ಗುರುವಾರ , ಮಾರ್ಚ್ 4, 2021
30 °C
70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ

ಇತ್ಯರ್ಥವಾಗದ 15 ಲಕ್ಷ ಪಕ್ಕಾಪೋಡಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ಯರ್ಥವಾಗದ 15 ಲಕ್ಷ ಪಕ್ಕಾಪೋಡಿ ಅರ್ಜಿ

ಶಿವಮೊಗ್ಗ: ರಾಜ್ಯದಲ್ಲಿ ಜಮೀನು ಪಕ್ಕಾಪೋಡಿ ಮಾಡಿಕೊಡಲು ಕೋರಿ 15 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಎಲ್ಲ ಅರ್ಜಿಗಳನ್ನೂ ತ್ವರಿತವಾಗಿ ಇತ್ಯರ್ಥ ಪಡಿಸಲು ನೇರವಾಗಿ ತಹಶೀಲ್ದಾರ್‌ಗಳಿಗೇ ಅಧಿಕಾರ ನೀಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ನಗರದ ಡಿಎಆರ್ ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ ಆಯೋಜಿಸಿದ್ದ 70ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸಮಾಜದ ಎಲ್ಲ ವರ್ಗದ ಬಡವರಿಗೂ ಭೂಮಿಯ ಹಕ್ಕು ದೊರೆಯಬೇಕು. ಅದು  ಹಲವು ವರ್ಷಗಳ ಹೋರಾಟ ಮತ್ತು ಗುರಿ. ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಬಂದು 10 ವರ್ಷಗಳಾದರೂ, ಅರಣ್ಯ ವಾಸಿಗಳಿಗೆ ಭೂಮಿಯ ಹಕ್ಕು ಸಿಕ್ಕಿಲ್ಲ.ಅರಣ್ಯ ಹಕ್ಕು ಸಮಿತಿಯಲ್ಲಿ ವಜಾಗೊಂಡಿರುವ ಎಲ್ಲಾ ಅರ್ಜಿಗಳನ್ನೂ  ಪುನರ್ ಪರಿಶೀಲಿಸುವಂತೆ ಸೂಚಿಸಲಾಗಿದೆ. ಇದುವರೆಗೂ 1,103 ಜನರಿಗೆ ಭೂ ಹಕ್ಕು ನೀಡಲಾಗಿದೆ. ಇನ್ನೂ 78 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಉಳಿದವರಿಗೂ ಡಿಸೆಂಬರ್‌ ಒಳಗೆ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.ಸ್ವಾತಂತ್ರ್ಯ ನಂತರ 69 ವರ್ಷಗಳಲ್ಲಿ ಭಾರತ ಬೃಹತ್ ಸ್ವಾಭಿಮಾನಿ ರಾಷ್ಟ್ರವಾಗಿ ಬೆಳೆದಿದೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ  ಗಣನೀಯ ಸಾಧನೆ ಮಾಡಿದೆ. ಭಾರತೀಯ ಭೂ, ವಾಯು ಹಾಗೂ ನೌಕಾ ಸೇನೆಗಳು ಪ್ರಬಲ ಶಕ್ತಿಯಾಗಿವೆ. ದೇಶದ ಬದಲಾವಣೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ರಾಜ್ಯವೂ ಅಭಿವೃದ್ಧಿ ಯತ್ತ ದಾಪುಗಾಲು ಇಟ್ಟಿದೆ. ಹಲವಾರು ಜನಪರ ಐತಿಹಾಸಿಕ ಕಾರ್ಯಕ್ರಮ ಜಾರಿಗೆ ತರುವ ಮೂಲಕ ದೇಶದಲ್ಲಿಯೇ ಕರ್ನಾಟಕ ಅಗ್ರ ಸ್ಥಾನದಲ್ಲಿದೆ ಎಂದು ಅವರು ಶ್ಲಾಘಿಸಿದರು.ಎಲ್ಲರಿಗೂ ಅನ್ನ, ಆಶ್ರಯ, ಆರೋಗ್ಯ, ಅಕ್ಷರ ಮತ್ತಿತರ ಮೂಲ ಸೌಕರ್ಯ ದೊರೆಯಬೇಕು. ಅದು ಸಂವಿಧಾನದ ಆಶಯ. ಹಾಗಾಗಿ,ರಾಜ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕ ಘೋಷಣೆ ಮಾಡಿ, ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಿದೆ.ಪರಿಶಿಷ್ಟರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ನಿಗಮಗಳಲ್ಲಿ ಮಾಡಿದ ಸಾಲ ಮನ್ನಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ದುರ್ಬಲರಿಗೆ ಮನೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಬಡರಿಗೆ ಆರೋಗ್ಯ  ಭಾಗ್ಯ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಊಟ, ವಸತಿ ಕಲ್ಪಿಸಲು ವಿದ್ಯಾಸಿರಿ ಮತ್ತಿತರ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ವಿವರ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೆಎಸ್ಆರ್‌ಪಿ, ಡಿಎಆರ್ ತುಕಡಿ, ಗೃಹರಕ್ಷಕ ದಳ, ಸ್ಕೌಟ್‌ ಮತ್ತು ಗೈಡ್ಸ್, ಪೊಲೀಸ್ ದಳ, ಸೇವಾದಳ ಹಾಗೂ ವಿವಿಧಶಾಲೆ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ಎಸ್‌ಪಿ ರವಿ ಡಿ.ಚನ್ನಣ್ಣನವರ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್‌ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಉಪಸ್ಥಿತರಿದ್ದರು.ಗಮನ ಸೆಳೆದ ನೃತ್ಯ ರೂಪಕ

ಸ್ವಾತಂತ್ರೋತ್ಸವ ಅಂಗವಾಗಿ ವಿವಿಧ ಶಾಲಾ ಮಕ್ಕಳು ದೇಶಭಕ್ತಿ ಸಾರುವ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.

ನಗರದ ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ‘ಜಯ ಹೇ ಭಾರತ ’ , ಮೇರಿ ಇಮ್ಯಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ‘ ಓ ಇಂಡಿಯಾ ’ ವಾಸವಿ ಪ್ರೌಢ ಶಾಲೆ ಮಕ್ಕಳು ‘ಸಂಗೊಳ್ಳಿ ರಾಯಣ್ಣನ ’ ವೀರ ಭೂಮಿ ಈ ದೇಶ  ನೃತ್ಯ ರೂಪಕ, ನ್ಯಾಷನಲ್ ಪಬ್ಲಿಕ್‌ ಶಾಲೆ ಮಕ್ಕಳು ಪ್ರದರ್ಶಿಸಿದ ‘ಜಯ ಹೇ ಭಾರತ’ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ಎಸ್‌ಕೆಎನ್‌ ವಿನೋಬನಗರ ಶಾಲೆ, ವಿಕಾಸ ಪ್ರೌಢ ಶಾಲೆ ಮಕ್ಕಳು ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ಪಥ ಸಂಚಲನದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕಿಯ ವಿಭಾಗ ಮೊದಲನೆಯ ಸ್ಥಾನ, ಜ್ಞಾನ ದೀಪ ಶಾಲೆಯ ಬಾಲಕರ ವಿಭಾಗ ಎರಡನೇ ಸ್ಥಾನ, ಗಾಜನೂರಿನ ನವೋದಯ ಶಾಲೆಯ ಬಾಲಕರ ವಿಭಾಗ ಮೂರನೇ ಸ್ಥಾನ ಪಡೆದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.