ಬುಧವಾರ, ಜುಲೈ 15, 2020
27 °C

ಇಂಪಿನ ಗಾಯನ: ಮಿಂಚಿದ ನರ್ತನ

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಇಂಪಿನ ಗಾಯನ: ಮಿಂಚಿದ ನರ್ತನ

ತನ್ನ ಕಲಾ ಜೀವನದಲ್ಲಿ ನಿರಂತರ ಪ್ರಗತಿಯನ್ನು ಸಾಧಿಸುತ್ತಿರುವ ಯುವ ಭರತನಾಟ್ಯ ಕಲಾವಿದೆ ಶ್ವೇತಾ ಲಕ್ಷ್ಮಣ್ ಅವರು ರಾಜಾಜಿನಗರದ ಡಾ. ರಾಜಕುಮಾರ್ ಕಲಾಕ್ಷೇತ್ರದಲ್ಲಿ ಪ್ರದರ್ಶನ ನೀಡಿ ಭೇಷ್ ಅನಿಸಿಕೊಂಡರು. ಪುತಿನ ಅವರ ‘ಹರಿನಾಭಿ ಸರಣ’ ರಚನೆಯನ್ನು ಆಧರಿಸಿದ ಏಕ ವ್ಯಕ್ತಿ ನೃತ್ಯ ರೂಪಕವನ್ನು ಅವರು ಹರವಿದ ಪರಿ ಪ್ರಶಂಸಾರ್ಹ.ಸಾತ್ವಿಕಾಭಿನಯದ ಪ್ರಾಶಸ್ತ್ಯದೊಂದಿಗೆ ಸೀತಾಪಹರಣ ಪ್ರಸಂಗವನ್ನು ಅರ್ಥಪೂರ್ಣವಾಗಿ ಅಭಿನಯಿಸಿದರು. ಕಥಾ ಪ್ರವಾಹದ ಮಧ್ಯೆ ನೃತ್ತವನ್ನು ಅಳವಡಿಸಿ ಸೊಗಸಾಗಿ ನಿರ್ವಹಿಸಿ ರಸಿಕರನ್ನು ರಂಜಿಸಿದರು. ಸಫಲ ನರ್ತಕಿಯ ಸಕಲ ಸಲ್ಲಕ್ಷಣಗಳ ಶ್ವೇತಾ ಜಾವಳಿಯನ್ನು ತೋರುವಾಗ ನಾಯಕಿಯಾಗಿ ಮೆರೆದರು. ಬಸಂತಬಹಾರ್ ತಿಲ್ಲಾನ ಸೂಕ್ತ ಸಮಾಪ್ತಿಯನ್ನೊದಗಿಸಿತು.ಶ್ರೇಯಸ್ (ನಟುವಾಂಗ), ನೀಲಾ ರಾಮಾನುಜಂ (ಗಾಯನ), ನಟರಾಜಮೂರ್ತಿ (ಕೊಳಲು) ಮತ್ತು ಎಸ್.ವಿ.ಗಿರಿಧರ್ (ಮೃದಂಗ) ಸಹಕಲಾವಿದರೆನಿಸಿಕೊಂಡರು.ಕಲ್ಯಾಣಿಯ ಮೋಹ

