ಶನಿವಾರ, ಏಪ್ರಿಲ್ 17, 2021
22 °C

ಇಂದಿನಿಂದ ಪ್ಲಾಸ್ಟಿಕ್ ನಿಷೇಧದ ಪರ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಹು ನಿರೀಕ್ಷೆಯ ಪ್ಲಾಸ್ಟಿಕ್ ನಿಷೇಧ ಮಂಗಳೂರು ನಗರ ಮತ್ತು ತಾಲ್ಲೂಕಿನಲ್ಲಿ ಬಂದೇಬಿಟ್ಟಿದೆ. ರಾಜ್ಯೋತ್ಸವ ದಿನವಾದ ಗುರುವಾರದಿಂದ ಬಳಸಿ ಎಸೆಯುವ ಪ್ಲಾಸ್ಟಿಕ್‌ಗಳ ಬಳಕೆ, ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿಷೇಧವೇ ಪ್ರಮುಖ ವಿಚಾರವೂ ಆಗಲಿದೆ.ಇದೆಲ್ಲ ಒಮ್ಮಿಂದೊಮ್ಮೆಲೇ ಆಗುವ ಕೆಲಸವಲ್ಲ. ಕಳೆದ ಕೆಲವು ದಿನಗಳಿಂದಲೂ ಈ ಬಗ್ಗೆ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಲೇ ಬಂದಿದೆ. ಅತ್ತ ಪ್ಲಾಸ್ಟಿಕ್ ಉದ್ಯಮ ಸಹ ತನ್ನ ಕೆಲವು ಆತಂಕವನ್ನು ಬಹಿರಂಗಪಡಿಸಿದೆ. ಮುಖ್ಯವಾಗಿ ಪರಿಸರದ ಮೇಲಿನ ಕಾಳಜಿಯಿಂದ ಈ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲಾಗಿದ್ದು, ಡಿಸೆಂಬರ್ ತಿಂಗಳಿಂದ ದಂಡ ಪಾವತಿಸುವ ಅನಿವಾರ್ಯತೆ ಎದುರಾಗಲಿದೆ.ಗುರುವಾರ ರಾಜ್ಯೋತ್ಸವ ಸಂದರ್ಭದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಮಂಗಳಾ ಕ್ರೀಡಾಂಗಣ ಬಳಿಯ ಸ್ಕೌಟ್ಸ್ ಭವನದಿಂದ ಜಾಥಾ ಏರ್ಪಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಇದಕ್ಕೆ ಚಾಲನೆ ನೀಡುವರು ಎಂದು ಜಿಲ್ಲಾಧಿಕಾರಿ ಎನ್.ಎಸ್.ಚನ್ನಪ್ಪ ಗೌಡ ಬುಧವಾರ ತಮ್ಮ ಕಚೇರಿಯಲ್ಲಿ ತಿಳಿಸಿದರು.ಮೀನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಅಲ್ಲಿ ಆರು ರೂಪಾಯಿ ಬೆಲೆಯ ಟೆರಿಕಾಟ್ ಚೀಲಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ನಿರ್ವಹಣೆ ಮಾಡಿದಲ್ಲಿ ಇದನ್ನು ಹಲವು ಬಾರಿ ಬಳಸಬಹುದು. ಬುಧವಾರ ಬೆಳಿಗ್ಗೆ ಅಲ್ಲಿಗೆ ಭೇಟಿ ನೀಡಿ ಚೀಲದ ಗುಣಮಟ್ಟ, ಮರುಬಳಕೆ ಬಗ್ಗೆ ವಿವರ ಪಡೆದುಕೊಂಡಿರುವುದಾಗಿ ಜಿಲ್ಲಾಧಿಕಾರಿ ಅವರು ಹೇಳಿದರು.`ಗಡುವಿನ ನಂತರವೂ ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ 2011ರ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಮತ್ತು ವಿಲೇವಾರಿ ಕಾಯ್ದೆ ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ. ನವೆಂಬರ್ 1 ರಿಂದ 15ರವರೆಗೆ ವಾಹನವೊಂದರಲ್ಲಿ ಇಬ್ಬರು ಗೃಹರಕ್ಷಕ ದಳ ಸಿಬ್ಬಂದಿ ಸಂಚಾರ ಮಾಡಲಿದ್ದು, ಪ್ಲಾಸ್ಟಿಕ್ ಚೀಲ ಬಳಸುವವರಿಗೆ ತಿಳಿಹೇಳಲಿದ್ದಾರೆ. ಬಟ್ಟೆಯ ಚೀಲ ನೀಡಲಿದ್ದಾರೆ. ನಂತರ 500 ರೂಪಾಯಿಗಳಿಂದ 1000 ರೂಪಾಯಿವರೆಗೆ ದಂಡ ವಿಧಿಸಲಾಗುವುದು~ ಎಂದು ಹೇಳಿದರು.