ಶನಿವಾರ, ಮೇ 8, 2021
19 °C

ಆಶಯಗಳ ದಾಖಲೆಯಾಗಿ ಉಳಿಯದಿರಲಿ

ಶ್ಯಾಮ್ ಕಶ್ಯಪ್ Updated:

ಅಕ್ಷರ ಗಾತ್ರ : | |

ಪಂಚಾಯತ್ ರಾಜ್ ಸಂಸ್ಥೆಗಳನ್ನು ಜನ ಕೇಂದ್ರಿತವನ್ನಾಗಿಸುವುದು, ಅವುಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ರಮೇಶ್‌ಕುಮಾರ್ ಸಮಿತಿ ಶಿಫಾರಸುಗಳ ಉದ್ದೇಶ. ಗ್ರಾಮೀಣಾಭಿವೃದ್ಧಿಯನ್ನು ಕೇವಲ ವಿವಿಧ ಇಲಾಖೆಗಳ ಯೋಜನೆಗಳಿಗೆ ಸಮೀಕರಿಸದೆ ಪಂಚಾಯತ್ ರಾಜ್ ಸಂಸ್ಥೆಗಳ ಸಮರ್ಪಕ ಸ್ವಾಯತ್ತ ಆಡಳಿತದ ಮೂಲಕ ಅವಶ್ಯಕತೆಗಳ ಗುರುತಿಸುವಿಕೆ ಮತ್ತು ಅನುಷ್ಠಾನ ಎಂಬುದನ್ನು ಶಿಫಾರಸುಗಳು ಎತ್ತಿ ಹಿಡಿಯುತ್ತವೆ.ಕೃಷಿ, ತೋಟಗಾರಿಕೆ, ಸಣ್ಣ ನೀರಾವರಿ, ಸಮಾಜ ಕಲ್ಯಾಣ, ಅರಣ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಜವಾಬ್ದಾರಿ­ಗಳನ್ನು ವಿಕೇಂದ್ರೀಕರಣದ ಮೂಲ ಆಶಯ­ದಂತೆ ಗ್ರಾಮ ಪಂಚಾಯಿತಿಗೇ ವಹಿಸಲು ವರದಿಯು ಬಯಸುತ್ತದೆ ಮತ್ತು ಈ ಪ್ರಕ್ರಿಯೆಗೆ ಅನುವು ಮಾಡಿ­ಕೊಡಲು ಹಲವು ಮೂಲಭೂತ ಬದಲಾವಣೆ­ಗಳನ್ನು ಸೂಚಿಸುತ್ತದೆ. ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ತರಬೇಕೆಂದಿರುವ ಬದಲಾವಣೆಗಳನ್ನು ಮೂರು ಭಾಗಗಳಲ್ಲಿ ವಿಶ್ಲೇಷಿಸಬಹುದು.ಒಂದು, ಗ್ರಾಮ ಪಂಚಾ­ಯಿತಿಯ ಅಧ್ಯಕ್ಷರು ಮತ್ತು ಇತರ ಚುನಾಯಿತ ಸದಸ್ಯರ ಅಧಿಕಾರ, ಜವಾಬ್ದಾರಿ ಮತ್ತು ನಾಯಕತ್ವ ಗುಣಗಳಲ್ಲಿ ಬದ­ಲಾವಣೆ. ಎರಡು, ಯೋಜನೆ ಮತ್ತು ಅನುಷ್ಠಾನದಲ್ಲಿ ಜನರ ನೇರ ಭಾಗವಹಿಸುವಿಕೆ. ಮೂರು, ಸಿಬ್ಬಂದಿ ವರ್ಗದ ರಚನೆ ಮತ್ತು ಹಣಕಾಸಿನ ವಿನಿಯೋಗದಲ್ಲಿನ ಬದಲಾವಣೆಗಳು. ವರದಿಯ ಶಿಫಾರಸುಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅಧಿಕಾರದ ಅವಧಿಯ ವಿಸ್ತರಣೆಯಾಗಿದೆ.