ಭಾನುವಾರ, ಜೂನ್ 20, 2021
29 °C

ಆಲಭುಜನಹಳ್ಳಿ: ಸಮಸ್ಯೆಗಳ ದಶಾವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀನಗರ: ಭಾರತೀನಗರಕ್ಕೆ ಸಮೀಪವಿರುವ ಆಲಭುಜನಹಳ್ಳಿ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ರಾಜ್ಯದ ಉತ್ತಮ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಇರುವ ಅಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಸೇರಿದೆ.ಇಲ್ಲಿ 295 ಕುಟುಂಬಗಳಿದ್ದು, 1458 ಜನಸಂಖ್ಯೆ ಇದೆ. ಇದರಲ್ಲಿ 729 ಪುರುಷರು; 729 ಮಹಿಳೆಯರು ಇರುವುದು ವಿಶೇಷವಾಗಿದೆ! (2011ರ ಜನಗಣತಿ ಪ್ರಕಾರ). ಒಟ್ಟು 857 ಮಂದಿ ಅಕ್ಷರಸ್ಥರಿದ್ದು, ಇವರಲ್ಲಿ 480 ಪುರುಷರು, 377 ಮಹಿಳೆಯರಿದ್ದಾರೆ. 3 ಮಂದಿ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ.ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಗ್ರಾಮದ ಮುಖ್ಯರಸ್ತೆ ಸೇರಿದಂತೆ ಒಂದೆರಡು ರಸ್ತೆ ಬಿಟ್ಟರೆ ಉಳಿದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮುಖ್ಯ ರಸ್ತೆಯ ಒಂದು ಬದಿ ಆಳೆತ್ತರ ಗುಂಡಿಗಳಿದ್ದು, ಸಾರ್ವಜನಿಕರು ಅವುಗಳನ್ನು ತಿಪ್ಪೆ ಗುಂಡಿಯನ್ನಾಗಿ ಮಾಡಿಕೊಂಡಿದ್ದಾರೆ.ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬುವ ಪರಿಣಾಮ ಅಕ್ಕ ಪಕ್ಕದ ಮನೆಗಳಿಗೆ ದುರ್ವಾಸನೆ ಹರಡುತ್ತದೆ.

ಇಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಕೇವಲ 61 ಮಕ್ಕಳು ಇದ್ದು, ಇಬ್ಬರು ಶಿಕ್ಷಕರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದರೂ, ಮಕ್ಕಳೇ ದಾಖಲಾಗುತ್ತಿಲ್ಲ.

 

ಇದು ಹೀಗೆ ಮುಂದುವರಿದರೆ ಶಾಲೆ ಮುಚ್ಚಬೇಕಾಗಬಹುದು ಎನ್ನುತ್ತಾರೆ ಪ್ರಭಾರ ಮುಖ್ಯಶಿಕ್ಷಕ ಅಂದಾನಿಗೌಡ.

ಶಾಲೆಯ ಮುಂಭಾಗ ಇರುವ ಚರಂಡಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನೀರು ಹರಿದು ಹೋಗುವುದಿಲ್ಲ. ಆಗಾಗ ದುರ್ವಾಸನೆ ಬರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ಥಳೀಯ ಜನಪತ್ರಿನಿಧಿಗಳು ಗ್ರಾ.ಪಂ.ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಾಗಿದೆ.ಸದರಿ ಗ್ರಾಮದಲ್ಲಿ 14 ಮಂದಿ ಗುಡಿಸಲು ನಿವಾಸಿಗಳು ಇದ್ದರು. ವಿಶೇಷ ಘಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇವುಗಳ ಪೈಕಿ 7 ಮನೆಗಳ ಕೆಲಸ ಪ್ರಗತಿಯಲ್ಲಿದೆ. ಉಳಿಕೆಯವರು ಹಣ ಸಾಕಾಗುವುದಿಲ್ಲ ಎಂಬ ಕಾರಣ ನೆಪವೊಡ್ಡಿ ಮನೆ ಕಟ್ಟಲು ಮುಂದಾಗಿಲ್ಲ ಎಂದು ಅಣ್ಣೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಕ್ಷ್ಮಿ ಪ್ರತಿಕ್ರಿಯೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.