ಶುಕ್ರವಾರ, ಜೂನ್ 25, 2021
29 °C

ಇದು ನವ ಮಹಾಭಾರತ: ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನೂರಾರು ಪಾತ್ರಗಳು ಬರುವ, ದೇಶದ ಅರವತ್ತು ವರ್ಷಗಳ ಇತಿಹಾಸವನ್ನು ಹೇಳುವ ಬೊಳುವಾರು ಮಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಮಹಾ ಕಾದಂಬರಿಗೆ ಆತ್ಮಕಥೆಯ ಸ್ವರೂಪವೂ ಇದೆ~ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಪ್ರಶಂಸಿಸಿದರು.`ಬೆಂಗಳೂರು ಸಮುದಾಯ~ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ `ಸ್ವಾತಂತ್ರ್ಯದ ಓಟ~ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಕೃತಿಯ ಕುರಿತು ಮತನಾಡಿದ ತೋಳ್ಪಾಡಿ, `ಬೊಳುವಾರು ಅವರು ಸಾವಿರಕ್ಕೂ ಹೆಚ್ಚು ಪುಟಗಳ ಈ ಕಾದಂಬರಿಯಲ್ಲಿ ಇತಿಹಾಸವನ್ನೂ ದಾಖಲಿಸಿದ್ದಾರೆ. ಓದುಗರ ಕಣ್ಣಲ್ಲಿ ನೀರು ಜಿನುಗಿಸುತ್ತಾರೆ. ಹಾಗೆಯೇ ಅವರು ಕಣ್ಣೀರು ಜಿನುಗಿಸುತ್ತಲೇ ಇದನ್ನು ಬರೆದಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕಾದಂಬರಿಯ ಪಾತ್ರಗಳ ಮೂಲಕ ಕೃತಿಕಾರ ಯಾರದೇ ಪರ ವಹಿಸಿಲ್ಲ. ಯಾರನ್ನೂ ದೂರಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ. ತಪ್ಪುಗಳ ಕುರಿತು ಪಶ್ಚಾತ್ತಾಪ ಅನುಭವಿಸಿ, ಅವುಗಳನ್ನು ಸರಿಪಡಿಸಿಕೊಳ್ಳುವ ನಾಗರಿಕ ಸಮಾಜದ ಸಾಮರ್ಥ್ಯದ ಮೇಲೆ ಈ ಕಾದಂಬರಿ ಭರವಸೆ ಇಟ್ಟಿದೆ ಎಂದರು.ಕಥೆ, ಚರಿತ್ರೆ ಮತ್ತು ವಾಸ್ತವವನ್ನು ಏಕಕಾಲದಲ್ಲಿ ವಿವರಿಸುತ್ತ ಸಾಗುವ ಕೃತಿಗಳು ಇಂಗ್ಲಿಷ್‌ನಲ್ಲಿ ಸಾಕಷ್ಟಿವೆ. ಪುಸ್ತಕಗಳಿಂದ ದೂರವಾಗುತ್ತಿರುವ ಕನ್ನಡಿಗರನ್ನು ಮತ್ತೆ ಓದಿನತ್ತ ಸೆಳೆಯಲು ಬೊಳುವಾರು ಅವರು ಚರಿತ್ರೆ, ವಾಸ್ತವ ಮತ್ತು ಕಥೆಯನ್ನು ಒಟ್ಟೊಟ್ಟಿಗೆ ವಿವರಿಸುವ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಿಮರ್ಶಕ ಪ್ರೊ.ಎಚ್.ಎಸ್. ರಾಘವೇಂದ್ರ ರಾವ್ ಅವರು ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು.ಕುವೆಂಪು ಅವರು ಬರೆಯುವುದಾಗಿ ಹೇಳಿದ್ದ `ಕಾಲೋಸ್ಮಿ~ ಕಾದಂಬರಿಗೆ ಪರ್ಯಾಯವಾಗಿ ಈ `ಸ್ವಾತಂತ್ರ್ಯದ ಓಟ~ ಕೃತಿ ದೊರೆತಿದೆ. `ಕವಲು~, `ಆವರಣ~ದಂತಹ ಕಾದಂಬರಿಗಳಷ್ಟೇ ಆಕರ್ಷಕವಾಗಿ, ಆದರೆ ಸಮುದಾಯದ ಪರವಾಗಿ ಈ ಕೃತಿಯನ್ನು ರಚಿಸಿದ್ದಾರೆ ಎಂದು ಹೇಳಿದರು.ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ, ಸರೋದ್ ವಾದಕ ರಾಜೀವ್ ತಾರಾನಾಥ್ ಅವರು, `ನಮ್ಮ ಸಂಸ್ಕೃತಿಗೆ ಆಪ್ತವಾಗುವ ಶೈಲಿಯಲ್ಲಿ ಬೊಳುವಾರು ಅವರು ಈ ಕೃತಿ ರಚಿಸಿದ್ದಾರೆ. ಇದರಲ್ಲಿ ನಾನೂ ಒಂದು ಪಾತ್ರವಾಗಿ ಬರುತ್ತೇನೆ~ ಎಂದರು.ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ ಅವರು, `ಮತೀಯ ಮನಸ್ಸುಗಳು ಚರಿತ್ರೆಯ ಘಟನೆಗಳನ್ನು ಬಳಸಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತವೆ. ಆದರೆ ಬೊಳುವಾರು ಅವರದು ಸಮಾಜವನ್ನು ಒಗ್ಗೂಡಿಸುವ ಧರ್ಮನಿಷ್ಠ ಮನಸ್ಸು~ ಎಂದು ಹೇಳಿದರು.

ಬೊಳುವಾರು ಮಹಮ್ಮದ್ ಕುಂಞ, ಮಹಮ್ಮದ್ ಬಡ್ಡೂರು, ಬಿ.ಎ. ಮಹಮ್ಮದಾಲಿ ಮತ್ತಿತರರು ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.