ಸೋಮವಾರ, ಏಪ್ರಿಲ್ 12, 2021
26 °C

ಇಂದಿನಿಂದ ಹೊಸ ಮರಳು ನೀತಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಸರ್ಕಾರದ ಹೊಸ ಮರಳು ನೀತಿ -2011 ಏಪ್ರಿಲ್ ಒಂದರಿಂದಲೇ ಜಾರಿಗೆ ಬರಲಿದ್ದು, ಜಿಲ್ಲೆಯಲ್ಲೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ಮರಳು ವಹಿವಾಟು ಅಥವಾ ಸಾಗಾಣಿಕೆ ಮಾಡಿದರೆ ಅಂಥವರಿಗೆ ಭಾರಿ ಪ್ರಮಾಣದ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್ ತಿಳಿಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.‘ಜಿಲ್ಲೆಯಲ್ಲಿ ಒಟ್ಟು 31 ಮರಳು ನಿಕ್ಷೇಪಗಳನ್ನು ಗುರುತಿಸಲಾಗಿದೆ. ಒಟ್ಟಾರೆ 341 ಎಕರೆ ವಿಸ್ತೀರ್ಣದಲ್ಲಿ 9,56,600 ಕ್ಯೂ. ಮೀಟರ್ ಮರಳು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.ಪ್ರಥಮ ಹಂತದಲ್ಲಿ 16 ಜಾಗಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಇದರಲ್ಲಿ 10 ಬ್ಲಾಕ್‌ಗಳಲ್ಲಿ ಡಿಪೋ ಸೇಲ್ಸ್  ಹಾಗೂ ಆರು ಕಡೆ ನೇರ ಮಾರಾಟ ವ್ಯವಸ್ಥೆ ಮಾಡಲಾಗಿದೆ.ಗಣಿಗಾರಿಕೆ ನಿಯಂತ್ರಣಕ್ಕಾಗಿ ಹಿಂದೆ ಇದ್ದ ಮರಳು ಉಸ್ತುವಾರಿ ಸಮಿತಿಗೆ ಹೊಸ ರೂಪ ನೀಡಿ ‘ಜಿಲ್ಲಾ ಮರಳು ಗಣಿಗಾರಿಕೆ ಪರವಾನಿಗೆ ಮಂಜೂರಾತಿ/ಉಸ್ತುವಾರಿ ಸಮಿತಿ’ ಎಂದು ರೂಪಿಸಿದ್ದು ಲೋಕೋಪಯೋಗಿ ಇಲಾಖೆ ಕಾರ್ಯಪಾಲ ಅಭಿಯಂತರು ಇದಕ್ಕೆ ಮುಖ್ಯಸ್ಥರಾಗಿರುತ್ತಾರೆ.ಮರಳು ಬೇಕಾದವರು ಈ ಸಮಿತಿಯ ಅಧ್ಯಕ್ಷರ  ಹೆಸರಿನಲ್ಲಿ ನಿಗದಿತ ಮೊತ್ತದ ಡಿ.ಡಿ. ಪಡೆದು ಸ್ಥಳಕ್ಕೆ ಹೋದರೆ ಬೇಡಿಕೆ ನೀಡಿರುವಷ್ಟು ಮರಳು ಒದಗಿಸಲಾಗುವುದು. ಅಕ್ರಮವನ್ನು ತಡೆಗಟ್ಟಬೇಕೆಂಬ ಉದ್ದೇಶದಿಂದ ನಗದು ಹಣ ಸ್ವೀಕರಿಸಲು ಅವಕಾಶವನ್ನೇ ನೀಡಿಲ್ಲ ಎಂದರು.‘ಗಣಿಗಾರಿಕೆಯ ವೆಚ್ಚದ ಆಧಾರದಲ್ಲಿ ಮರಳಿನ ದರವನ್ನು ನಿಗದಿ ಮಾಡಲಾಗಿದೆ. ಹೊಳೆ ನರಸೀಪುರ ಹಾಗೂ ಅರಕಲಗೂಡು ತಾಲ್ಲೂಕುಗಳಲ್ಲಿ ನೀರಿನಿಂದ ಮರಳು ತೆಗೆಯಬೇಕಾಗಿದ್ದು ಕ್ಯೂ. ಮೀಟರ್‌ಗೆ 900 ರೂಪಾಯಿ ನಿಗದಿ ಮಾಡಲಾಗಿದೆ. ಅದೇ ಆಲೂರು, ಬೇಲೂರು, ಸಕಲೇಶಪುರ ವ್ಯಾಪ್ತಿಯಲ್ಲಿ 500 ರೂಪಾಯಿ ನಿಗದಿ ಮಾಡಲಾಗಿದೆ ಎಂದರು.‘ಎಲ್ಲ ಗಣಿಗಾರಿಕೆ ಕೇಂದ್ರಗಳಲ್ಲೂ ಆರು ಮಂದಿ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಹೊರಗುತ್ತಿಗೆ ಮೂಲಕ ಸಿಬ್ಬಂದಿಯ ನೇಮಕ ಮಾಡಲು ತೀರ್ಮಾನಿಸಿದ್ದು ಇದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಒಮ್ಮೆ ಡಿ.ಡಿ ಪಡೆದು ಮರಳು ತರಲು ಸ್ಥಳಕ್ಕೆ ಹೋಗುವ ಗ್ರಾಹಕರಿಗೆ ಒಂದು ಮಂಜೂರು ಪತ್ರ ನೀಡಲಾಗುತ್ತದೆ. ಅದರಲ್ಲಿ ಎಷ್ಟು ಮರಳು ಖರೀದಿಯಾಗಿದೆ. ಎಲ್ಲಿಂದ ಎಲ್ಲಿಗೆ ಸಾಗಾಣಿಕೆ ನಡೆಸಲಾಗುತ್ತಿದೆ, ಯಾವ ರಸ್ತೆಯಲ್ಲಿ ಹೋಗಬೇಕು ಎಂಬ ಎಲ್ಲ ವಿಚಾರಗಳನ್ನೂ ನಮೂದಿಸಲಾಗುತ್ತದೆ.

