ಮಂಗಳವಾರ, ಮಾರ್ಚ್ 2, 2021
31 °C

ಆವುಲಬೆಟ್ಟದಲ್ಲೊಂದು ಸುತ್ತು

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಆವುಲಬೆಟ್ಟದಲ್ಲೊಂದು ಸುತ್ತು

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯಿಂದ ಸುಮಾರು 6 ಕಿ.ಮೀ.ಗಳಷ್ಟು ದೂರದಲ್ಲಿರುವ ಆವುಲಬೆಟ್ಟ ಹಲವು ಕಾರಣಗಳಿಗೆ ಪ್ರಸಿದ್ಧ.ರಾಜ್ಯ ಮತ್ತು ಹೊರರಾಜ್ಯದ ಪ್ರವಾಸಿಗರು ಬೆಟ್ಟದ ಮೇಲೆ ದೀರ್ಘಕಾಲದವರೆಗೆ ಇರಲು ಬಯಸುತ್ತಾರೆ. ಬರೀ ಬಂಡೆಗಳಿಂದ ಆವರಿಸಿಕೊಂಡಿರುವ ರೋಮಾಂಚನ ಅನುಭವ ನೀಡದೇ ಇರುವುದಿಲ್ಲ.ಕೆಲವರು ಇದನ್ನು ಲಕ್ಷ್ಮಿನರಸಿಂಹಸ್ವಾಮಿ ಬೆಟ್ಟವೆಂದು ಕರೆದರೆ, ಇನ್ನೂ ಕೆಲವರು ದನಗಳ ಬೆಟ್ಟವೆಂದೂ ಸಹ ಕರೆಯುತ್ತಾರೆ.ದನಗಳಿಗೆ ತೆಲುಗಿನಲ್ಲಿ ಆವುಲ ಎಂದು ಕರೆಯುತ್ತಾರೆ. ಬೆಟ್ಟವನ್ನೇರಲು ಅಚ್ಚುಕಟ್ಟಾದ ರಸ್ತೆಯಿದ್ದು, ಅಲ್ಲಿ ಒಂದೆರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಅರಣ್ಯ ಇಲಾಖೆಯ ವಸತಿಗೃಹಗಳ ಸೌಲಭ್ಯವೂ ಇದೆ. ಬೆಟ್ಟದ ತುದಿಯಿಂದ ಕಾಣಸಿಗುವ ಅರಣ್ಯ ಪ್ರದೇಶ ನೋಡುವುದೇ ಒಂದು ಸಂಭ್ರಮ.ಪುಟಾಣಿ ಮಕ್ಕಳಿಗೆ ಪರ್ವತಾರೋಹಣ ಮಾಡಲು ಹೇಳಿ ಮಾಡಿಸಿದ ಸ್ಥಳವಾದರೆ, ಚಿತ್ರಕಲಾವಿದರಿಗೆ ಬೆಟ್ಟದ ಮೇಲೆ ಕೂತು ಚಿತ್ರಗಳನ್ನು ರಚಿಸುವುದೆಂದರೆ ಹಬ್ಬದ ಊಟ ಸವಿದಷ್ಟು ಖುಷಿಯಾಗುತ್ತದೆ.ಬೆಟ್ಟದ ಮೇಲೆ ಬಗೆಬಗೆಯ ಚಿತ್ರಗಳನ್ನು ರಚಿಸಲೆಂದೇ ಕೆಲ ಚಿತ್ರಕಲಾವಿದರು ಬೆಟ್ಟದ ಮೇಲೆಯೇ ತಂಗುತ್ತಾರೆ. ವಿವಿಧ ಕೋನಗಳಲ್ಲಿ ಮತ್ತು ವಿವಿಧ ಪರಿಕಲ್ಪನೆಗಳನ್ನು ಇಟ್ಟುಕೊಂಡು ಚಿತ್ರಕಲಾವಿದರು ಚಿತ್ರಗಳನ್ನು ರಚಿಸಿದರು. ಸರ್ ಎಂ.