ಶನಿವಾರ, ಮೇ 21, 2022
20 °C

ಇದು ಖರ್ಜೂರ ಕಾಲ

-ಅಮಿತ್ ಎಂ.ಎಸ್ / ಚಿತ್ರಗಳು: ಸವಿತಾ ಬಿ.ಆರ್. Updated:

ಅಕ್ಷರ ಗಾತ್ರ : | |

ಚುಮು ಚುಮು ಚಳಿ, ಮಳೆ ಹನಿಯ ಪನ್ನೀರಿನ ಸಿಂಚನ, ಹದ ಬಿಸಿಲ ಸಂಗಮದ ನಡುವೆ ಮತ್ತೆ ರಂಜಾನ್ ಬಂದಿದೆ. ಇಲ್ಲಿ ಹಬ್ಬದ ಉಪವಾಸವೂ ಒಂದು ಸಂಭ್ರಮ. ಆಹಾರ ಸೇವನೆಯೂ ಸಂಭ್ರಮ. ಮೂರು ಋತುಗಳನ್ನು ಒಟ್ಟಿಗೆ ಬೆಸೆದಂತೆ ಭಾಸವಾಗುವ ಈ ವಾತಾವರಣದಲ್ಲಿ ಸರ್ವ ಋತು ತಿನಿಸಿಗೆ ಬಲು ಬೇಡಿಕೆ. ತರಹೇವಾರಿ ಖರ್ಜೂರಗಳನ್ನು ಸವಿಯಲು ಈಗ ರಂಜಾನ್ ನೆಪ.ಮುಸ್ಲಿಂ ಬಾಂಧವರಿಗೆ ರಂಜಾನ್ ತಿಂಗಳ ಪ್ರತಿದಿನ ಶುರುವಾಗುವುದೇ ಖರ್ಜೂರ ಸೇವನೆ ಬಳಿಕ. ಹೀಗಾಗಿ ಮಾರುಕಟ್ಟೆಯೊಳಗೆ ಕಾಲಿಟ್ಟಾಗ ಎದುರುಗೊಳ್ಳುವುದು ರಾಶಿ ರಾಶಿ ಪೇರಿಸಿಟ್ಟ ಬಗೆಬಗೆಯ ಖರ್ಜೂರದ ಜಗತ್ತು. ಮತ್ತು ಅದನ್ನು ಕೊಳ್ಳುವ ಮುಸ್ಲಿಂ ಬಾಂಧವರು.ಖರ್ಜೂರದ ಜಗತ್ತು ಎಂದು ಬಣ್ಣಿಸಲು ಕಾರಣವಿದೆ. ಶಿವಾಜಿನಗರದ ರಸೆಲ್ ಮಾರುಕಟ್ಟೆ ಪ್ರವೇಶಿಸಿದೊಡನೆ ನಗುಮೊಗದೊಂದಿಗೆ ಸ್ವಾಗತಿಸುವ ಅಂಗಡಿ ಮಾಲೀಕ ಮಹಮದ್ ಇದ್ರಿಸ್ ಚೌಧರಿ ಅಡಿಗಡಿಗೆ ಹಲವು ದೇಶಗಳನ್ನು ತೋರಿಸುತ್ತಾರೆ. ಒಂದೊಂದು ದೇಶದ ಮಣ್ಣಿನಲ್ಲಿ ಅರಳಿದ ಖರ್ಜೂರಗಳದ್ದು ಒಂದೊಂದು ಬಗೆಯ ಬಣ್ಣ, ರುಚಿ, ಶಕ್ತಿ. ರಂಜಾನ್ ಮಾಸ ಬಂತೆಂದರೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರ್ಜೂರದ ವ್ಯಾಪಾರ ಬಲು ಜೋರು. ಆದರೆ ರಸೆಲ್ ಮಾರುಕಟ್ಟೆಯ ಚೌಧರಿ ಅವರ ವ್ಯಾಪರದ ಖದರೇ ಬೇರೆ.