ಅಂಗಡಿಗಳಲ್ಲೂ ಪೇಪರ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಮನೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಸ ಸಂಗ್ರಹಿಸುವ ಬದಲು ಕಸದ ಬಕೆಟ್‌ಗಳಲ್ಲಿ ಸಂಗ್ರಹಿಸಿ ಅದನ್ನು ಕಸಸಂಗ್ರಹಿಸುವವರಿಗೆ ನೀಡಬೇಕು. ಪಾಲಿಕೆಯೂ ಈ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬುಧವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಆಯುಕ್ತ ಹರೀಶ್ ಕುಮಾರ್ ಅವರು ಪ್ಲಾಸ್ಟಿಕ್ ನಿಷೇಧ ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ ಎಂದು ತಿಳಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ತಿಳಿವಳಿಕೆ ನೀಡುವ ಕಾರ್ಯ ನಡೆಯಲಿದೆ. ಡಿಸೆಂಬರ್‌ನಿಂದ ದಂಡ ವಿಧಿಸುವ ಕಾರ್ಯ ಆರಂಭವಾಗಲಿದೆ. ಜಿಲ್ಲಾಡಳಿತ ಎಂತಹ ನಿರ್ಧಾರ ಕೈಗೊಳ್ಳುತ್ತದೋ ಅದನ್ನು ಪಾಲಿಕೆ ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‌ನ ಹರಿನಾಥ್ ಅವರು ಪ್ಲಾಸ್ಟಿಕ್ ನಿಷೇಧ ವಿಷಯ ಪ್ರಸ್ತಾಪಿಸಿದ್ದರು.ಆಯುಕ್ತರು ಮಂಗಳವಾರ ತಮ್ಮ ಕಚೇರಿಯಲ್ಲಿ ವ್ಯಾಪಾರಸ್ಥರು, ಬಹುಮಹಡಿ ಮಾಲೀಕರು, ನಿವಾಸಿಗಳ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಅವರ ಸಲಹೆಗಳನ್ನು ಆಲಿಸಿದ್ದರು. ಅಡ್ಡಾದಿಡ್ಡಿ ಪ್ಲಾಸ್ಟಿಕ್ ಎಸೆಯುವವರ ವಿರುದ್ಧ ದಂಡ ನಿಶ್ಚಿತ ಎಂದು ಎಚ್ಚರಿಸಿದ್ದರು.ಇನ್ನು 2-3 ತಿಂಗಳಲ್ಲಿ ಇಡೀ ನಗರದ ಮನೆಮನೆಗಳಿಂದ ಮಹಾನಗರಪಾಲಿಕೆಯವರೇ ಕಸವನ್ನು ಸಂಗ್ರಹಿಸಲಿದ್ದು, ಪಾಲಿಕೆಯ 600 ಕಸ ಸಂಗ್ರಹಗಾರಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಹೇಳಿದ್ದರು.ಇನ್ನು ಮುಂದೆ ಯಾವುದೇ ರಾಜಕೀಯ ಸಮಾವೇಶಗಳು ನಡೆಯುವಾಗ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧಿಸುವುದಾಗಿ ಹೇಳಿದ್ದ ಅವರು, ಸಾರ್ವಜನಿಕರು, ವಾಣಿಜ್ಯೋದ್ಯಮಿಗಳು ಪರಿಸರ ಸ್ನೇಹಿ ಬಟ್ಟೆ, ಬ್ಯಾಗುಗಳನ್ನು, ಕೈಚೀಲಗಳನ್ನು ಅಂಗಡಿ, ಮಾರುಕಟ್ಟೆಗಳಿಗೆ ಹೋಗುವಾಗ ಜತೆಯಲ್ಲಿ ಕೊಂಡೊಯ್ಯುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.