ವಿ.ಚಿತ್ರಕಲಾ ಶಿಕ್ಷಕರ ಸಂಘದ ಸದಸ್ಯರೆಲ್ಲರೂ ಜನವರಿ 22 ರಿಂದ 25ರವರೆಗೆ ಬೆಟ್ಟದಲ್ಲಿಯೇ ಉಳಿದುಕೊಂಡು, ಬಣ್ಣ ಮತ್ತು ರೇಖೆಗಳಲ್ಲಿ ಬೆಟ್ಟವನ್ನು ಸೆರೆ ಹಿಡಿದರು.ಸಂಘದ ಸುಮಾರು 25 ಮಂದಿ ಸದಸ್ಯರು 80ಕ್ಕೂ ಹೆಚ್ಚು ಚಿತ್ರಗಳನ್ನು ರಚಿಸಿ, ಬೆಟ್ಟದ ವರ್ಣನೆಯನ್ನು ಕಲಾಕೃತಿಗಳ ಮೂಲಕ ಸಾದರಪಡಿಸಿದರು. ಸಾಂಸಾರಿಕ ಜಂಜಾಟ, ಶಾಲೆಯ ದೈನಂದಿನ ಪಾಠ ಮುಂತಾದವುಗಳಿಂದ ದೂರವುಳಿದು ಚಿತ್ರಕಲೆಗಾಗಿಯೇ ನಾಲ್ಕು ದಿನಗಳನ್ನು ಸಮರ್ಪಿಸಿದರು.ಬೆಟ್ಟದ ಮೇಲಿನ ಲಕ್ಷ್ಮಿನರಸಿಂಹ ದೇವಾಲಯ, ದೋಣಿಯ ಬಳಿಯ ಗೋಪುರ, ಪ್ರವಾಸಿ ಮಂದಿರ, ವೀಕ್ಷಣಾ ಗುಡಿಸಲು, ಲಕ್ಷ್ಮಿ ದೇವಾಲಯ ಮತ್ತು ಬೆಟ್ಟದ ಮೇಲಿನಿಂದ ಕಾರಣ ಸುಂದರ ಭೂದೃಶ್ಯಗಳನ್ನು ಬಿಳಿ ಹಾಳೆಗಳಲ್ಲಿ ಮೂಡಿಸಿದರು.ಚಿತ್ರಕಲೆಗಳದ್ದೇ ಧ್ಯಾನ ಮಾಡಿದ ಚಿತ್ರಕಲಾ ಶಿಕ್ಷಕರಿಗೆ ಅಲ್ಲಿಯೇ ಉಪಾಹಾರ, ಊಟ ಮತ್ತು ವಸತಿ ಸೌಕರ್ಯ ಕಲ್ಪಿಸಲಾಗಿತ್ತು. ನಾಲ್ಕು ದಿನಗಳಾದರೂ ಸಣ್ಣಪುಟ್ಟ ನೆಪಕ್ಕಾದರೂ ಅವರು ಬೆಟ್ಟದಿಂದ ಇಳಿಯುವ ಪ್ರಮೇಯವೇ ಬರಲಿಲ್ಲ.ಯಾವುದೇ ಮೂಲೆಗೆ ತೆರಳಿದರೂ ಅಲ್ಲಲ್ಲಿ ಚಿತ್ರಕಲಾ ಶಿಕ್ಷಕರನ್ನು ಕಂಡು ಪ್ರವಾಸಿಗರು ಅಚ್ಚರಿಗೊಳಗಾದರು.ಜಿಲ್ಲೆಯ ಎಲ್ಲಾ ಚಿತ್ರಕಲಾ ಶಿಕ್ಷಕರು ಶಾಲೆಯನ್ನು ಬಿಟ್ಟು ಬಂದು ಬೆಟ್ಟದ ಮೇಲೆಯೇ ವಸತಿ ಮಾಡಿದಂತಿದೆ ಎಂದು ಕೆಲವರು ತಮಾಷೆ ಮಾಡಿದರು. ಹಳೆಯ ದಿನಗಳನ್ನು  ಸ್ಮರಿಸಿದ ಕೆಲ ಶಿಕ್ಷಕರು, ‘ನಾವು ನಮ್ಮ ಕಾಲೇಜು ದಿನಗಳಲ್ಲೂ ಸಹ ಇಂತಹ ವಿಶಿಷ್ಟ ಅನುಭವ ಪಡೆದಿರಲಿಲ್ಲ. ಬೆಟ್ಟದ ಚೆಂದದ ವಾತಾವರಣದಲ್ಲಿ ಚಿತ್ರಕಲೆಗಾಗಿ ಸಮರ್ಪಿಸಿಕೊಂಡಿದ್ದು ಖುಷಿಯಾಯಿತು ಎಂದರು.ಗುಡಿಬಂಡೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಸಿ.ಎಲ್.ವೆಂಕಟೇಶ್‌ಮೂರ್ತಿ, ಮಂಡಿಕಲ್ಲು ಸಂಪನ್ಮೂಲ ಕೇಂದ್ರದ ಶಿಕ್ಷಕ ಷಫಿಉಲ್ಲಾ ಅವರು ಚಿತ್ರಕಲಾ ಶಿಕ್ಷಕರಿಗೆ ಊಟ, ವಸತಿ ಸೇರಿದಂತೆ ಇತರ ವ್ಯವಸ್ಥೆ ಮಾಡಿದರು.ನಾಲ್ಕು ದಿನಗಳ ನಂತರ ಬೆಟ್ಟದಲ್ಲಿ ರಚಿಸಲಾದ ಕಲಾಕೃತಿಗಳನ್ನು ಮಂಡಿಕಲ್ಲು ಸರ್ಕಾರಿ ಶಾಲೆಯಲ್ಲಿ ಪ್ರದರ್ಶಿಸಲಾಯಿತು.

ಮಕ್ಕಳು, ಗ್ರಾಮಸ್ಥರು ಸೇರಿದಂತೆ ಎಲ್ಲರೂ ಶಾಲೆಗೆ ತೆರಳಿ ಕಲಾಕೃತಿಗಳನ್ನು ಕಂಡು ಸಂತಸಪಟ್ಟರು.ಹೊಸ ರೀತಿಯ ಪ್ರಯೋಗ ಮಾಡಲೆಂದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಅಜಿತ್ ಪ್ರಸಾದ್ ಅವರು ನಾಲ್ಕು ದಿನಗಳ ಕಾಲ ಓಓಡಿ ನೀಡಿದ್ದರು. ಕಲಾಕೃತಿಗಳನ್ನು ಚಿಕ್ಕಬಳ್ಳಾಪುರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶೀಘ್ರವೇ ಪ್ರದರ್ಶಿಸಲಾಗುವುದು ಎಂದು ಸರ್‌ ಎಂ.ವಿ.ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್‌.ಆರ್‌. ಸಂತೋಷಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಸಂಘದ ಕಾರ್ಯದರ್ಶಿ ನಾಗರಾಜ್. ಉಪಾಧ್ಯಕ್ಷ ವೀಣಾ, ಸದಸ್ಯರಾದ ಸಿದ್ದೇಶ್, ಸತೀಶ್, ಅರುಣ್, ಶ್ರೀನಿವಾಸಮೂರ್ತಿ, ವೇಣು, ಮಂಜುನಾಥಸ್ವಾಮಿ, ಮಠಪತಿ, ಪ್ರಭಾಕರ್, ಸುಮಿತ್ರಾ, ಲಕ್ಷ್ಮಣ್, ರಾಮಾಂಜಿ, ಶಶೀಂದ್ರ ಕಲಾಕೃತಿಗಳನ್ನು ರಚಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.