ಶನಿವಾರ, ಮಾರ್ಚ್ 6, 2021
32 °C

ಇಡಗುಂಜಿಯ್ಲ್ಲಲೊಂದು ವಿನಾಯಕ ಧನ್ವಂತರಿ ವನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಡಗುಂಜಿಯ್ಲ್ಲಲೊಂದು ವಿನಾಯಕ ಧನ್ವಂತರಿ ವನ

ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರ ಇಡಗುಂಜಿಗೆ ಹೋಗುವ ದಾರಿ ಮಧ್ಯೆ ಅರಣ್ಯ ಇಲಾಖೆ `ವಿನಾಯಕ ಧನ್ವಂತರಿ ವನ~ ವನ್ನು ನಿರ್ಮಿಸಿದ್ದು ತಾಲ್ಲೂಕಿನ ಪ್ರವಾಸಿ ತಾಣಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.ಹೊನ್ನಾವರದಿಂದ 10 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 17ರ ಪಕ್ಕದಲ್ಲಿರುವ ಈ ವನ ತನ್ನ ಸೌಂದರ್ಯ ಹಾಗೂ ವೈಶಿಷ್ಠ್ಯಗಳಿಂದ ಗಮನ ಸೆಳೆದಿದ್ದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಡಿ.ಉದಪುಡಿ ಅವರ ದೂರದೃಷ್ಟಿಗೆ ಮತ್ತೊಂದು ಸಾಕ್ಷಿಯಾಗಿದೆ.ಕಟ್ಟಿಗೆ ಡಿಪೋ ಒಳಗೊಂಡ ವಿಸ್ತಾರವಾದ ಕಿರು ಅರಣ್ಯ ಪ್ರದೇಶದ ಒಂದು ಭಾಗವನ್ನು ವನ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದ್ದು ಸುಮಾರು ಆರು ಎಕರೆಯಷ್ಟು ಜಾಗದ ಸುತ್ತ  ಬೇಲಿಯನ್ನು ನಿರ್ಮಿಸಲಾಗಿದೆ.ಪ್ರವೇಶ ದ್ವಾರದಲ್ಲಿರುವ ಎರಡು ದೀಪಸ್ತಂಭಗಳು ಪರಿಸರದ ಕುರಿತ ಜ್ಞಾನದ ದೀಪವನ್ನು ಬೆಳಗಿಸುವ ಸಂಕೇತದಂತಿವೆ. ವನದೊಳಗಿನ ಮಾನವ ನಿರ್ಮಿತ ಕಲಾಕೃತಿಗಳು ದೇವರ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಸಸ್ಯ ಸಂಕುಲಗಳಲ್ಲಿ ದೈವತ್ವದ `ಭಾವ~ ಪ್ರತಿಫಲಿಸುವಂತೆ ಮಾಡಿವೆ. ದೇವರ ಶಿಖರವುಳ್ಳ `ದೇವಸ್ಥಾನ ಪ್ರಾಕಾರ~ದ ಮಾದರಿ, ಒಳಗೆ ಕಾಣುವ ಗಣೇಶನ ಮೂರ್ತಿ ವನಕ್ಕೆ ಗುಡಿಯ ಗಾಂಭೀರ್ಯವನ್ನು ನೀಡಿವೆ. ವನದ ಪ್ರಾಂಗಣದಲ್ಲಿ ನಿರ್ಮಿಸಲಾಗಿರುವ ದೃಶ್ಯಾವಳಿಗಳು ಗಣೇಶ ಪುರಾಣದ ಹಲವು ಕಥೆಗಳನ್ನು ಹೇಳುತ್ತಿದ್ದು ವಿನಾಯಕ ವನವನ್ನು ಅನ್ವರ್ಥವಾಗಿಸಿವೆ. ಅಲಮಟ್ಟಿಯ ರಮೇಶ ಹಾಗೂ ಅಶೋಕ ಅವರನ್ನೊಳಗೊಂಡ ಮೂರ್ತಿ ಶಿಲ್ಪಿಗಳ ತಂಡದ ಪ್ರಯತ್ನವನ್ನು ಸಾರ್ಥಕವಾಗಿಸಿದೆ.ವಿನಾಯಕ ಧನ್ವಂತರಿ ವನದಲ್ಲಿ ಸರ್ಪಗಂಧಿ, ಲೋಳೆಸರ, ಶತಾವರಿ, ಏಕನಾಯಕ, ವಾಯು ವಿಳಂಗ, ಮದರಂಗಿ, ಕೊಡಸಗ ಹೀಗೆ ವಿವಿಧ ಜಾತಿಯ ಔಷಧಿ ಸಸ್ಯಗಳು ಚಿಗುರೊಡೆಯುತ್ತಿದ್ದು ವನಕ್ಕೆ ಹಸಿರಿನ ಉಡುಗೆಯುಡಿಸುತ್ತಿವೆ.ಧಾರ್ಮಿಕ ನಂಬುಗೆ, ವೈಜ್ಞಾನಿಕ ಸತ್ಯಗಳ ನೆರಳಿನಲ್ಲಿ ಸೌಂದರ್ಯೋಪಾಸನೆಯ ವಿವಿಧ ಆಯಾಮಗಳನ್ನು ತರೆದಿಡುವ ಈ ವಿನಾಯಕ ಧನ್ವಂತರಿ ವನದಿಂದ  ನಾಲ್ಕು ಕಿ.ಮೀ. ದೂರದಲ್ಲಿ ಪುರಾಣ ಪ್ರಸಿದ್ಧ ಇಡಗುಂಜಿಯ ವಿಘ್ನೇಶ್ವರ ದೇವಸ್ಥಾನವಿದೆ. `ದೇವಸ್ಥಾನಕ್ಕೆ ಪ್ರತಿನಿತ್ಯ ಬರುವ ಹಲವಾರು ಯಾತ್ರಾರ್ಥಿಗಳಿಗೆ ಒಂದು ವಿಶ್ರಾಂತಿ ಧಾಮವಾಗಿ, ಔಷಧಿ ಸಸ್ಯಗಳ ಅಧ್ಯಯನ ಕೇಂದ್ರವಾಗಿ ಪ್ರಸ್ತುತ ವನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.ಇದುವರೆಗೆ ಸುಮಾರು 20 ಲಕ್ಷ ರೂಪಾಯಿ ವನ ನಿರ್ಮಾಣಕ್ಕೆ ಖರ್ಚು ಮಾಡಲಾಗಿದ್ದು ಇನ್ನೂ ಕೆಲವು ಕೆಲಸ-ಕಾರ್ಯಗಳು ಬಾಕಿ ಇವೆ. ವನದ ನಿರ್ವಹಣೆಯನ್ನು ಸ್ಥಳೀಯ ಗ್ರಾಮ ಅರಣ್ಯ ಸಮಿತಿಗೆ ವಹಿಸಲಾಗುವುದು.ಪ್ರವಾಸಿ ತಾಣವಾಗುವ ಈ ವನದಿಂದ ಬಂದ ಆದಾಯದ ಹೆಚ್ಚಿನ ಪಾಲನ್ನು ಈ ಸಮಿತಿಗೆ ನೀಡಲಾಗುತ್ತದೆ~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.