ಬುಧವಾರ, ಜುಲೈ 15, 2020
21 °C

ಇಂಗ್ಲಿಷರ ಮೊಗದಲ್ಲಿ ಮತ್ತೆ ನಗು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಗ್ಲಿಷರ ಮೊಗದಲ್ಲಿ ಮತ್ತೆ ನಗು!

ಚೆನ್ನೈ: ಇಂಗ್ಲೆಂಡ್ ಆಟಗಾರರ ಮೊಗದಲ್ಲಿ ಮತ್ತೆ ನಗು ಮೂಡಿದೆ. ದುರ್ಬಲ ಐರ್ಲೆಂಡ್ ಎದುರು ಸೋತಾಗ ‘ಲೆಟ್ಸ್ ಗೋ ಬ್ಯಾಕ್ ಇಂಗ್ಲೆಂಡ್’ ಎಂದಿದ್ದ ಆ ದೇಶದ ಅಭಿಮಾನಿಗಳು ಭಾನುವಾರ ಸಂಜೆ ‘ಐ ಲವ್ ಮೈ ಇಂಗ್ಲೆಂಡ್’ ಎಂದು ಕ್ರೀಡಾಂಗಣದಲ್ಲಿ ಪೋಸ್ಟರ್ ಹಿಡಿದು ನಿಂತಿದ್ದರು! ಅದು ನೊಂದಿದ್ದ ಮನಗಳಿಗೆ ಸಾಂತ್ವನ ನೀಡಿರಬಹುದು. ‘ಕ್ರಿಕೆಟ್ ಶಿಶು’ ಐರ್ಲೆಂಡ್ ನೀಡಿದ ಶಾಕ್‌ನಿಂದ ತತ್ತರಿಸಿ ಹೋಗಿದ್ದ ಇಂಗ್ಲಿಷರು ಬಹುಬೇಗನೇ ಸುಧಾರಿಸಿಕೊಂಡಿದ್ದಾರೆ. ಪರಿಣಾಮ ವಿಶ್ವಕಪ್‌ನಲ್ಲಿ ಅವರಿಗೆ ಎರಡನೇ ಗೆಲುವು ಒಲಿದಿದೆ. ಇಂಗ್ಲೆಂಡ್ ಆಡುತ್ತಿರುವ ಪಂದ್ಯಗಳೇ ಈ ಚಾಂಪಿಯನ್‌ಷಿಪ್‌ನಲ್ಲಿ ತುಂಬಾ ರೋಚಕ ಹಾಗೂ ಕುತೂಹಲಕ್ಕೆ ಕಾರಣವಾಗುತ್ತಿರುವುದು ವಿಶೇಷ!ಅದು ಮತ್ತೊಮ್ಮೆ ಸಾಬೀತಾಯಿತು.ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿರುವ ದಕ್ಷಿಣ ಆಫ್ರಿಕಾ ಎದುರು ಭಾನುವಾರ ಲಭಿಸಿದ ಆರು ರನ್‌ಗಳ ಗೆಲುವು ಇಂಗ್ಲೆಂಡ್ ತಂಡದ ಕ್ವಾರ್ಟರ್ ಫೈನಲ್ ಕನಸನ್ನು ಜೀವಂತವಾಗಿರಿಸಿದೆ. ಅದಕ್ಕೆ ಈ ತಂಡದ ‘ನೆವರ್ ಡೈ’ ಮನೋಭಾವವೇ ಕಾರಣ. ಈ ಕ್ರೆಡಿಟ್ ವೇಗಿಗಳಾದ ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್‌ಗೆ ಸಲ್ಲಬೇಕು.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಅಭಿಮಾನಿಗಳ ಪ್ರೀತಿಯ ಕೂಗಿಗೆ ಆ್ಯಂಡ್ರ್ಯೂ ಸ್ಟ್ರಾಸ್ ಪಡೆ ಗೆಲುವಿನ ಉಡುಗೊರೆ ನೀಡಿತು. ತಂಡವನ್ನು ಹಿಂಬಾಲಿಸುತ್ತಿರುವ ‘ಬರ್ಮಿ ಆರ್ಮಿ’ ಸದಸ್ಯರಂತೂ ಕುಣಿದು ಕುಪ್ಪಳಿಸಿದರು. ರಾತ್ರಿ ಪಾರ್ಟಿಗೆ ಮತ್ತೊಂದು ಸಂತೋಷದ ವಿಚಾರ ಬೇಡವೇ ಬೇಡ!ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಕಠಿಣವಾಗಿದ್ದ ಪಿಚ್‌ನಲ್ಲಿ 172 ರನ್‌ಗಳ ಗುರಿ ದಕ್ಷಿಣ ಆಫ್ರಿಕಾದ ಪಾಲಿಗೆ ಕೈಗೆಟುಕದ ಹಣ್ಣಾಗಿ ಉಳಿಯಿತು. ಇತಿಹಾಸದ ಯಶಸ್ಸು ಕೂಡ ಆಂಗ್ಲರ ಪಾಲಿಗೆ ನೆರವು ನೀಡಿತು. ಏಕೆಂದರೆ ಈ ಪಂದ್ಯಕ್ಕೆ ಮುನ್ನ ಹರಿಣಗಳ ವಿರುದ್ಧ ನಡೆದ ಎಂಟು ಪಂದ್ಯಗಳಲ್ಲಿ ಏಳು ಬಾರಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಈಗ ಗೆಲುವಿನ ಸಂಖ್ಯೆ ಎಂಟಕ್ಕೇರಿದೆ.‘ಐರ್ಲೆಂಡ್ ವಿರುದ್ಧ ಸೋತಾಗ ನನಗೆ ಅಷ್ಟು ಬೇಸರವಾಗಲಿಲ್ಲ. ಆದರೆ ಆ ಸೋಲಿಗಾಗಿ ನಮ್ಮನ್ನು ಟೀಕಿಸಿದ ರೀತಿಗೆ ಅಸಮಾಧಾನವಾಗಿತ್ತು. ಈ ಗೆಲುವು ಆ ನಿರಾಸೆಯನ್ನು ಮರೆಸಿದೆ. ನಾವು ಆಡಿದ ನಾಲ್ಕೂ ಪಂದ್ಯಗಳು ರೋಚಕವಾಗಿದ್ದವು. ಈ ನಡುವೆಯೂ ತಂಡದಲ್ಲಿ ತುಂಬಾ ಸುಧಾರಣೆ ಆಗಬೇಕಾಗಿದೆ’ ಎಂದು ನಾಯಕ ಸ್ಟ್ರಾಸ್ ಸಮಾಧಾನದ ನಿಟ್ಟುಸಿರು ಬಿಟ್ಟರು.ಇಂಗ್ಲೆಂಡ್ ತಂಡಕ್ಕೆ ಇಷ್ಟು ದಿನ ಬೌಲರ್‌ಗಳು ಕೈಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳೇ ಕೈಕೊಟ್ಟರು. ಜೊನಾಥನ್ ಟ್ರಾಟ್ ಹಾಗೂ ರವಿ ಬೋಪಾರ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 99 ರನ್ ಸೇರಿಸದಿದ್ದರೆ ಇಂಗ್ಲೆಂಡ್ ಪರಿಸ್ಥಿತಿ ಚಿಂತಾಜನಕವಾಗಿರುತಿತ್ತು. 98 ಎಸೆತಗಳನ್ನು ಎದುರಿಸಿ ತಾಳ್ಮೆಯ 60 ರನ್ ಗಳಿಸಿದ ಭಾರತ ಮೂಲದ ಬೋಪಾರ ‘ಪಂದ್ಯ ಪುರುಷೋತ್ತಮ’ ಎನಿಸಿದರು.ಭಾರತ ತಂಡ ಇಲ್ಲದಿದ್ದರೂ ಪ್ರೇಕ್ಷಕರಿಗೇನು ಕೊರತೆ ಇರಲಿಲ್ಲ. ಸುಮಾರು 15 ಸಾವಿರ ಮಂದಿ ಕ್ರೀಡಾಂಗಣಕ್ಕೆ ಆಗಮಿಸಿ ಉಭಯ ತಂಡಗಳಿಗೆ ಬೆಂಬಲ ನೀಡಿದರು. ಪಂದ್ಯ ಕ್ಷಣಕ್ಷಣಕ್ಕೆ ತಿರುವು ಪಡೆಯುತ್ತಾ ಸಾಗಿದ್ದು ಅವರ ಮನಸ್ಸಿಗೆ ಮುದ ನೀಡಿತು.ಸ್ಮಿತ್ ಹಾಗೂ ಆಮ್ಲಾ ಇನಿಂಗ್ಸ್ ಆರಂಭಿಸಿದ ರೀತಿ ನೋಡಿದಾಗ ಪಂದ್ಯ ಬಹುಬೇಗ ಮುಗಿದು ಹೋಗಬಹುದು ಎನಿಸಿದ್ದು ಸಹಜ. ಇವರಿಬ್ಬರು 14.1 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 63 ರನ್ ಸೇರಿಸಿದ್ದರು. ಆದರೆ ಸ್ಮಿತ್ ವಿಕೆಟ್ ಕೆಡವಿದ ಆಫ್ ಸ್ಪಿನ್ನರ್ ಸ್ವಾನ್ ಪಂದ್ಯಕ್ಕೆ ತಿರುವು ನೀಡಿದರು. ಅಲ್ಲಿಂದ ದಕ್ಷಿಣ ಆಫ್ರಿಕಾ ಸುಧಾರಿಸಿಕೊಳ್ಳಲೇ ಇಲ್ಲ. ಕೊನೆಯ ಎರಡು ಪಂದ್ಯಗಳಲ್ಲಿ ತುಂಬಾ ದುಬಾರಿಯಾಗಿದ್ದ ಇಂಗ್ಲಿಷ್ ಬೌಲರ್‌ಗಳು ಫೀನಿಕ್ಸ್‌ನಂತೆ ಮೇಲೆದ್ದು ಬಂದರು.