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಹೆಚ್ಚಿನ ಹಿಡಿತ. ಹೆಚ್ಚಿನ ಭತ್ಯೆಗಳ ಜೊತೆಜೊತೆಗೇ, ಅಭಿವೃದ್ಧಿಯ ವಿವಿಧ ಕ್ಷೇತ್ರಗಳಲ್ಲಿನ ಕಾರ್ಯಯೋಜನೆಗಳ ತಯಾರಿಕೆಯಲ್ಲಿ ಹೆಚ್ಚಿನ ಪಾತ್ರ, ವಾರ್ಡ್ ಮತ್ತು ಗ್ರಾಮಸಭೆಗಳಲ್ಲಿ ಭಾಗವಹಿಸುವುದು, ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆ ಮುಂತಾದ ಜವಾಬ್ದಾರಿಗಳೂ ಹೆಚ್ಚಿವೆ. ಈ ಸವಾಲುಗಳನ್ನು ಎದುರಿಸಲು ಸಮಿತಿಯು ಚುನಾಯಿತ ಸದಸ್ಯರ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ. ಆದರೆ, ಹೆಚ್ಚಿನ ಅಧಿಕಾರದ ಜೊತೆಯಲ್ಲಿ ಈ ಹೆಚ್ಚಿನ ಜವಾಬ್ದಾರಿಗಳನ್ನು ಹೇಗೆ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ವಿವಿಧ ಇಲಾಖೆಗಳ ಯೋಜನೆಗಳಿಗೆ ಗ್ರಾಮಸಭೆಯೇ ತಳ­ಹಂತದ ಯೋಜನಾ ಬಿಂದುವಾಗಿರಬೇಕೆಂಬುದೂ ವರದಿಯ ಪ್ರಮುಖ ಅಂಶವಾಗಿದೆ. ಇದಕ್ಕಾಗಿ ವರ್ಷದ ವಿವಿಧ ತಿಂಗಳುಗಳಲ್ಲಿ ನಿಯಮಿತವಾಗಿ ವಾರ್ಡ್ ಸಭೆ ಮತ್ತು  ಗ್ರಾಮಸಭೆಗಳನ್ನು ನಡೆಸುವುದು, ವಿಶೇಷ ಗ್ರಾಮಸಭೆಗಳು ಮತ್ತು ಪರಿಶಿಷ್ಟ ಜಾತಿ/ಪಂಗಡ, ಮಕ್ಕಳು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಗ್ರಾಮಸಭೆಗಳನ್ನು ನಡೆಸಲು ಮತ್ತು ಅವುಗಳ ವೀಡಿಯೋ ಚಿತ್ರೀಕರಣವನ್ನು ವರದಿ ಶಿಫಾರಸು ಮಾಡಿದೆ.ಈ ಎಲ್ಲಾ ಚಟುವಟಿಕೆಗಳಲ್ಲಿ ಜನರ ಸಹಭಾಗಿತ್ವವನ್ನು ಕಾಯ್ದುಕೊಳ್ಳುವುದು ಮತ್ತು ಈ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಬಹುಮತಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯಕ್ಕೆ ಮಹತ್ವವನ್ನು ಕೊಡುವುದು. ಇವುಗಳನ್ನು ವಾಸ್ತವದಲ್ಲಿ ಸಾಧಿಸುವುದು ಕಠಿಣ.