`ಇಷ್ಟೊಂದು ದೇಶಗಳ, ವೈವಿಧ್ಯದ, ಕಡಿಮೆ ಬೆಲೆಯ ಖರ್ಜೂರ ಬೆಂಗಳೂರಿನಲ್ಲಿ ಮತ್ತೆಲ್ಲೂ ಸಿಗಲಾರದು' ಎಂದು ಹೆಮ್ಮೆಯಿಂದ ಬೀಗುತ್ತಾರೆ ಅವರು. ಏಕೆಂದರೆ ಒಂದಲ್ಲ, ಎರಡಲ್ಲ ಅವರ ಖರ್ಜೂರ ಮೇಳದಲ್ಲಿ ಸಿಗುವುದು ಸುಮಾರು 70 ಬಗೆಯ ಖರ್ಜೂರಗಳು. ಮುಂಬೈ ಡೀಲರ್ ಮೂಲಕ ಖರ್ಜೂರಗಳನ್ನು ದೂರ ದೇಶಗಳಿಂದ ಆಮದು ಮಾಡಿಕೊಳ್ಳುವ ಅವರು, ವಹಿವಾಟಿನ ಲೆಕ್ಕಾಚಾರದ ಗುಟ್ಟನ್ನು ಬಿಟ್ಟುಕೊಡುವುದಿಲ್ಲ.ಒಂದು ಕಿಲೋಗೆ ಇನ್ನೂರೈವತ್ತರಿಂದ ನಾಲ್ಕು ಸಾವಿರ ರೂಪಾಯಿವರೆಗಿನ ಮೌಲ್ಯದ ಖರ್ಜೂರಗಳ ಭಂಡಾರ ಅವರದು. ಖರ್ಜೂರ ಮೇಳದಲ್ಲಿ ಈಗ ಶೇಕಡ 25ರಷ್ಟು ರಿಯಾಯಿತಿಯೂ ಇದೆ. ಇರಾನ್, ಇರಾಕ್, ಟರ್ಕಿ, ಸೌದಿ ಅರೇಬಿಯಾ, ಜೋರ್ಡಾನ್, ಟ್ಯುನಿಷಿಯಾ, ದಕ್ಷಿಣ ಆಫ್ರಿಕಾ, ಕುವೈತ್ ಮತ್ತು ಮಧ್ಯಪ್ರಾಚ್ಯದಿಂದ ಖರ್ಜೂರಗಳು ಚೌಧರಿ ಅವರ ಅಂಗಡಿ ಸೇರಿಕೊಳ್ಳುತ್ತವೆ. ವರ್ಷವಿಡೀ ಖರ್ಜೂರಕ್ಕೆ ಬೇಡಿಕೆ ಇದ್ದೇ ಇರುತ್ತದೆ.ಆದರೆ ರಂಜಾನ್ ಮಾಸದಲ್ಲಿ ಬೇಡಿಕೆ ದುಪ್ಪಟ್ಟು. ರಂಜಾನ್ ಮಾಸದಲ್ಲಿ ಬೆಳಿಗ್ಗೆ ಖರ್ಜೂರ ತಿಂದು ನೀರು ಕುಡಿಯುವ ಮೂಲಕವೇ ದಿನ ಪ್ರಾರಂಭಿಸಬೇಕೆಂಬುದು ಮುಸ್ಲಿಂ ಸಂಪ್ರದಾಯದ ಆಚರಣೆ. ಇಡೀ ದಿನ ಉಪವಾಸವಿರಲು ದೇಹಕ್ಕೆ ಅಗತ್ಯವಾದ ವಿಟಮಿನ್, ಶಕ್ತಿ, ಚೈತನ್ಯ ನೀಡುವ ಸಾಮರ್ಥ್ಯ ಖರ್ಜೂರಕ್ಕಿದೆ ಎಂಬ ಕಾರಣಕ್ಕಾಗಿಯೇ ಅದಕ್ಕೆ ಈ ಮಹತ್ವ.