ಯುವ ಗಾಯಕಿ- ಸೋದರಿಯರಾದ ರಂಜನಿ ಮತ್ತು ಗಾಯತ್ರಿ ಅವರಿಗೆ ಕಲ್ಯಾಣಿ ರಾಗದ ಬಗ್ಗೆ ವಿಶೇಷ ಒಲವಿದ್ದಂತೆ ತೋರುತ್ತದೆ. ಇತ್ತೀಚೆಗಷ್ಟೇ ನಗರದಲ್ಲಿ ನಡೆದ ಅವರ ಕಛೇರಿಯಲ್ಲಿ ಅವರು ಅದೇ ರಾಗವನ್ನು ವಿಸ್ತಾರಪೂರ್ವಕವಾಗಿ ಹಾಡಿದ್ದ ನೆನಪು ಹಸಿರಾಗಿರುವಾಗಲೇ ಕಳೆದ ವಾರ ಶ್ರೀರಾಮ ಲಲಿತ ಕಲಾ ಮಂದಿರದ ಆಶ್ರಯದಲ್ಲಿ ಮತ್ತದೇ ರಾಗವನ್ನು ಹಾಡಿದರು. ಇದು ಹೊಸ ಅನುಭವ ಉಂಟು ಮಾಡಲಿಲ್ಲ. ಅಲ್ಲದೆ ಅವರ ಕಲ್ಪನಾಸ್ವರ ವಿನ್ಯಾಸವೂ ಬಹುತೇಕ ತದ್ವತ್ತಾಗಿತ್ತು.ದಾಸರ ‘ಶರಣು ಸಿದ್ಧಿವಿನಾಯಕ’ನನ್ನು ಸೌರಾಷ್ಟ್ರ ರಾಗದಲ್ಲಿ ಸ್ವರಾರ್ಚನೆಯೊಂದಿಗೆ ನಮಿಸಿದ್ದು ಕಛೇರಿಗೆ ಕಲಾತ್ಮಕ ಆರಂಭ ಒದಗಿತು. ‘ತೆರೆ ತೀಯಕರಾದ’ (ಗೌಳಿಪಂತು) ಮತ್ತು ಮೋಹನ ರಾಗದ ಆಲಾಪನೆ ಅಣ್ಣಮಾಚಾರ್ಯರ ‘ಇಂದಿರಾನಾಮಮು’ ಕೀರ್ತನೆಯನ್ನು ಸೊಗಸುಗೊಳಿಸಿತು. ಆದರೆ ಸ್ವರಪ್ರಸ್ತಾರದಲ್ಲಿ ಒಂದು ರೀತಿಯ ಗೊಂದಲ ಬೆರಗುಗೊಳಿಸಿತು. ಆಲಾಪನೆಯೊಂದಿಗೆ ನಿರೂಪಿತಗೊಂಡ ಸಾರಮತಿ (ಮೋಕ್ಷಮುಗಲದಾ) ನೆರೆವಲ್ ಮತ್ತು ಸ್ವರಗಳೊಂದಿಗೆ ಮತ್ತಷ್ಟು ಕಳೆ ಕಟ್ಟಬಹುದಿತ್ತು.ಏಕಪ್ರಕಾರದ ಮನೋಧರ್ಮ, ಪರಸ್ಪರ ಹೊಂದಿದ ಕಲಾ ಪ್ರಾವೀಣ್ಯ, ಕಛೇರಿ ಕುಶಲತೆ ಮುಂತಾದ ಗುಣಗಳಿಂದ ಮುತ್ತುಸ್ವಾಮಿ ದೀಕ್ಷಿತರ ಅಪರೂಪದ ಕೃತಿ ‘ಶ್ರೀ ವೆಂಕಟಗಿರೀಶಂ’ ಸುರುಟಿ ರಾಗದಲ್ಲಿ ಆಕರ್ಷಿಸಿತು. ‘ಅಲಮೇಲುಮಂಗ ಸಮೇತಂ’ ಎಂಬಲ್ಲಿ ಸಾಹಿತ್ಯ ಮತ್ತು ಸ್ವರವಿನ್ಯಾಸ ಅದರಲ್ಲೂ ವಿಶೇಷವಾಗಿ ನೆರೆವಲ್ ಖುಷಿ ಕೊಟ್ಟಿತು. ನಂತರ ಕಲ್ಯಾಣಿ (ಪಂಕಜಲೋಚನ, ಸ್ವಾತಿ ತಿರುನಾಳ್) ಮೂಡಿ ಬಂದಿತು.ರಾಗ, ತಾನ ಮತ್ತು ಪಲ್ಲವಿಯನ್ನು ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿ ಕೆಲವು ಟುಕುಡಾಗಳಿಂದಲೇ ತೃಪ್ತಿ ಪಡಬೇಕಾಯಿತು. ದೇಶ್‌ನಲ್ಲಿ ಶ್ಲೋಕ, ಸೂರದಾಸ್ ಪದ, ಅಣ್ಣಮಾಚಾರ್ಯರ ‘ನಾನಾಟಿ ಬ್ರದುಕು’ (ರೇವತಿ), ‘ಸೀತಾ ಕಲ್ಯಾಣ’ (ಕುರಂಜಿ), ಅಭಂಗ ಹೀಗೆ ಕಛೇರಿಯ ಕೊನೆಯ ಭಾಗ ವೈವಿಧ್ಯಮಯವಾಗಿ ರೂಪುಗೊಂಡಿತು.ಯುವ ಪಿಟೀಲು ವಾದಕ ಹೆಚ್.ಎನ್. ಭಾಸ್ಕರ್ ಪ್ರತಿಯೊಂದು ಹಂತದಲ್ಲೂ ಮಿಂಚಿದರು. ಅನುಭವಿ ಮೃದಂಗ ಪಟು ಹೆಚ್.ಎಸ್. ಸುಧೀಂದ್ರ ಶ್ರೀಮಂತ ಲಯಾನುಭವ ನೀಡಿದರು. ನಾರಾಯಣಮೂರ್ತಿ ಅವರ ಘಟ ವಾದನ ಪೂರಕವಾಗಿತ್ತು.ಪ್ರೌಢ ಮಂಡನೆಗಳು