ಒಂದು ಹಂತದಲ್ಲಿ 124 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಪ್ರೋಟಿಯಸ್ 127 ರನ್ ಆಗುವಷ್ಟರಲ್ಲಿ ಏಳು ವಿಕೆಟ್‌ಗಳನ್ನು ಆಹುತಿ ನೀಡಿತ್ತು. ಅಂದರೆ ಮೂರು ರನ್ ಸೇರಿಸುವಷ್ಟರಲ್ಲಿ ನಾಲ್ಕು ವಿಕೆಟ್ ಪತನವಾಗಿದ್ದವು. ಇನ್ನೆಲ್ಲಿ ದಕ್ಷಿಣ ಆಫ್ರಿಕಾ ಸುಧಾರಿಸಿಕೊಳ್ಳಲು ಸಾಧ್ಯ?ಕೊನೆಯಲ್ಲಿ ವಾನ್ ವಿಕ್ ಹಾಗೂ ಸ್ಟೇನ್ ನಡೆಸಿದ ಹೋರಾಟ ಆರುವ ಮುನ್ನ ಜೋರಾಗಿ ಉರಿಯುವ ದೀಪದಂತೆ! ಎಂಟನೇ ವಿಕೆಟ್‌ಗೆ ಇವರಿಬ್ಬರು 33 ರನ್ ಸೇರಿಸಿದ್ದಕ್ಕೆ ನ್ಯಾಯ ಸಿಗಲಿಲ್ಲ. ಕಾರಣ ಐದು ರನ್‌ಗಳ ಅಂತರದಲ್ಲಿ ಕೊನೆಯ ಮೂರು ವಿಕೆಟ್‌ಗಳು ಪತನವಾದವು. ಈ ಮೂಲಕ ಅಜೇಯ ನಾಗಾಲೋಟ ಮುಂದುವರಿಸಿದ್ದ ಸ್ಮಿತ್ ಪಡೆಗೆ ಇಂಗ್ಲೆಂಡ್ ಆಟಗಾರರು ಬ್ರೇಕ್ ಹಾಕಿದರು.ಆದರೆ ದಿನದ ಮೊದಲ ಓವರ್‌ನಲ್ಲಿಯೇ ಇಂಗ್ಲೆಂಡ್ ಬ್ಯಾಟಿಂಗ್ ಹಣೆಬರಹ ಬಯಲಾಯಿತು. ಅಚ್ಚರಿ ನಿರ್ಧಾರ ತೆಗೆದುಕೊಳ್ಳುತ್ತಿರುವ ನಾಯಕ ಸ್ಮಿತ್ ಮೊದಲ ಓವರ್ ಬೌಲ್ ಮಾಡಲು ಎಡಗೈ ಸ್ಪಿನ್ನರ್ ರಾಬಿನ್ ಪೀಟರ್ಸನ್‌ಗೆ ಚೆಂಡು ನೀಡಿದರು. ಇದೊಂದು ಅವರ ಧೈರ್ಯದ ನಿರ್ಧಾರ ಎನ್ನಬಹುದು.ಎದುರಾಳಿಯ ಈ ತಂತ್ರಕ್ಕೆ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳು ಕಕ್ಕಾಬಿಕ್ಕಿಯಾದರು. ಪರಿಣಾಮ ಮೊದಲ ಓವರ್‌ನಲ್ಲಿಯೇ ಸ್ಟ್ರಾಸ್ ಹಾಗೂ ಕೆವಿನ್ ಪೀಟರ್ಸನ್ ಅವರ ವಿಕೆಟ್ ಉರುಳಿ ಬಿದ್ದವು. ಟಾಸ್ ಗೆದ್ದು ಬ್ಯಾಟಿಂಗ್ ಮೊರೆ ಹೋಗಿದ್ದೇ ತಪ್ಪಾಯಿತಾ ಎಂಬ ಚಡಪಡಿಕೆ ಸ್ಟ್ರಾಸ್ ಮನದಲ್ಲಿ ಶುರುವಾಯಿತು. ಎಡಗೈ ಸ್ಪಿನ್ನರ್ ರಾಬಿನ್ ಹಾಗೂ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿದರು. ಆದರೆ ಕೊನೆಯಲ್ಲಿ ಇಂಗ್ಲಿಷರ ಮೊಗದಲ್ಲಿ ಮೂಡಿದ್ದು ಜಯದ ನಗು!ಇಂಗ್ಲೆಂಡ್ 45.4 ಓವರ್‌ಗಳಲ್ಲಿ 171