 

ಖರೀದಿಸಿದ ಜಾಗದಿಂದ ತಲುಪಬೇಕಾಗುವ ಜಾಗಕ್ಕೆ ಸಾಗಾಣಿಕೆ ನಡೆಸಲು ಬೇಕಾಗುವ ಕಾಲಾವಧಿಯನ್ನು ಲೆಕ್ಕಹಾಕಿ ಅಷ್ಟೇ ಅವಧಿಗೆ ಸಾಗಾಣಿಕೆ ಪರವಾನಿಗೆ ನೀಡಲಾಗುತ್ತದೆ. ಇದರಿಂದ ಅಕ್ರಮ ಸಾಗಾಣಿಕೆಗೆ ಅವಕಾಶವೇ ಲಭಿಸುವುದಿಲ್ಲ. ಮಾತ್ರವಲ್ಲದೆ ಓವರ್ ಲೋಡಿಂಗ್ ಸಮಸ್ಯೆಯೂ ನಿಯಂತ್ರಿಸಿದಂತಾಗುತ್ತದೆ. ‘ನಿರಂತರ ವಾಹನಗಳ ಸಂಚಾರದಿಂದ ಗ್ರಾಮೀಣ ಭಾಗದ ರಸ್ತೆಗಳು ಕೆಡುವ ಸಾಧ್ಯತೆ ಇರುವುದರಿಂದ ಅದರ ದುರಸ್ತಿಗಾಗಿ ಬಂದ ಆದಾಯದಲ್ಲಿ ಶೇ 50ರಷ್ಟನ್ನು ಆಯಾ ಗ್ರಾಮ ಪಂಚಾಯಿತಿಗೆ ನೀಡಲಾಗುವುದು. ಉಳಿದ ಶೇ 40ನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಶೇ 10 ಆದಾಯವನ್ನು ಜಿಲ್ಲಾಡಳಿತಕ್ಕೆ ನೀಡಲು ತೀರ್ಮಾನಿಸಲಾಗಿದೆ ಎಂದರು.ಹೊಸ ಮರಳು ನೀತಿಯಲ್ಲಿ ಮರಳು ದಾಸ್ತಾನಿಗೆ ಅಥವಾ ಸೆಕೆಂಡ್ ಸೇಲ್‌ಗೆ ಅವಕಾಶವಿಲ್ಲ. ಅಕ್ರಮ ಮರಳು ಸಾಗಾಣಿಕೆ ನಡೆಸಿದರೆ ಅಥವಾ ಸಂಗ್ರಹಿಸಿಟ್ಟರೆ ಅಂಥವರಿಗೆ ದೊಡ್ಡ ಪ್ರಮಾಣದ ದಂಡ ಹೇರುವುದರ ಜತೆಗೆ ಕಾನೂನು ಕ್ರಮವನ್ನೂ ಕೈಗೊಳ್ಳಲಾಗುವುದು. ಈಗಾಗಲೇ ಮರಳನ್ನು ಸಂಗ್ರಹಿಸಿ ಇಟ್ಟಿರುವವರು ಈ ಬಗ್ಗೆ ಸಮಿತಿಗೆ ಮಾಹಿತಿ ನೀಡಿ ಅದರ ಮಾರಾಟ/ಸಾಗಾಟಕ್ಕೆ ಅನುಮತಿ ಪಡೆದುಕೊಳ್ಳಬಹುದು’ ಎಂದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್  ರಾಮಚಂದ್ರ, ಭೂವಿಜ್ಞಾನ ಸಂಸ್ಥೆಯ ಹರೀಶ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.