ಭಾನುವಾರ, ಮೇ 22, 2022
23 °C

ಇನ್ನೂ ನಾಡಲ್ಲೇ ಉಳಿದ ಕಾಡಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ:  ಸತತ ಮೂರು ದಿನಗಳಿಂದ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಕಾಡಾನೆಯು ಗುರುವಾರ ಬೆಳಗನಹಳ್ಳಿ ಕೆರೆಯಲ್ಲಿ ವಾಸ್ತವ್ಯ ಹೂಡಿದೆ.ಆನೆಯನ್ನು ನೋಡಲು ಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಬೆಳಗನಹಳ್ಳಿ ಕೆರೆಯತ್ತ ಧಾವಿಸಿದರು. ಇದರಿಂದ ಮತ್ತಷ್ಟು ಗಾಬರಿಗೊಂಡ ಆನೆ ಕೆರೆಯಲ್ಲಿ ಓಡಾಡುತ್ತಿದೆ.

 

ಹೀಗಾಗಿ ಕೆರೆಯಿಂದ ಆನೆಯನ್ನು ಹೊರಕ್ಕೆ ತಂದು ಕಾಡಿಗೆ ಅಟ್ಟುವ ಅರಣ್ಯ ಇಲಾಖೆ ಅಧಿಕಾರಿಗಳು  ಮತ್ತು ಸಿಬ್ಬಂದಿ ಯತ್ನಕ್ಕೆ ಭಾರೀ ಸಂಖ್ಯೆ ಜನರು ಮತ್ತು ಜೋರಾಗಿ ಸುರಿದ ಮಳೆಯಿಂದ ಹಿನ್ನಡೆಯಾಯಿತು.`ಆನೆ ನೀರಿನಿಂದ ಮೇಲಕ್ಕೆ ಬಂದ ಬಳಿಕವಷ್ಟೇ ಅರಿವಳಿಕೆ ಚುಚ್ಚುಮದ್ದು ನೀಡಬೇಕು~ ಎಂದು ಹಿರಿಯ ವೈದ್ಯ ಡಾ.ಖಾದ್ರಿ ಸಲಹೆ ನೀಡಿದ್ದಾರೆ.

 

ಹೀಗಾಗಿ ಆನೆಯನ್ನು ಕೆರೆಯಿಂದ ದಡಕ್ಕೆ ತರಲು ಅರ್ಜುನ ಮತ್ತು ಮೇರಿಯ ಸಹಾಯ ಪಡೆಯಲಾಗಿದೆ.

ಮಂಗಳವಾರ ಬೆಳಿಗ್ಗೆ ಚಕ್ಕೋಡನಹಳ್ಳಿ ಕೆರೆಯಲ್ಲಿ ಕಾಣಿಸಿಕೊಂಡ ಆನೆಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡಿತು. ತನ್ನ   ಸುತ್ತಲೂ ಜನರು ನೆರೆದಿದ್ದರಿಂದ ಗಾಬರಿಗೊಂಡ ಆನೆಯು ಪಟ್ಟಣದ ಕಡೆಗೆ ನುಗ್ಗಿತ್ತು. ಬುಧವಾರ ಪಟ್ಟಣದಲ್ಲಿ ಕಾಣಿಸಿಕೊಂಡ ಕಾಡಾನೆಯನ್ನು ಕಾಡಿನತ್ತ ಅಟ್ಟಲು ಪ್ರಯತ್ನಿಸಿದಾಗ ಚಕ್ಕೋಡನಹಳ್ಳಿ ಕೆರೆಯಲ್ಲಿ ಸೇರಿಕೊಂಡಿತು. ಈಗ ಬೆಳಗನಹಳ್ಳಿ ಕೆರೆಯ ಸೇರಿಕೊಂಡಿದೆ.ಸಿಸಿಎಫ್ ಅಜಯ್ ಮಿಶ್ರಾ ಮಾರ್ಗದರ್ಶನದಲ್ಲಿ ಡಿಸಿಎಫ್ ಮನೋಜ್‌ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ತಹಶೀಲ್ದಾರ್  ಎನ್.ಸಿ.ಜಗದೀಶ್, ಆರ್‌ಐ ಸಣ್ಣರಾಮಪ್ಪ, ಎಸಿಎಫ್‌ಗಳಾದ ತಮ್ಮಯ್ಯ, ಚಂದ್ರಶೇಖರ್ ಹಾಗೂ ಚಾಮರಾಜನಗರದ ಮಣಿಕಂದನ್, ಡಿವೈಎಸ್‌ಪಿ ಮುತ್ತುಸ್ವಾಮಿ ನಾಯ್ಡು, ಸಿಪಿಐ ಮಲ್ಲಿಕ್, ಪಿಎಸ್‌ಐ ನಟರಾಜು, ಆರ್‌ಎಫ್‌ಒ ಸಂತೋಷ್‌ನಾಯಕ್, ಅಂತರಸಂತೆ, ಬಳ್ಳೆ, ಮೇಟಿಕುಪ್ಪೆ ಹಾಗೂ ಇತರ ವಲಯದ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.