ಆ್ಯಂಡ್ರ್ಯೂ ಸ್ಟ್ರಾಸ್ ಸಿ ಡಿವಿಲಿಯರ್ಸ್ ಬಿ ರಾಬಿನ್ ಪೀಟರ್ಸನ್ 00

ಕೆವಿನ್ ಪೀಟರ್ಸನ್ ಸಿ ಕಾಲಿಸ್ ಬಿ ರಾಬಿನ್ ಪೀಟರ್ಸನ್  02

ಜೊನಾಥನ್ ಟ್ರಾಟ್ ಸಿ ಅಂಡ್ ಬಿ ಇಮ್ರಾನ್ ತಾಹಿರ್  52

ಇಯಾನ್ ಬೆಲ್ ಸಿ ಅಂಡ್ ಬಿ ರಾಬಿನ್ ಪೀಟರ್ಸನ್  05

ರವಿ ಬೋಪಾರ ಎಲ್‌ಬಿಡಬ್ಲ್ಯು ಬಿ ಮಾರ್ನ್ ಮಾರ್ಕೆಲ್  60

ಮ್ಯಾಟ್ ಪ್ರಯೋರ್ ಸಿ ವಾನ್ ವಿಕ್ ಬಿ ಮಾರ್ನ್ ಮಾರ್ಕೆಲ್ 10

ಮೈಕಲ್ ಯಾರ್ಡಿ ಸಿ ಪೀಟರ್ಸನ್ ಬಿ ಇಮ್ರಾನ್ ತಾಹಿರ್  03

ಟಿಮ್ ಬೆಸ್ನನ್ ಎಲ್‌ಬಿಡಬ್ಲ್ಯು ಬಿ ಡೇಲ್ ಸ್ಟೇನ್  01

ಗ್ರೇಮ್ ಸ್ವಾನ್ ಸಿ ಜೆ.ಪಿ.ಡುಮಿನಿ ಬಿ ಇಮ್ರಾನ್ ತಾಹಿರ್  16

ಸ್ಟುವರ್ಟ್ ಬ್ರಾರ್ಡ್ ಎಲ್‌ಬಿಡಬ್ಲ್ಯು ಬಿ ಇಮ್ರಾನ್ ತಾಹಿರ್ 00

ಜೇಮ್ಸ್ ಆ್ಯಂಡರ್ಸನ್ ಔಟಾಗದೆ  02

ಇತರೆ (ಬೈ-1, ಲೆಗ್‌ಬೈ-7, ವೈಡ್-12)  20

ವಿಕೆಟ್ ಪತನ: 1-1(ಸ್ಟ್ರಾಸ್; 0.3); 2-3 (ಪೀಟರ್ಸನ್; 0.6); 3-15 (ಬೆಲ್; 4.4); 4-114 (ಟ್ರಾಟ್; 29.5); 5-134 (ಪ್ರಿಯೊರ್; 35.3); 6-148  (ಬೋಪಾರ; 39.3); 7-149 (ಬ್ರೆಸ್ನನ್; 40.1); 8-161 (ಯಾರ್ಡಿ; 43.2); 9-161 (ಬ್ರಾಡ್; 43.5); 10-171 (ಸ್ವಾನ್; 45.4).