ಪಂಚಾಯತ್ ರಾಜ್ ಸಂಸ್ಥೆಗಳು ಹೆಚ್ಚಿನ ಜವಾಬ್ದಾರಿಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಲು ಅನುವು ಮಾಡಿಕೊಡಲು ಸಮಿತಿ ಹಲವಾರು ಆಡಳಿತಾತ್ಮಕ ಬದಲಾವಣೆಗಳನ್ನು ಶಿಫಾರಸು ಮಾಡಿದೆ.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಮುಖವಾಗಿ ಕರ್ನಾಟಕ ಪಂಚಾಯತ್ ರಾಜ್ ಆಡಳಿತಾತ್ಮಕ ಸೇವಾ ವೃಂದದ ಸೃಷ್ಟಿ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳನ್ನು ಇದರಲ್ಲಿ ಸೇರ್ಪಡಿ­ಸುವುದು, ಗ್ರಾಮ ಪಂಚಾಯಿತಿಯ ಪಿಡಿಓ ಹುದ್ದೆಯನ್ನು ತಹಸೀಲ್ದಾರ್ ಹುದ್ದೆಗೆ ಕಡಿಮಯಿಲ್ಲದಂತೆ ಮೇಲ್ದರ್ಜೆಗೆ ಏರಿಸುವುದು ಮುಂತಾದ ಬದಲಾವಣೆಗಳನ್ನು ಜಾರಿಗೆ ತರುವುದು ಕಠಿಣ ಸವಾಲುಗಳು. ಇಷ್ಟೇ ಅಲ್ಲದೇ ಗ್ರಾಮಪಂಚಾಯಿತಿಗಳಿಗೆ ಹಣಕಾಸು ವಿನಿಯೋಗದಲ್ಲಿ ಹೆಚ್ಚಳ ಮತ್ತು ಮುಕ್ತ ನಿಧಿಯ ಪ್ರಮಾಣದಲ್ಲಿ ಹೆಚ್ಚಳಗಳೂ ಕೂಡ ತಮ್ಮದೇ ಆದ ಆಡಳಿತಾತ್ಮಕ ಮತ್ತು ಆರ್ಥಿಕ ತೊಂದರೆಗಳನ್ನು ಒಡ್ಡುತ್ತವೆ.ಸಮಿತಿಯು ಸಮಗ್ರ ದೃಷ್ಟಿಕೋನದಿಂದ ಶಿಫಾರಸುಗಳನ್ನು ಹೊರತಂದಿದ್ದರೂ ಕೆಲವು ಪ್ರಾಯೋಗಿಕ ವಿಚಾರಗಳ ಬಗ್ಗೆ ಗಮನಹರಿಸದಿರುವುದು ಗೋಚರವಾಗುತ್ತದೆ. ಉದಾಹರಣೆಗೆ, ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಪ್ರಕ್ರಿಯೆಗಳು ಏಕರೂಪದಲ್ಲಿರದೇ ಇರುವುದರಿಂದ ಚುನಾಯಿತ ಪ್ರತಿನಿಧಿಗಳಿಗೆ ಯೋಜನೆ ಮತ್ತು ಅವುಗಳ ಉಪಯೋಗದ ಬಗ್ಗೆ ಮಾಹಿತಿಯಿದ್ದರೂ ಅನುಷ್ಠಾನ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ನಿರ್ಧಾರಗಳ ಮೇಲೆ ಅವಲಂಬಿತವಾಗಿದ್ದಾರೆ.ಪಂಚಾಯತ್ ರಾಜ್ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸುವ ಭರದಲ್ಲಿ ವರದಿಯು ಹೆಚ್ಚಿನ bureaucratic ಪ್ರಕ್ರಿಯೆಗಳನ್ನೂ ಶಿಫಾರಸ್ಸು ಮಾಡಿದೆ. ಇದರಿಂದಾಗಿ ಈ ಸಂಸ್ಥೆಗಳು ಜನರಿಂದ ದೂರವಾಗುವ ವ್ಯತಿರಿಕ್ತ ಪರಿಣಾಮವೂ ಕಾಣಿಸಿಕೊಳ್ಳಬಹುದು. ಹಾಗೆಯೇ ಸಮಿತಿಯ ವರದಿಯಲ್ಲಿ ಆಡಳಿತದಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆಯ ಬಗ್ಗೆ ಹೆಚ್ಚು ಚರ್ಚಿಸಲಾಗಿಲ್ಲ. ತಂತ್ರಜ್ಞಾನದ ಅವೈಜ್ಞಾನಿಕ ಬಳಕೆಯು ವಿಕೇಂದ್ರೀಕರಣದಂತಹ ಸೂಕ್ಷ್ಮ ಪ್ರಕ್ರಿಯೆಗಳನ್ನು ಬೈಪಾಸ್ ಮಾಡಿರುವ ಸ್ಪಷ್ಟ ಉದಾಹರಣೆಗಳು ಹೇರಳವಾಗಿವೆ.ಪಂಚಾಯತ್ ರಾಜ್ ಸಂಸ್ಥೆಗಳು ಕೇವಲ ಸರ್ಕಾರದ ವಿತರಣಾ ಏಜೆಂಟ್‌ಗಳಾಗಿ ಉಳಿಯದೇ ಸ್ವಾಯತ್ತ ಸಂಸ್ಥೆಗಳಾಗಿ ರೂಪುಗೊಳ್ಳಲು ಬೇಕಾಗಿರುವ ಸ್ಪಷ್ಟ ಕಾರ್ಯತಂತ್ರಗಳನ್ನು ಸಮಿತಿಯು ನೀಡಿರುವುದು ಶ್ಲಾಘನೀಯ ಮತ್ತು ಸ್ವಾಗತಾರ್ಹ. ಆದರೆ ಹಿರಿಯ ಅಧಿಕಾರಿಗಳು ಮತ್ತು ಮೇಲ್ಮಟ್ಟದ ಜನಪ್ರತಿನಿಧಿಗಳಿಗೆ ತಳಹಂತದಲ್ಲಿ ತೆಗೆದುಕೊಂಡ ನಿರ್ಧಾರಗಳು ಮತ್ತು ಜನಪರ ಪ್ರಕ್ರಿಯೆಗಳಲ್ಲಿ ನಂಬಿಕೆ ಮತ್ತು ಗೌರವವಿಲ್ಲದಿದ್ದರೆ ಕಾಯ್ದೆಯು ಕೇವಲ ಆಶಯಗಳ ದಾಖಲೆಯಾಗಿ ಉಳಿಯುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.