ಸೋಮವಾರ, ಮೇ 16, 2022
30 °C

ಆರ್‌ಟಿಪಿಎಸ್; ಮತ್ತೊಂದು ಘಟಕ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತೀವ್ರ ತಾಂತ್ರಿಕ ಸಮಸ್ಯೆ ಹಾಗೂ ಕಲ್ಲಿದ್ದಲು ಕೊರತೆಯಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಸ್ಥಗಿತಗೊಳ್ಳುತ್ತಿವೆ. ಸೋಮವಾರ ಒಂದನೇ ಘಟಕ ಸ್ಥಗಿತಗೊಂಡಿದೆ. ಇದರೊಂದಿಗೆ ಒಟ್ಟು 4 ಘಟಕಗಳು ಸ್ಥಗಿತಗೊಂಡಂತಾಗಿದೆ.ಆರ್‌ಟಿಪಿಎಸ್‌ಗೆ ಕಲ್ಲಿದ್ದಲು ಕೊರತೆ ತೀವ್ರ ಬಾಧಿಸುತ್ತಿದ್ದು, ಆಯಾ ದಿನ ಪೂರೈಕೆ ಆಗುವ ಕಲ್ಲಿದ್ದಲನ್ನು ಆ ದಿನಕ್ಕೆ ಮಾತ್ರ ಬಳಸಲಾಗುತ್ತಿದೆ. ಸದ್ಯ ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಸೋಮವಾರ 21 ಸಾವಿರ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್‌ನಿಂದ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡರೆ ಆರ್‌ಟಿಪಿಎಸ್‌ನ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಭೀತಿ ಆವರಿಸಿದೆ.ಸದ್ಯ 2, 5, 6 ಮತ್ತು 7ನೇ ಘಟಕಗಳು ಮಾತ್ರ ವಿದ್ಯುತ್ ಉತ್ಪಾದಿಸುತ್ತಿದ್ದು, ಕೇವಲ 600 ಮೆಗಾವಾಟ್ ಉತ್ಪಾದನೆಯಾಗುತ್ತಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ.4ನೇ ಘಟಕ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದ್ದು, ಮಂಗಳವಾರ ಬೆಳಗಿನ ಹೊತ್ತಿಗೆ ಈ ಘಟಕ ವಿದ್ಯುತ್ ಉತ್ಪಾದಿಸುವ ಸಾಧ್ಯತೆ ಇದೆ. ಈ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿದರೆ 700ರಿಂದ 750 ಮೆಗಾವಾಟ್  ವಿದ್ಯುತ್ ಉತ್ಪಾದನೆ ಸಾಧ್ಯ ಎಂದು ಮೂಲಗಳು ಹೇಳಿವೆ.ವಿದ್ಯುತ್ ಉತ್ಪಾದನೆ ಕುಂಠಿತ: ಒಂದು ವಾರದ ಹಿಂದೆ  5 ಘಟಕಗಳು  ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸಿದ್ದವು. ನಾಲ್ಕು ದಿನಗಳಿಂದ ಉತ್ಪಾದನೆಯು ತಾಂತ್ರಿಕ ಸಮಸ್ಯೆಗಳಿಂದಾಗಿ 800 ಮೆಗಾವಾಟ್‌ಗೆ ತಗ್ಗಿತ್ತು. ಈ ಮೊದಲು 3, 4 ಮತ್ತು 8ನೇ ಘಟಕ ಮಾತ್ರ ದುರಸ್ತಿಯಲ್ಲಿದ್ದವು. ಈಗ 1ನೇ ಘಟಕವೂ  ಸ್ಥಗಿತಗೊಂಡಿರುವುದರಿಂದ  ನಾಲ್ಕು ಘಟಕಗಳು ಸ್ಥಗಿತವಾದಂತಾಗಿದೆ.ಕಲ್ಲಿದ್ದಲು ಕೊರತೆ: ಆರ್‌ಟಿಪಿಎಸ್ ಘಟಕಗಳಿಗೆ ಕಲ್ಲಿದ್ದಲು ಕೊರತೆ ತೀವ್ರ ಬಾಧಿಸುತ್ತಿದ್ದು, ಆರ್‌ಟಿಪಿಎಸ್ ಸ್ಥಾವರದ ಆವರಣದಲ್ಲಿರುವ ಕಲ್ಲಿದ್ದಲು ಸಂಗ್ರಹಾಗಾರದಲ್ಲಿದ್ದ ಬೂದಿ, ಕಸಕಡ್ಡಿ, ದೊಡ್ಡ ಗಾತ್ರದ ಕಲ್ಲು, ಬಳಕೆಗೆ ಯೋಗ್ಯವಲ್ಲ ಎಂದು ಹಾಗೆಯೇ ಬಿಟ್ಟಿದ್ದ ತೋಯ್ದ ಕಲ್ಲಿದ್ದಲನ್ನು ಒಟ್ಟುಗೂಡಿಸಿ ಆರ್‌ಟಿಪಿಎಸ್ ಘಟಕಗಳಿಗೆ ಸಾಗಿಸಲಾಯಿತು. ಒಂದನೇ ಘಟಕ ಸ್ಥಗಿತಕ್ಕೆ ತಾಂತ್ರಿಕ ಸಮಸ್ಯೆ ಎಂಬುದಕ್ಕಿಂತ ಕಲ್ಲಿದ್ದಲು ಕೊರತೆಯೇ ಮುಖ್ಯ ಕಾರಣವಾಗಿದೆ ಎಂದು ತಿಳಿದಿದೆ.ಆರು ರೇಕ್ ಕಲ್ಲಿದ್ದಲು ಪೂರೈಕೆ: ಸೋಮವಾರ ಆರು ರೇಕ್ (ಪ್ರತಿ ರೇಕ್‌ನಲ್ಲಿ 3,500 ಮೆಟ್ರಿಕ್ ಟನ್) ಕಲ್ಲಿದ್ದಲು ಮಹಾರಾಷ್ಟ್ರದ ವೆಸ್ಟ್ ಕೋಲ್ ಮೈನ್‌ನಿಂದ ಪೂರೈಕೆ ಆಗಿದೆ. ಆರು ರೇಕ್ ಕಲ್ಲಿದ್ದಲು ಎಂದರೆ 21,000 ಮೆಟ್ರಿಕ್ ಟನ್ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.