ಭಾನುವಾರ, ಏಪ್ರಿಲ್ 18, 2021
31 °C

ಇಂಡಿಯಾ ಓಪನ್ ಬ್ಯಾಡ್ಮಿಂಟನ್:ಹಿಂದೆ ಸರಿದ ಜ್ವಾಲಾ- ದಿಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಜ್ವಾಲಾ ಗುಟ್ಟಾ ಮತ್ತು ವಿ. ದಿಜು ಅವರು ಇಂಡಿಯಾ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಿಂದ ಹಿಂದೆ ಸರಿದಿದ್ದಾರೆ.ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವ ದಿಜು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕಾರಣ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಇಂಡಿಯಾ ಓಪನ್ ಟೂರ್ನಿ ಏಪ್ರಿಲ್ 26 ರಿಂದ ಮೇ 1ರ ವರೆಗೆ ನಡೆಯಲಿದೆ.‘ದಿಜು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಕಾರಣ ನಮಗೆ ಇಂಡಿಯಾ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ತವರು ನೆಲದಲ್ಲಿ ನಡೆಯುವ ಈ ಪ್ರತಿಷ್ಠಿತ ಟೂರ್ನಿಯ ಮಿಶ್ರ ಡಬಲ್ಸ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡದ್ದು ನಿರಾಸೆಯ ವಿಚಾರ. ಆದರೆ ದಿಜು ಅವರ ಆರೋಗ್ಯವೂ ಇಲ್ಲಿ ಮುಖ್ಯ’ ಎಂದು ಜ್ವಾಲಾ ತಿಳಿಸಿದರು.ದಿಜು ಕಳೆದ ಒಂದು ವರ್ಷದಿಂದ ಬೆನ್ನುನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ನೋವನ್ನು ಲೆಕ್ಕಿಸದೆ ಅವರು ಕೆಲವು ಟೂರ್ನಿಗಳಲ್ಲಿ ಪಾಲ್ಗೊಂಡಿದ್ದರು. ಕೊನೆಗೂ ಶಸ್ತ್ರಕ್ರಿಯೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಕಳೆದ ವರ್ಷ ನಡೆದ ಟೂರ್ನಿಯಲ್ಲಿ ಜ್ವಾಲಾ ಮತ್ತು ದಿಜು ಚಾಂಪಿಯನ್ ಆಗಿದ್ದರು. ಆದರೆ ಅಂದು ಈ ಟೂರ್ನಿಗೆ ಸೂಪರ್ ಸೀರಿಸ್ ಎಂಬ ಹಣೆಪಟ್ಟಿ ಲಭಿಸಿರಲಿಲ್ಲ. ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿ ಎನಿಸಿಕೊಂಡಿತ್ತು.ಜ್ವಾಲಾ ಅವರು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ ಜೊತೆ ಕಣಕ್ಕಿಳಿಯಲಿದ್ದಾರೆ. ‘ನಾನು ಮತ್ತು ಅಶ್ವಿನಿ ಹೊಂದಾಣಿಕೆಯಿಂದ ಆಡುತ್ತಿದ್ದೇವೆ. ಕಾಮನ್‌ವೆಲ್ತ್ ಕೂಟದಲ್ಲಿ ಪ್ರಬಲ ಸವಾಲು ಎದುರಾದರೂ ನಮಗೆ ಚಿನ್ನ ಗೆಲ್ಲಲು ಸಾಧ್ಯವಾಗಿತ್ತು. ಇಂಡಿಯಾ ಓಪನ್ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ’ ಎಂದು ಜ್ವಾಲಾ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.