ಗುರುವಾರ , ಮೇ 13, 2021
16 °C

ಆಸ್ತಮಾ ಕಾಡದಿರು ನಮ್ಮ

ಡಾ. ಕರುಣಾಕರ ಬಂಗೇರ Updated:

ಅಕ್ಷರ ಗಾತ್ರ : | |

ಶ್ವಾಸಕೋಶಗಳ ಮೇಲೆ ತೀವ್ರವಾದ ಪರಿಣಾಮ ಉಂಟಾಗಿ ರೋಗಿ ಸರಾಗವಾಗಿ ಉಸಿರಾಡಲಾಗದೆ ಒದ್ದಾಡುವುದೇ ಆಸ್ತಮಾ. ಮಾನವನಿಗೆ ಬರಬಹುದಾದ ದೀರ್ಘಕಾಲದ ಕಾಯಿಲೆಗಳಲ್ಲಿ ಆಸ್ತಮಾ ಭೀಕರವಾದದ್ದು. ಸಂಪೂರ್ಣ ಗುಣವಾಗುವುದಿಲ್ಲ ಎಂಬ ಭೀತಿ, ಹಟಾತ್ತನೆ ಉಂಟಾಗುವ ತೀವ್ರ ಉಬ್ಬಸ ಮತ್ತು ಆತಂಕವು ರೋಗಿ ಎಷ್ಟೇ ಸಹಿಷ್ಣುವಾಗಿದ್ದರೂ ಖಿನ್ನರನ್ನಾಗಿ ಮಾಡಿಬಿಡುತ್ತದೆ.ಆಸ್ತಮಾ ಗ್ರೀಕ್ ಮೂಲದ ಪದ. ಇದಕ್ಕೆ ಕನ್ನಡದಲ್ಲಿ ಉಬ್ಬಸ ಅಥವಾ ಗೂರಲು ರೋಗ ಎಂದೂ ಕರೆಯುತ್ತಾರೆ. ಮೊತ್ತಮೊದಲಿಗೆ ಆಸ್ತಮಾದ ರೂಪ, ಲಕ್ಷಣಗಳನ್ನು ಗುರುತಿಸಿ ಆ ಬಗ್ಗೆ ಲಿಖಿತ ಮಾಹಿತಿ ನೀಡಿದ ಕೀರ್ತಿ 5ನೇ ಶತಮಾನದ ಅರೀಲಿಯಾನಸ್ ಎಂಬಾತನಿಗೆ ಸಲ್ಲುತ್ತದೆ. ಮಾನಸಿಕ ಒತ್ತಡಗಳ ಪರಿಣಾಮದಿಂದ ಆಸ್ತಮಾ ಉಲ್ಬಣಿಸುತ್ತದೆ ಎಂಬ ವಿಚಾರ ಪ್ರಾಚೀನ ವೈದ್ಯರಿಗೆ ಚೆನ್ನಾಗಿಯೇ ತಿಳಿದಿತ್ತು.ಆಸ್ತಮಾ ಇಂದು 25 ಜನರಲ್ಲಿ ಒಬ್ಬರಿಗೆ ಇರುವ ಸಾಮಾನ್ಯ ರೋಗ. ಇದು ಏಕಾಏಕಿ ಕಾಣಿಸಿಕೊಳ್ಳಬಹುದಾದರೂ ಕೆಲವರನ್ನು ಬಾಲ್ಯದಲ್ಲೇ ಬಳಲಿಸಿ ನಂತರದ ದಿನಗಳಲ್ಲಿ ಮಾಯವಾಗಲೂ ಬಹುದು. ಇನ್ನು ಕೆಲವರನ್ನು ದೀರ್ಘಕಾಲದವರೆಗೆ ಕಾಡಬಹುದು.ಆರೋಗ್ಯವಂತ ಮನುಷ್ಯನ ಉಸಿರಾಟಕ್ಕೆ ವ್ಯಯವಾಗುವ ಶಕ್ತಿ ಬಹಳ ಕಡಿಮೆ. ಹೀಗಾಗಿ ಸರಾಗ ಉಸಿರಾಟದಲ್ಲಿ ವಪೆ ಹಾಗೂ ಮಾಂಸ ಖಂಡಗಳಿಂದ ಕಡಿಮೆ ಶಕ್ತಿ ಬಳಕೆಯಾಗುತ್ತದೆ. ಆದರೆ ಯಾವುದೇ ಕಾರಣದಿಂದ ಶ್ವಾಸನಾಳಗಳು ಸಂಕುಚಿತಗೊಂಡಾಗ, ಅವುಗಳ ವ್ಯಾಸ ಕಡಿಮೆಯಾದಾಗ ಉಸಿರಾಟಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ.ದೇಹದಲ್ಲಿನ ಶ್ವಾಸಕೋಶಗಳ ರಚನೆ ತೀರಾ ಸಂಕೀರ್ಣವಾದುದು ಹಾಗೂ ನಿಯಮಿತ ಕಾರ್ಯಕ್ಕೆ ಪ್ರೇರಿತವಾದುದು. ಉಚ್ವಾಸ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು) ಹಾಗೂ ನಿಶ್ವಾಸ (ಉಸಿರನ್ನು ಹೊರಬಿಡುವುದು) ಕ್ರಿಯೆಗಳು ಸತತವಾಗಿ ಶ್ವಾಸಕೋಶಗಳಿಂದ ನಡೆಯುತ್ತಿರುತ್ತವೆ. ಇದಕ್ಕೆ ಉಸಿರಾಟ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಿಮಿಷಕ್ಕೆ 16 ರಿಂದ 20 ಸಲ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ.ಬ್ರಾಂಕೈಟಿಸ್ ಮತ್ತು ಶ್ವಾಸಕೋಶದಲ್ಲಿ ಸೋಂಕು ಉಂಟಾದಾಗ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಆಸ್ತಮಾ ಯಾವಾಗಲೂ ನಿರಂತರ ಔಷಧ ಸೇವನೆಯಿಂದ ಮಾತ್ರ ಗುಣಹೊಂದಲು ಸಾಧ್ಯ. ಪರೀಕ್ಷಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಯಾವ ಮುಚ್ಚು ಮರೆಯಿಲ್ಲದೆ ಎಲ್ಲ ವಿಷಯಗಳನ್ನೂ ವಿವರಿಸಿ ಹೇಳಬೇಕು. ಆಗ ವೈದ್ಯರು ನಿಮಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ಕೊಡಲು ಸಾಧ್ಯ.ಮುಂಜಾಗ್ರತೆ ವಹಿಸಿ