`ಒಂದೊಂದು ಬಗೆಯ ಖರ್ಜೂರದಲ್ಲಿಯೂ ವಿವಿಧ ಔಷಧೀಯ ಗುಣಗಳಿರುತ್ತವೆ. ವೈದ್ಯರು ರೋಗಿಗಳಿಗೆ ಖರ್ಜೂರ ಸೇವಿಸುವಂತೆ ಸಲಹೆ ಮಾಡುತ್ತಾರೆ. `ಅಜ್ವಾ' ಹೃದಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ದಕ್ಷಿಣ ಆಫ್ರಿಕಾದ ಶುಗರ್ ಫ್ರೀ ಖರ್ಜೂರ `ಮಾಫ್ರೊಟಾ' ಖರ್ಜೂರಗಳ ರಾಜ. `ಮಜ್ರೂಮ್', `ಸಫಾಯಿ', ಕಿಮಾಯಿ', `ಮರಿಯಮ್'... ಹೀಗೆ ಪ್ರತಿ ವಿಧದ ಖರ್ಜೂರವೂ ಒಂದೊಂದು ಕಾಯಿಲೆಗೆ ಮದ್ದು. ಖರ್ಜೂರ ಗ್ಲೂಕೋಸ್ ಥರ. ದೇಹಕ್ಕೆ ಶಕ್ತಿ ತುಂಬುತ್ತದೆ' ಎಂದು ಅದರ ಗುಣವೈಶಿಷ್ಟ್ಯಗಳನ್ನು ತೆರೆದಿಡುತ್ತಾರೆ ಅಂಗಡಿಯ ನಿರ್ವಹಣೆ ಮಾಡುತ್ತಿರುವ ಜಿ.ಎಂ. ಜಾವಿದ್ ಶೇಠ್.ಗಾಢ ಕಪ್ಪು, ನಸುಗಪ್ಪು, ಕಂದು ಹೀಗೆ ಬಣ್ಣ ಬಣ್ಣಗಳ ಖರ್ಜೂರ ಬಾಯಲ್ಲಿ ನೀರೂರಿಸುತ್ತವೆ. ದರದಲ್ಲಿಯೂ ವೈವಿಧ್ಯವಿರುವುದರಿಂದ ಎಲ್ಲಾ ವರ್ಗದ ಜನರೂ ಕೊಳ್ಳಬಹುದಾದಂಥ ಖರ್ಜೂರಗಳು ಒಂದೇ ಕಡೆ ಲಭ್ಯ. ಆಕರ್ಷಕ ವಿನ್ಯಾಸದ ಬಾಕ್ಸ್‌ಗಳಲ್ಲಿ ಸಿಗುವ ಖರ್ಜೂರ ಕೊಂಚ ದುಬಾರಿ. ಗ್ರಾಹಕರ ಆದ್ಯತೆಗೆ ತಕ್ಕಂತೆ ಹಣ್ಣುಗಳನ್ನು ತರಿಸಿಕೊಳ್ಳಲಾಗುತ್ತದೆ. ತರಹೇವಾರಿ ಹಣ್ಣುಗಳ ರುಚಿ ನೋಡಿದವರು ಅದಕ್ಕೆ ಮಾರುಹೋಗದೆ ಇರುವುದಿಲ್ಲ.ನಗರದ ಮೂಲೆ ಮೂಲೆಯಿಂದಲೂ ಚೌಧರಿ ಸಾಹೇಬರ ಅಂಗಡಿ ಹುಡುಕಿಕೊಂಡು ಬರುವ ಗ್ರಾಹಕರ ಸಂಖ್ಯೆಗೆ ಲೆಕ್ಕವೇ ಇಲ್ಲ. ರಂಜಾನ್ ನೆಪದಲ್ಲಿ ಮುಸ್ಲೀಮರು ಮಾತ್ರವಲ್ಲದೆ ಬೇರೆ ಬೇರೆ ಜಾತಿಯ ಜನರೂ ಖರ್ಜೂರ ಖರೀದಿಸುವುದನ್ನು ಕಾಣಬಹುದು. ಬೆಳಿಗ್ಗೆ ತೆರೆದ ಅಂಗಡಿಯಲ್ಲಿ ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚುವವರೆಗೂ ಜನಜಂಗುಳಿ. ರಂಜಾನ್ ಮಾಸದಲ್ಲಂತೂ ಅಂಗಡಿ ವಹಿವಾಟು ನೋಡಿಕೊಳ್ಳುವ ಸಾದಿಕ್ ಮತ್ತು ಯತೇಶಾಂ ಅವರಿಗೆ ಬಿಡುವೇ ಇಲ್ಲ.