ಶುಕ್ರವಾರ, ಮೇ 20, 2022
21 °C

ಇಬ್ಬರು ಆರೋಪಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹತ್ತು ಸಾವಿರ ರೂಪಾಯಿಗೆ ಸುಪಾರಿ ಪಡೆದು ಮಹಿಳೆಯೊಬ್ಬರನ್ನು ಕೊಲೆ ಮಾಡಿದ್ದ ಕುತೂಹಲಕಾರಿ ಪ್ರಕರಣವನ್ನು ಭೇದಿಸಿರುವ ಬ್ಯಾಟರಾಯನಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಸುಂಕದಕಟ್ಟೆ ಸಮೀಪದ ಮಾರುತಿನಗರದ ಯೋಗಾನಂದ (21) ಮತ್ತು ಹೊಸಕೆರೆಹಳ್ಳಿಯ ವೀರಭದ್ರನಗರದ ಮಣಿ (30) ಬಂಧಿತ ಆರೋಪಿಗಳು. ಅವರು ಬ್ಯಾಟರಾಯನಪುರದ ಸಮೀಪ ಇರುವ ಪಂತರಪಾಳ್ಯದ ನಿವಾಸಿ ಜಯಮ್ಮ ಎಂಬುವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.‘ಹೂ ವ್ಯಾಪಾರಿಯಾಗಿದ್ದ ಜಯಮ್ಮ ಹೊರ ವರ್ತುಲ ರಸ್ತೆಯಲ್ಲಿರುವ ಇನ್ಫೆಂಟ್ ಟ್ರಾವೆಲ್ಸ್ ಎಂಬ ಪೆಟ್ರೋಲ್ ಬಂಕ್‌ಗೆ ಪ್ರತಿ ದಿನ ಹೂ ನೀಡುತ್ತಿದ್ದರು. ಬಂಕ್ ಆವರಣದಲ್ಲಿಯೇ ಗ್ಯಾರೇಜ್ ನಡೆಸುತ್ತಿದ್ದ ಚಂದ್ರ ಎಂಬಾತನಿಗೆ ಜಯಮ್ಮ ಅವರ ಪರಿಚಯವಾಗಿತ್ತು. ಚಂದ್ರನಿಗೆ ಆಕೆ ಹದಿನೈದು ಸಾವಿರ ರೂಪಾಯಿ ಸಾಲ ನೀಡಿದ್ದರು’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್ ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಸಾಲವನ್ನು ವಾಪಸ್ ನೀಡುವಂತೆ ಜಯಮ್ಮ ಹಲವು ಬಾರಿ ಕೇಳಿದರೂ ಆತ ಹಣ ನೀಡಿರಲಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆತನ ಜತೆ ಜಗಳವಾಡಿದ ಜಯಮ್ಮ ಕಾಲಿನಿಂದ ಒದ್ದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು, ಇದರಿಂದ ಅವಮಾನಿತನಾದ ಆತ ಕೊಲೆ ಮಾಡಲು ಸಂಚು ರೂಪಿಸಿದ್ದ. ಗೆಳೆಯ ಯೋಗಾನಂದ, ಮಣಿಗೆ ಸುಪಾರಿ ನೀಡಿದ್ದ’ ಎಂದು ಅವರು ಮಾಹಿತಿ ನೀಡಿದ್ದಾರೆ.‘ಜಯಮ್ಮ ಅವರ ಮನೆಗೆ ