಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಬಂದೋಬಸ್ತ್ ಮಾಡಲಾಗಿದೆ. ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವಿವರಿಸಿದರು.ನಗರಕ್ಕೆ ಹೈಬ್ರೀಡ್ ಬಸ್

ಡೀಸೆಲ್ ಮತ್ತು ವಿದ್ಯುತ್‌ನಿಂದ ಚಲಿಸಬಲ್ಲ `ಹೈಬ್ರೀಡ್ ಬಸ್~  ಸದ್ಯದಲ್ಲೇ ನಗರದಲ್ಲಿ ಕಾಣಿಸಿಕೊಳ್ಳಲಿದೆ. ವೋಲ್ವೊ ಸಂಸ್ಥೆ ಈ ರೀತಿಯ ಬಸ್ ತಯಾರಿಸಿದ್ದು, ಪ್ರಾಯೋಗಿಕವಾಗಿ ನಗರದಲ್ಲಿ ಸಂಚಾರಕ್ಕೆ ಬಿಡಲಿದೆ.ಬಿಎಂಟಿಸಿ ಈ ಕುರಿತು ವೋಲ್ವೊ ಜತೆ ಒಪ್ಪಂದ ಮಾಡಿಕೊಂಡಿದ್ದು, ಎರಡು ತಿಂಗಳು ಪ್ರಾಯೋಗಿಕವಾಗಿ ಸಂಚರಿಸಲಿದೆ. ಈ ಬಸ್‌ನಲ್ಲಿ 105 ಆಸನಗಳ ವ್ಯವಸ್ಥೆ ಇರುತ್ತದೆ. ಅತಿ ದೊಡ್ಡದಾದರೂ ಮಾಮೂಲಿ ಬಸ್ ಓಡಾಡುವ ರಸ್ತೆಗಳಲ್ಲಿ ಇದು ಸಂಚರಿಸಲಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.ವೋಲ್ವೊ ಸಂಸ್ಥೆ ಈ ಬಸ್ ಅನ್ನು ದೆಹಲಿಯ ವಾಹನ ವಸ್ತುಪ್ರದರ್ಶನದಲ್ಲಿ ಪ್ರದರ್ಶನಕ್ಕೆ ಇಟ್ಟಿತ್ತು. ಅದೇ ಬಸ್ ಅನ್ನು ಈಗ ನಗರಕ್ಕೆ ತರುತ್ತಿದ್ದು, ಇದರಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಇದರಿಂದ ಶೇ 30ರಷ್ಟು ಡೀಸೆಲ್ ಉಳಿತಾಯವಾಗಲಿದೆ. ಪ್ರಾಯೋಗಿಕ ಸಂಚಾರದಲ್ಲಿ ಉಪಯುಕ್ತ, ಅನುಕೂಲಕರ ಎಂದು ಗೊತ್ತಾದರೆ ನಂತರ ಬಸ್‌ಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.ಐದು ಕಡೆ  ಡಿಪೊ

ತುಮಕೂರು, ಚಳ್ಳಕೆರೆ, ಉಡುಪಿ, ಹಾಸನ ಮತ್ತು ಮೈಸೂರಿನ ವಿಜಯನಗರದಲ್ಲಿ ಹೊಸದಾಗಿ ಬಸ್ ಡಿಪೊ ಸ್ಥಾಪಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಪುತ್ತೂರಿನಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ ಹೇಳಿದರು.ಹಾಸನ ಮತ್ತು ತುಮಕೂರಿನಲ್ಲಿ ಬಸ್ ಡಿಪೊಗಳು ಇದ್ದರೂ ಹೆಚ್ಚುವರಿಯಾಗಿ ತಲಾ ಒಂದು ಡಿಪೊ ಮಂಜೂರು ಮಾಡಲಾಗಿದೆ. ಈ ಎರಡೂ ನಗರಗಳ ರಸ್ತೆಗಳಲ್ಲಿ ಬಸ್ ಸಂಚಾರ ಹೆಚ್ಚು ಇರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪುತ್ತೂರಿನಲ್ಲಿ ವಿಭಾಗೀಯ ಮಟ್ಟದ ಕಾರ್ಯಾಗಾರ ಕೂಡ ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿದರು.ದೇವನಹಳ್ಳಿಯಲ್ಲಿ ರೂ 3.6 ಕೋಟಿ ವೆಚ್ಚದಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ನಿರ್ಮಿಸುತ್ತಿದ್ದು, ಇದಕ್ಕಾಗಿ 3.24 ಎಕರೆ ಜಾಗ ಕೂಡ ಲಭ್ಯವಿದೆ ಎಂದರು. ಇದಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)