ಮತಧರ್ಮಗಳ ಅಂತರವೂ ಇಲ್ಲಿಲ್ಲ. ಹಣ್ಣುಗಳ ಗುಣಮಟ್ಟಕ್ಕೆ ಪ್ರಾಮುಖ್ಯ ನೀಡುವುದರಿಂದ ಗ್ರಾಹಕರೂ ಸಂತಸಗೊಳ್ಳುತ್ತಾರೆ. ಹೀಗಾಗಿ ರಂಜಾನ್ ತಿಂಗಳು ಕಳೆದ ನಂತರವೂ ವ್ಯಾಪಾರದಲ್ಲಿ ಇಳಿಕೆಯಾಗುವುದಿಲ್ಲ ಎಂಬ ಖುಷಿ ಅವರದು. ಖರ್ಜೂರದ ಜೊತೆಗೆ ಗೋಡಂಬಿ, ಪಾಸ್ತಾ, ದ್ರಾಕ್ಷಿ ಮುಂತಾದ ವೈವಿಧ್ಯಮಯ ಒಣಹಣ್ಣುಗಳಿಗೂ ಬೇಡಿಕೆ ಹೆಚ್ಚು. ಪಾಕಿಸ್ತಾನದಿಂದ `ರೂವಾಬ್ಜಾ' ವಿಶಿಷ್ಟ ಪೇಯವನ್ನು ಅವರು ಈ ಬಾರಿಯ ರಂಜಾನ್ ಪ್ರಯುಕ್ತ ತರಿಸಿದ್ದಾರೆ.`ಇಲ್ಲಿ ಬಲು ತಾಜಾ'

ನಗರದ ಯಾವ ಮೂಲೆಯಲ್ಲಿದ್ದರೂ ಖರ್ಜೂರ ಕೊಳ್ಳುವ ಸಲುವಾಗಿಯೇ ಅನೇಕ ಗ್ರಾಹಕರು ರಸೆಲ್ ಮಾರ್ಕೆಟ್‌ಗೆ ತೆರಳುತ್ತಾರೆ. `ಇಲ್ಲಿ ದೊರಕುವ ಖರ್ಜೂರ ಉತ್ತಮ ಗುಣಮಟ್ಟದ್ದು. ಬೆಲೆಯೂ ಕಡಿಮೆ. ಇದುವರೆಗೆ ಕೆ.ಆರ್. ಮಾರುಕಟ್ಟೆಯಲ್ಲಿ ಖರ್ಜೂರ ಕೊಳ್ಳುತ್ತಿದ್ದ ನಾನು ಮೊದಲ ಬಾರಿಗೆ ಇಷ್ಟು ತಾಜಾ ಖರ್ಜೂರಗಳನ್ನು ಕೊಳ್ಳುತ್ತಿದ್ದೇನೆ' ಎನ್ನುತ್ತಾರೆ ಕೆಎಂಎಫ್ ಬೆಂಗಳೂರು ಡೇರಿಯಲ್ಲಿ ತಾಂತ್ರಿಕ ವಿಭಾಗದ ಮೇಲ್ವಿಚಾರಕರಾಗಿರುವ ನಂಜುಂಡ ಆರಾಧ್ಯ.ಚಾಮರಾಜಪೇಟೆಯ ನಿವಾಸಿಯಾಗಿರುವ ಅವರು ಚೌಧರಿ ಅವರ ಅಂಗಡಿಯ ಬಗೆಗೆ ತಿಳಿದ ಬಳಿಕ ಖರ್ಜೂರ ಕೊಳ್ಳುವ ಸಲುವಾಗಿಯೇ ರಸೆಲ್ ಮಾರುಕಟ್ಟೆಗೆ ಧಾವಿಸಿದ್ದರು. `ಇಷ್ಟೊಂದು ಬಗೆಯ ಗುಣಮಟ್ಟದ ಖರ್ಜೂರ ಹಾಗೂ ಮತ್ತಿತರ ಡ್ರೈಫ್ರೂಟ್‌ಗಳು ಕಡಿಮೆ ದರದಲ್ಲಿ ಲಭಿಸುತ್ತಿರುವುದು ಇಲ್ಲಿ ಮಾತ್ರ' ಎನ್ನುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.