*ಕಾಯಿಲೆ ಬಂದ ಮೇಲೆ ಔಷಧಗಳನ್ನು ಸೇವಿಸುವುದಕ್ಕಿಂತ ಕಾಯಿಲೆ ಬರದಂತೆ ತಡೆಗಟ್ಟುವುದು ಬುದ್ಧಿವಂತಿಕೆಯ ಲಕ್ಷಣ.*ತನ್ನ ಕಾಯಿಲೆ ಯಾವುದರಿಂದ ಉಲ್ಬಣಗೊಳ್ಳುತ್ತದೆ ಎಂಬುದನ್ನು ಸಾಕಷ್ಟು ತಾಳ್ಮೆಯಿಂದ ಪ್ರಯೋಗ ನಡೆಸಿ ತಿಳಿದುಕೊಳ್ಳಬೇಕು.*ಮನೆ ದೂಳಿನಿಂದ ಅಲರ್ಜಿ ಇದೆ ಎಂಬುದು ಮನವರಿಕೆಯಾದರೆ, ದೂಳಿನ ಸಂಪರ್ಕವನ್ನು ಕಡಿಮೆ ಮಾಡಬೇಕು.*ಮನೆ ಹಾಗೂ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಳವನ್ನು ದೂಳಿನಿಂದ ಮುಕ್ತಗೊಳಿಸಿ ಕೊಂಡಿರಬೇಕು.*ಮಲಗುವ ಕೋಣೆಯಲ್ಲಿ ದೂಳು ಶೇಖರವಾಗಲು ಅವಕಾಶ ಮಾಡಿಕೊಡಬಾರದು*ಹಾಸಿಗೆಯನ್ನು ವಾರಕ್ಕೊಮ್ಮೆ ಬಿಸಿಲಿಗೆ ಹಾಕಬೇಕು.*ಮೇಲು ಹೊದಿಕೆಗಳನ್ನು ಮತ್ತು ಹಾಸಿಗೆಯ ಮೇಲು ಹೊದಿಕೆಗಳನ್ನು ಮೂರು-ನಾಲ್ಕು ದಿನಕ್ಕೊಮ್ಮೆ ಬದಲಾಯಿಸಬೇಕು.*ಯಾವುದಾದರೂ ಆಹಾರ ಪದಾರ್ಥಗಳಿಂದ ಅಲರ್ಜಿ ಉಂಟಾದರೆ ಅವುಗಳನ್ನು ತಿನ್ನದಿರುವುದೇ ಒಳ್ಳೆಯದು.

*ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಆಸ್ತಮಾದಿಂದ ಮುಕ್ತರಾಗಬಹುದು.*ಆರು ತಿಂಗಳಿಗಿಂತ ಸಣ್ಣ ಶಿಶುಗಳಿಗೆ ಎದೆ ಹಾಲನ್ನು ಬಿಟ್ಟು ಆಕಳ ಹಾಲನ್ನು ಅಥವಾ ಬೇರೆ ಹಾಲನ್ನು ನೀಡಬಾರದು.*ಬೆಕ್ಕು, ನಾಯಿಯಂಥ ಪ್ರಾಣಿಗಳಿಂದ ಮಕ್ಕಳನ್ನು ದೂರವಿಡಿ. ಮನೆಯಲ್ಲಿ ಸಾಕಿದ್ದರೂ, ಅವುಗಳನ್ನು ಮುದ್ದಾಡುವುದು, ಮೈಮೇಲೆ, ಹಾಸಿಗೆಗಳ ಮೇಲೆ ಮಲಗಿಸಿಕೊಳ್ಳುವುದು ಸರಿಯಲ್ಲ.*ಎದೆಯಲ್ಲಿ ಕಫ ಹೆಚ್ಚಾಗಿದ್ದಾಗ ಉಬ್ಬಸ ಆರಂಭವಾಗಿ ವಿಪರೀತ ದಣಿವಾಗುತ್ತದೆ.*ಕುಳಿತಾಗಲೂ, ಮಲಗಿದಾಗಲೂ ಉಸಿರಾಡಲು ಆಗದ ಸ್ಥಿತಿ ಕಂಡುಬಂದರೆ ತಕ್ಷಣ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಿರಿ.ಗುಣಲಕ್ಷಣ

ಗಂಟಲು ಕೆರೆತ, ಒಣಗಿದ ಬಾಯಿ, ಆಯಾಸ, ಅಶಾಂತಿ, ಅತೃಪ್ತ ಭಾವನೆ, ಕಫ ಶ್ವಾಸ ಬಿಡುಗಡೆ, ಕೆಮ್ಮಿನಿಂದ ಉಸಿರು ಕಟ್ಟುವಿಕೆ, ಎದೆಯಲ್ಲಿ ಕಫ, ಕೆಲಸ ಮಾಡಿದಾಗ ಉಬ್ಬಸ ಆರಂಭವಾಗಿ ವಿಪರೀತ ದಣಿವಾಗುವುದು ಇತ್ಯಾದಿ.ಯಾಕೆ ಹೆಚ್ಚಾಗುತ್ತದೆ?

