ಗುರುವಾರ , ಮೇ 19, 2022
21 °C

ಆಶ್ರಮ ವಸತಿಶಾಲೆ ಮುಚ್ಚಲು ಸರ್ಕಾರ ಚಿಂತನೆ

ಮಲ್ಲೇಶ್ ನಾಯಕನಹಟ್ಟಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹಿಂದುಳಿದ ಅಲೆಮಾರಿ-ಆದಿವಾಸಿ, ಗಿರಿಜನ ಜನಾಂಗ ಒಂದೆಡೆ ನೆಲೆನಿಂತು ಶೈಕ್ಷಣಿಕ ಪ್ರಗತಿ ಕಾಣುವ ಉದ್ದೇಶದಿಂದ ರಾಜ್ಯದಲ್ಲಿ ಆರಂಭಿಸಲಾಗಿದ್ದ `ಆಶ್ರಮ ವಸತಿಶಾಲೆ~ಗಳನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸಿದ್ದು, ಅಲೆಮಾರಿ ಜನಾಂಗದ ಮಕ್ಕಳ ಶೈಕ್ಷಣಿಕ ಭವಿಷ್ಯ ಅಡಕತ್ತರಿಗೆ ಸಿಲುಕಿದೆ.1965ರಲ್ಲಿ ಸರ್ಕಾರ ಸಮೀಕ್ಷೆ ನಡೆಸಿ ರಾಜ್ಯದಲ್ಲಿ ಒಟ್ಟು 49 ಅಲೆಮಾರಿ ಜನಾಂಗವನ್ನು ಗುರುತಿಸುವ ಮೂಲಕ ಪಟ್ಟಿ ತಯಾರಿಸಿತ್ತು. ಅವುಗಳಲ್ಲಿ ಹಂದಿಜೋಗಿ, ಮದರಿ, ಸುಡುಗಾಡು ಸಿದ್ದ ಜನಾಂಗವನ್ನು ಪರಿಶಿಷ್ಟ ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಈ ಪಟ್ಟಿಯ ಆಧಾರದ ಮೇಲೆ ಜನಾಂಗದ ಕಲ್ಯಾಣಾಭಿವೃದ್ಧಿಗಾಗಿ ಸರ್ಕಾರ ಯೋಜನೆ ಜಾರಿಗೊಳಿಸುತ್ತಾ ಬಂದಿದೆ.ನಂತರ ದೇವರಾಜ ಅರಸು ಅವರ ಆಡಳಿತ ಸರ್ಕಾರ ಅಲೆಮಾರಿ ಜನಾಂಗದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ `ಆಶ್ರಮ ವಸತಿ ಶಾಲೆ~ಗಳನ್ನು ಆರಂಭಿಸಿತು. ರಾಜ್ಯದಲ್ಲಿ 106 ಕನ್ನಡ ಮಾಧ್ಯಮ,18 ಇಂಗ್ಲಿಷ್ ಮಾಧ್ಯಮ ಸೇರಿ ಒಟ್ಟು 124 ಆಶ್ರಮ ವಸತಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಆರಂಭವಾದ ಮೇಲೆ ಅಲೆಮಾರಿ ಹಾಗೂ ಹಕ್ಕಿಪಿಕ್ಕಿ ಜನಾಂಗ ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಒಂದೆಡೆ ನೆಲೆ ನಿಲ್ಲುವಂತಾಗಿತ್ತು.ಆದರೆ, ಇದೀಗ ಸರ್ಕಾರ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಆಶ್ರಮ ಶಾಲೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದೆ. ಇದರ ಜತೆಗೆ ಸಮಾಜ ಕಲ್ಯಾಣ  ಇಲಾಖೆ  ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗ ಕಲ್ಯಾಣ ಇಲಾಖೆ  ವ್ಯಾಪ್ತಿಯಲ್ಲಿ ಬರುವ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತಿರುವ ವಸತಿ ಶಾಲೆಗಳ ಬಗ್ಗೆ ತನಿಖೆ ನಡೆಸಿ ಮಕ್ಕಳ ಕೊರತೆ  ಇರುವ ವಸತಿ ಶಾಲೆಗಳನ್ನು ವಿಲೀನಗೊಳಿಸುವಂತೆ ಸರ್ಕಾರ ಇಲಾಖೆಗಳಿಗೆ ಆದೇಶಿಸಿರುವುದು ಹಿಂದುಳಿದ ವರ್ಗದ ಮಕ್ಕಳಿಗೆ ದಿಕ್ಕುತೋಚದಂತಾಗಿದೆ.