ಬುಧವಾರ, ಮೇ 18, 2022
23 °C

ಆಹಾರ ಭದ್ರತೆ ಮಸೂದೆಯಲ್ಲಿ ಏನಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು ತಲಾ ಐದು ಕೆ.ಜಿ. ಅಕ್ಕಿ, ಗೋಧಿ ಹಾಗೂ ಸಿರಿ ಧಾನ್ಯಗಳನ್ನು (ಜೋಳ, ಮುಸುಕಿನ ಜೋಳ, ನವಣೆ, ಕೊರ್ಲೆ, ಸಜ್ಜೆ  ಇತ್ಯಾದಿ) ನೀಡಲಾಗುತ್ತದೆ. ಇವುಗಳು ಕ್ರಮವಾಗಿ ರೂ 3 ರೂ 2 ಹಾಗೂ ರೂ 1ದರದಲ್ಲಿ ದೊರೆಯಲಿವೆ. ಅಂತ್ಯೋದಯ ಯಥಾರೀತಿ: ಸಾರ್ವಜನಿಕ ವಿತರಣೆ ವ್ಯವಸ್ಥೆಯಲ್ಲಿ `ಅಂತ್ಯೋದಯ ಅನ್ನ' ಯೋಜನೆಯಡಿ ಪಡಿತರ ಪಡೆಯುತ್ತಿರುವ ದೇಶದ 2.43 ಕೋಟಿ ಕಡು ಬಡವರಿಗೂ ಆಹಾರ ಭದ್ರತೆ ಯೋಜನೆಯ ಲಾಭ ದೊರೆಯಲಿದೆ. ಈ ಕುಟುಂಬಗಳು ಈಗಾಗಲೇ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯವನ್ನು ಸಾಂಕೇತಿಕ ಬೆಲೆಯಲ್ಲಿ ಪಡೆಯುತ್ತಿವೆ.ರಾಜ್ಯಗಳಿಗೆ ಸಬ್ಸಿಡಿ: ಈ ಯೋಜನೆಗಾಗಿ ವರ್ಷಕ್ಕೆ ರೂ 23,000 ಕೋಟಿ ಹೆಚ್ಚುವರಿ ಸಬ್ಸಿಡಿ ಭಾರ ಕೇಂದ್ರ ಸರ್ಕಾರದ ಮೇಲೆ ಬೀಳಲಿದೆ. ರಾಜ್ಯಗಳ ಒಳಗೆ ಆಹಾರ ಧಾನ್ಯ ಸಾಗಿಸುವ ವೆಚ್ಚ ಭರಿಸಲು ಕೇಂದ್ರ ಸಹಾಯ ಮಾಡಲಿದೆ. ಆಹಾರ ಭದ್ರತೆ ಯೋಜನೆಯ ಫಲಾನುಭವಿಗಳ ಆಯ್ಕೆ ಜವಾಬ್ದಾರಿಯನ್ನು ಆಯಾ ರಾಜ್ಯಗಳೇ ನಿರ್ವಹಿಸಬೇಕು. ಸೋರಿಕೆ ತಡೆ ಅಗತ್ಯ: ಸರ್ಕಾರದ ಗೋದಾಮುಗಳಲ್ಲಿ ಈಗಾಗಲೇ ಸಾಕಷ್ಟು ಆಹಾರಧಾನ್ಯ ದಾಸ್ತಾನು ಇರುವ ಕಾರಣ ಆಹಾರಭದ್ರತೆ ಯೋಜನೆ ಜಾರಿಗೆ ಕಷ್ಟವಾಗಲಾರದು ಎಂದು ಕೃಷಿ ವೆಚ್ಚ ಮತ್ತು ಬೆಲೆ ಆಯೋಗ ಹೇಳಿದೆ.ಸಾರ್ವಜನಿಕ ವಿತರಣಾ ವ್ಯವಸ್ಥೆ ಸರಿಪಡಿಸುವುದು, ಉತ್ಪಾದನೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು, ದಾಸ್ತಾನು ಹಾಗೂ ಸರಬರಾಜಿನ ಬಗ್ಗೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಆಯೋಗದ ಅಧ್ಯಕ್ಷ ಅಶೋಕ್ ಗುಲಾಟಿ ಹೇಳಿದ್ದಾರೆ.ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿನ ಸೋರಿಕೆ ತಡೆಯುವುದು ದೊಡ್ಡ ಸವಾಲು. ಗೋಧಿ ಹಾಗೂ ಅಕ್ಕಿ ಮಾರುಕಟ್ಟೆಯಲ್ಲಿನ ಖಾಸಗಿ ಮಾರಾಟಗಾರರನ್ನು ಹೊಡೆದೋಡಿಸುವುದು ಮತ್ತೊಂದು ಸವಾಲು ಎಂದು ಅವರು ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.