*ವಾತಾವರಣದಲ್ಲಿ ಬದಲಾವಣೆ ಆದಾಗ, ಚಳಿ, ಗಾಳಿ, ತೇವಾಂಶ ಹೆಚ್ಚಿದ್ದಾಗ

*ಕೆಲವರಿಗೆ ಔಷಧಿಗಳು ಪ್ರತಿಕೂಲ ಪರಿಣಾಮ ಬೀರುತ್ತವೆ

*ಅತಿಯಾದ ಪ್ರಯಾಸ, ಮಾಳಿಗೆ ಏರುವಾಗ, ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಹೋಗುವಾಗ

*ಮಾನಸಿಕ ಒತ್ತಡ, ಅತಿ ಭಯ, ಸಂತೋಷ, ಉದ್ವೇಗ

*ಶ್ವಾಸಕೋಶದ ಸೋಂಕು, ಚಳಿ, ಜ್ವರ, ನೆಗಡಿ, ಕೆಮ್ಮು ಮತ್ತು ಬ್ರಾಂಕೈಟಿಸ್

*ಧೂಮಪಾನ ಮತ್ತು ಅಗರಬತ್ತಿ ಹೊಗೆ

*ಹಾಸಿಗೆ ಬಟ್ಟೆಗಳಲ್ಲಿನ ಹತ್ತಿಯ ಕಣಗಳು

*ಚರ್ಮದಿಂದ, ತಲೆಯಿಂದ ಉದುರುವ ಹೊಟ್ಟು

*ರಾಸಾಯನಿಕ ಪದಾರ್ಥಗಳು

*ಹಾಸಿಗೆ, ಜಮಖಾನ, ರತ್ನಗಂಬಳಿಯಲ್ಲಿ ಇರುವ ದೂಳು

*ಪೆಟ್ರೋಲಿಯಂ, ಉರಿಯುವ ದ್ರವಗಳು, ಫರ್ನಿಚರ್ ಪಾಲಿಶ್ ಹಾಗೂ ಪರಿಮಳ ದ್ರವ್ಯಗಳ ವಾಸನೆ

*ಹಾಲು, ಕಡಲೆಕಾಯಿ ಬೀಜ, ಮೊಟ್ಟೆ, ಗೋಧಿ, ಕಿತ್ತಲೆಹಣ್ಣು ಇತ್ಯಾದಿ (ಕೆಲವರಿಗೆ)

*ಕೆಲವು ಮರಗಿಡಗಳು ಮತ್ತು ಹೂವಿನ ವಾಸನೆ

*ದೀರ್ಘಕಾಲದಿಂದ ಕೈಗಾರಿಕೆಗಳಲ್ಲಿ ಕೆಲಸ ಮಾಡುವುದರಿಂದ

*ಪ್ಲಾಟಿನಂ ಲವಣದ ಕೈಗಾರಿಕೆ

*ಫೋಮ್ ತಯಾರಿಕೆ, ಮರದ ಕೆಲಸ, ಹತ್ತಿ ಗಿರಣಿಗಳು ಮತ್ತು ಹಿಟ್ಟಿನ ಗಿರಣಿ ಕಾರ್ಮಿಕರಲ್ಲಿ

*ಮಕ್ಕಳು ಅಪೇಕ್ಷಿಸಿದ ಮಟ್ಟದಲ್ಲಿ ತಂದೆ-ತಾಯಿಯಿಂದ ಪ್ರೀತಿ

   ವಾತ್ಸಲ್ಯ ದೊರೆಯದೇ ಇದ್ದಾಗ ಅಥವಾ ಹಾಗೆಂದು ಮಕ್ಕಳು ಭಾವಿಸಿದ್ದಾಗ

*ಕೆಲವು ವೇಳೆ ಹೃದ್ರೋಗದಂಥ ಅಪಾಯಕಾರಿ ಹಂತ ತಲುಪಿದಾಗಲೂ ಆಸ್ತಮಾ ಉಲ್ಬಣಿಸಬಹುದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.