ರಾಜ್ಯದಲ್ಲಿ ಪರಿಶಿಷ್ಟ ಜಾತಿಯ145, ಪರಿಶಿಷ್ಟ ಪಂಗಡದ 36, ಅಲ್ಪಸಂಖ್ಯಾತ ವರ್ಗದ 48 ವಸತಿ ಶಾಲೆಗಳು ಹಿಂದುಳಿದ ವರ್ಗದ ಮಕ್ಕಳ ಕಲಿಕೆಯತ್ತ ಶ್ರಮಿಸುತ್ತಿವೆ. ಆದರೆ, ಅವಕ್ಕೂ ಈಗ ಕುತ್ತು ಬಂದಿದೆ. ಇದರಿಂದಾಗಿ ಮಕ್ಕಳ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳ ಶೈಕ್ಷಣಿಕ ಸ್ಥಿತಿಯೂ ಡೋಲಾಯಮಾನವಾಗಿದೆ.`ಸರ್ಕಾರ 46 ವರ್ಷಗಳ ಹಿಂದೆ ಅಲೆಮಾರಿ-ಆದಿವಾಸಿ, ಗಿರಿಜನ ಜನಾಂಗದ ಸಮೀಕ್ಷೆ ನಡೆಸಿದೆ. ಆ ನಂತರ ಯಾವುದೇ ಸಮೀಕ್ಷೆ ನಡೆದಿಲ್ಲ. ಅಲೆಮಾರಿಗಳಲ್ಲಿ ನೂರಾರು ಉಪಜಾತಿಗಳಿವೆ. ಆದರೆ, ಸರ್ಕಾರ  ಹೊರಡಿಸಿರುವ ಗೆಜೆಟಿಯರ್‌ನಲ್ಲಿ ಮೂರು ಜಾತಿಗಳಿಗಷ್ಟೇ ಪರಿಶಿಷ್ಟ ಜಾತಿಯ ಮೀಸಲಾತಿ ಕಲ್ಪಿಸಿದೆ. ಉಳಿದ ನೂರಾರು ಉಪಜಾತಿಗಳಿಗೆ ಯಾವುದೇ ನಿರ್ದಿಷ್ಟ ಜಾತಿ ಹಾಗೂ ಮೀಸಲಾತಿ ನೀಡಿಲ್ಲ.ಪರಿಣಾಮ ಅಂಥವರ ಮಕ್ಕಳು ಅನಕ್ಷರಸ್ತರಾಗಿಯೇ ಉಳಿಯುವಂತಾಗಿದೆ. ಈಗ ಸರ್ಕಾರ  ದುರ್ಬಲ ವರ್ಗದ ಮಕ್ಕಳಿಗೆ ಜೀವನಾಡಿಯಂತಿದ್ದ `ಅಶ್ರಮ ಶಾಲೆ~ಗಳನ್ನು ಮುಚ್ಚಲು ಹೊರಟಿರುವುದು ಹಸಿದ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ~ ಎನ್ನುತ್ತಾರೆ  ಜಿಲ್ಲಾ ಅಲೆಮಾರಿ ಮತ್ತು ಅರೆ ಅಲೆಮಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹುಲಿಯಪ್ಪ ಕೈದಾಳೆ.`ಸರ್ಕಾರ ತಯಾರಿಸಿರುವ ಅಲೆಮಾರಿ ಜನಾಂಗದ ಪಟ್ಟಿಯೇ ಅವೈಜ್ಞಾನಿಕವಾಗಿದೆ. ಬಳ್ಳಾರಿ ಜಿಲ್ಲೆಯ `ಗುಡಾರ್~ ನಗರದಲ್ಲಿ ಅಲೆಮಾರಿ  ಜನಾಂಗಕ್ಕೆ ಶಾಶ್ವತ ನೆಲೆ ಹಾಗೂ ಮೂಲ ಸೌಕರ್ಯ ಕಲ್ಪಿಸಿರುವುದರಿಂದ ಆ ಜನಾಂಗ ಒಂದೆಡೆ ನೆಲೆನಿಂತಿದೆ. ಅವರ  ಮಕ್ಕಳಿಗೆ `ಆಶ್ರಮ ಶಾಲೆ~ಯಲ್ಲಿ ಉತ್ತಮ ವಿದ್ಯಾಭ್ಯಾಸ ಸಿಗುತ್ತಿದೆ.ಅದರಂತೆ ರಾಜ್ಯಾದ್ಯಂತ ಇರುವ ಅಲೆಮಾರಿಗಳಿಗೆ ಶಾಶ್ವತ ಸೂರು, ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ  ಚಿಂತಿಸಬೇಕಾದ ಸರ್ಕಾರ, ಆಶ್ರಮ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ವಿಪರ್ಯಾಸ. ಈಗ ಜಾರಿಗೊಂಡಿರುವ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಲ್ಲೂ  (ಆರ್‌ಟಿಇ) ಸಹ ಅಲೆಮಾರಿ ಮಕ್ಕಳಿಗೆ ಸೂಕ್ತ ಮೀಸಲಾತಿ ಸ್ಥಾನಮಾನ ನೀಡಿಲ್ಲ. ಸರ್ಕಾರಕ್ಕೆ ಸ್ಥಿರ ದೃಷ್ಟಿಕೋನವಿಲ್ಲ~ ಎನ್ನುತ್ತಾರೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕನಾಥ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.