ಮಂಗಳವಾರ, ಏಪ್ರಿಲ್ 20, 2021
32 °C

ಆಸೀಸ್ ಗೆಲುವಿಗೆ ಅಡ್ಡಿಯಾದ ಪ್ಲೆಸಿಸ್: ಡ್ರಾ ಸಾಧಿಸಿದ ದಕ್ಷಿಣ ಆಫ್ರಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡಿಲೇಡ್ (ಎಎಫ್‌ಪಿ): ಫಾಫ್ ಡು ಪ್ಲೆಸಿಸ್ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ `ಹೀರೊ' ಎನಿಸಿಕೊಂಡರು. ಅವರ ತಾಳ್ಮೆಯ ಶತಕದ (110) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಸೋಲಿನಿಂದ ಪಾರಾಗಿ ಡ್ರಾ ಸಾಧಿಸಿತು.ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಅಂತಿಮ ದಿನವಾದ ಸೋಮವಾರ ದಕ್ಷಿಣ ಆಫ್ರಿಕಾ ಸೋಲಿನ ಭೀತಿಯೊಂದಿಗೆ ಕಣಕ್ಕಿಳಿದಿತ್ತು. 4 ವಿಕೆಟ್‌ಗೆ 77 ರನ್‌ಗಳಿಂದ ಆಟ ಮುಂದುವರಿಸಿದ್ದ ತಂಡ ಪಂದ್ಯ ಡ್ರಾದಲ್ಲಿ ಕೊನೆಗೊಂಡಾಗ 148 ಓವರ್‌ಗಳಲ್ಲಿ 8 ವಿಕೆಟ್‌ಗೆ 248 ರನ್ ಗಳಿಸಿತ್ತು. ಪ್ರವಾಸಿ ತಂಡ ಗೆಲುವಿಗೆ 430 ರನ್ ಗಳಿಸಬೇಕಿತ್ತು. ಸರಣಿಯ ಮೊದಲ ಪಂದ್ಯವೂ ಡ್ರಾದಲ್ಲಿ ಕೊನೆಗೊಂಡಿದ್ದ ಕಾರಣ, ಮೂರನೇ ಹಾಗೂ ಅಂತಿಮ ಪಂದ್ಯ ನಿರ್ಣಾಯಕ ಎನಿಸಿಕೊಂಡಿದೆ.ಸುಮಾರು ಎಂಟು ಗಂಟೆಗಳ ಕಾಲ ಕ್ರೀಸ್‌ನಲ್ಲಿ ನೆಲೆಯೂರಿ ನಿಂತ ಪ್ಲೆಸಿಸ್ 376 ಎಸೆತಗಳನ್ನು ಎದುರಿಸಿದರು. ಪ್ಲೆಸಿಸ್ ವಿಕೆಟ್ ಪಡೆಯಲು ಆಸೀಸ್ ನಾಯಕ ಮೈಕಲ್ ಕ್ಲಾರ್ಕ್ ನಡೆಸಿದ ಯಾವುದೇ ಪ್ರಯತ್ನಕ್ಕೆ ಫಲ ಲಭಿಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 78 ರನ್ ಗಳಿಸಿದ್ದ ಪ್ಲೆಸಿಸ್ `ಪಂದ್ಯಶ್ರೇಷ್ಠ' ಗೌರವ ತಮ್ಮದಾಗಿಸಿಕೊಂಡರು.ಎಂಟನೇ ವಿಕೆಟ್ ರೂಪದಲ್ಲಿ ರೋರಿ ಕ್ಲೀನ್‌ವೆಲ್ಟ್ ಔಟಾದಾಗ ದಿನದಾಟ ಕೊನೆಗೊಳ್ಳಲು ಇನ್ನೂ ನಾಲ್ಕು ಓವರ್‌ಗಳಿದ್ದವು. ಪ್ಲೆಸಿಸ್ ಹಾಗೂ ಮಾರ್ನ್ ಮಾರ್ಕೆಲ್ (8) ಅತ್ಯಂತ ಎಚ್ಚರಿಕೆಯಿಂದ ಆಡಿ ಆಸೀಸ್ ತಂಡದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ 107.2 ಓವರ್‌ಗಳಲ್ಲಿ 550 ಮತ್ತು ಎರಡನೇ ಇನಿಂಗ್ಸ್: 70 ಓವರ್‌ಗಳಲ್ಲಿ 8 ವಿಕೆಟ್‌ಗೆ 267 ಡಿಕ್ಲೇರ್ಡ್ ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್ 124.3 ಓವರ್‌ಗಳಲ್ಲಿ 388 ಮತ್ತು ಎರಡನೇ ಇನಿಂಗ್ಸ್ 148 ಓವರ್‌ಗಳಲ್ಲಿ 8 ವಿಕೆಟ್‌ಗೆ 248 (ಫಾಫ್ ಡು ಪ್ಲೆಸಿಸ್ ಔಟಾಗದೆ 110, ಜಾಕ್ ಕಾಲಿಸ್ 46, ಪೀಟರ್ ಸಿಡ್ಲ್ 65ಕ್ಕೆ 4, ನಥಾನ್ ಲಿಯೊನ್ 49ಕ್ಕೆ 3) ಫಲಿತಾಂಶ: ಪಂದ್ಯ ಡ್ರಾ, ಪಂದ್ಯಶ್ರೇಷ್ಠ: ಫಾಫ್ ಡು ಪ್ಲೆಸಿಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.