ಮುಂಬೈ ಸೋದರಿಯರೆಂದೇ ಖ್ಯಾತರಾದ ಸಿ.ಸರೋಜ ಮತ್ತು ಸಿ.ಲಲಿತ ಅವರು ಇದೇ ಸಂಗೀತೋತ್ಸವದಲ್ಲಿ ಹಾಡಿದಾಗ ಅವರ ಸುಪರಿಚಿತ ಶೈಲಿ, ವಿದ್ವತ್ತು ಮತ್ತು ಕಲಾತ್ಮಕತೆ ಮಿಂಚಿತು. ‘ಜಯ ಜಯ ಜಾನಕಿ’ (ನಾಟ, ಪುರಂದರದಾಸರು) ರಚನೆಯೊಂದಿಗೆ ಮನೋಹರವಾಗಿ ಗಾಯನ ಆರಂಭಿಸಿ, ಚೇತೋಹಾರಿ ಲಯದಲ್ಲಿ ‘ಬ್ರೋಚೇವಾರೆವರು’ (ಖಮಾಚ್) ಕೃತಿಯನ್ನು ಮಂಡಿಸಿ ಪ್ರೌಢವಾಗಿದ್ದ ಶಹನಾ ರಾಗದ ವೈಶಾಲ್ಯವನ್ನು ಪ್ರಕಟಿಸಿದರು.ಪಟ್ಣಂ ಸುಬ್ರಹ್ಮಣ್ಯ ಅಯ್ಯರ್ ಅವರ ‘ರಾಮಾ ಇಕನನ್ನು’ ರಚನೆ ಆಲಾಪನೆ ಮತ್ತು ಸ್ವರಗಳ ಅಲಂಕರಣದಿಂದ ಮುದ ನೀಡಿತು. ಒರಜೂಪು (ಕನ್ನಡಗೌಳ) ಚುರುಕಾದ ಗ್ಯಾಪ್ ಫಿಲ್ಲರ್ ಆಗಿತ್ತು.ಕಾಂಭೋಜಿ ರಾಗ ಅವರ ವಿದ್ವತ್ತು ಮತ್ತು ಕೌಶಲ್ಯಗಳ ರಸಪಾಕವಾಗಿತ್ತು. ಆಲಾಪನೆಯು ವಿವಿಧ ಸ್ಥಾಯಿಗಳಲ್ಲಿ ಹೊಕ್ಕಿ ಬಂದು ಕಿವಿಗಳನ್ನು ಸೆಳೆದ ಸಂಗತಿಗಳಿದ್ದವು. ಸ್ವರಗಳು ಅವರ ಪ್ರಗಲ್ಭ ಕಲೆಯನ್ನು ಪ್ರತಿಬಿಂಬಿಸಿದವು. ನೆರೆವಲ್ ಮತ್ತು ಸ್ವರಪ್ರಸ್ತಾರದೊಂದಿಗೆ ಹಾಡಲಾದ ನಾರಾಯಣತೀರ್ಥರ ‘ಆಲೋಕಯೆ ರುಕ್ಮಿಣಿ, ನಾನೇನು ಮಾಡಿದೆನೊ’ ಸಂಗೀತಮಯ ವಾತಾವರಣಕ್ಕೆ ಇಂಬು ಕೊಟ್ಟವು.ಪೂರ್ವಿಕಲ್ಯಾಣಿ ರಾಗ, ತಾನ ಮತ್ತು ಪಲ್ಲವಿ (ಮಧುಮೋದಿತ ಹೃದಯೇ ಮಹಾದೇವ ಪ್ರಿಯೆ; ಎರಡು ಕಳೆ ಆದಿತಾಳ) ಸಾಂಪ್ರದಾಯಿಕ ಚೌಕಟ್ಟಿನಲ್ಲಿ ವಿಸ್ತತಗೊಂಡಿತು.ಬಿಲಹರಿ, ವಸಂತ, ವರಾಳಿ ಮತ್ತು ಕಾಪಿ ರಾಗಗಳಲ್ಲಿ ಕಲ್ಪನಾಸ್ವರಗಳು ಮಂಡಿಸಲ್ಪಟ್ಟು ಗಾಯಕಿಯರ ಹಿರಿಮೆಯನ್ನು ತೋರಿದವು. ಉಷಾ ರಾಜಗೋಪಾಲ್ (ಪಿಟೀಲು) ಮತ್ತಿತರ ಪಕ್ಕವಾದ್ಯಗಾರರು ಸಮುಚಿತವಾಗಿದ್ದ ಪಾತ್ರವನ್ನು ನಿರ್ವಹಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.