ಬೌಲಿಂಗ್: ರಾಬಿನ್ ಪೀಟರ್ಸನ್ 8-2-22-3 (ವೈಡ್-1), ಡೇಲ್ ಸ್ಟೇನ್ 9-0-37-1 (ವೈಡ್-1), ಮಾರ್ನ್ ಮಾರ್ಕೆಲ್ 7-0-16-2 (ವೈಡ್-1), ಜಾಕ್ ಕಾಲಿಸ್ 4-1-14-0 (ವೈಡ್-5), ಇಮ್ರಾನ್ ತಾಹಿರ್ 8.4-1-38-4 (ವೈಡ್-3), ಫಾಫ್ ಡು ಪ್ಲೆಸಿಸ್ 5-0-16-0, ಜೆ.ಪಿ.ಡುಮಿನಿ 4-0-20-0 (ವೈಡ್-1).ದಕ್ಷಿಣ ಆಫ್ರಿಕಾ 47.4 ಓವರ್‌ಗಳಲ್ಲಿ 165

ಹಾಶಿಮ್ ಆಮ್ಲಾ ಬಿ ಸ್ಟುವರ್ಟ್ ಬ್ರಾಡ್  42

ಗ್ರೇಮ್ ಸ್ಮಿತ್ ಸಿ ಮ್ಯಾಟ್ ಪ್ರಿಯೊರ್ ಬಿ ಗ್ರೇಮ್ ಸ್ವಾನ್  22

ಜಾಕ್ ಕಾಲಿಸ್ ಸಿ  ಪ್ರಿಯೊಟ್ ಬಿ ಸ್ಟುವರ್ಟ್ ಬ್ರಾಡ್  15

ಎಬಿ ಡಿವಿಲಿಯರ್ಸ್ ಬಿ ಜೇಮ್ಸ್ ಆ್ಯಂಡರ್ಸನ್  25

ಫಫ್ ಡು ಪ್ಲೆಸಿಸ್ ರನ್‌ಔಟ್ (ಬೆಲ್/ಪ್ರಿಯೊರ್)  17

ಜೀನ್ ಪಾಲ್ ಡುಮಿನಿ ಬಿ ಜೇಮ್ಸ್ ಆ್ಯಂಡರ್ಸನ್  00

ವಾನ್ ವಿಕ್ ಬಿ ಟಿಮ್ ಬ್ರೆಸ್ನನ್  13

ರಾಬಿನ್ ಪೀಟರ್ಸನ್ ಸಿ  ಪ್ರಿಯೊರ್ ಬಿ ಮೈಕಲ್ ಯಾರ್ಡಿ  03

ಡೇಲ್ ಸ್ಟೇನ್ ಎಲ್‌ಬಿಡಬ್ಲ್ಯು ಬಿ ಸ್ಟುವರ್ಟ್ ಬ್ರಾಡ್  20

ಮಾರ್ನ್ ಮಾರ್ಕೆಲ್ ಸಿ  ಪ್ರಿಯೊರ್ ಬಿ ಸ್ಟುವರ್ಟ್ ಬ್ರಾಡ್  01

ಇಮ್ರಾನ್ ತಾಹಿರ್ ಔಟಾಗದೆ  01

ಇತರೆ (ಲೆಗ್‌ಬೈ-2, ವೈಡ್-4)  06

ವಿಕೆಟ್ ಪತನ: 1-63 (ಸ್ಮಿತ್; 14.1); 2-75 (ಆಮ್ಲಾ; 17.3); 3-82 (ಕಾಲಿಸ್; 19.2); 4-124 (ಡಿವಿಲಿಯರ್ಸ್; 31.6); 5-124 (ಪ್ಲೆಸಿಸ್; 32.2); 6-124 (ಡುಮಿನಿ; 33.4); 7-127 (ಪೀಟರ್ಸನ್; 36.6); 8-160 (ವಾನ್ ವಿಕ್; 46.2); 9-164 (ಸ್ಟೇನ್; 47.1); 10-165 (ಮಾರ್ಕೆಲ್; 47.4).

ಬೌಲಿಂಗ್: ಮೈಕಲ್ ಯಾರ್ಡಿ 9-1-46-1, ಜೇಮ್ಸ್ ಆ್ಯಂಡರ್ಸನ್ 6-0-16-2 (ವೈಡ್-3), ಟಿಮ್ ಬ್ರೆಸ್ನನ್ 8-1-27-1, ಗ್ರೇಮ್ ಸ್ವಾನ್ 10-2-29-1, ಸ್ಟುವರ್ಟ್ ಬ್ರಾಡ್ 6.4-0-15-4, ಕೆವಿನ್ ಪೀಟರ್ಸನ್ 8-0-30-0

ಫಲಿತಾಂಶ: ಇಂಗ್ಲೆಂಡ್‌ಗೆ 6 ರನ್‌ಗಳ ಜಯ.

ಪಂದ್ಯ ಪುರುಷೋತ್ತಮ: ರವಿ ಬೋಪಾರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.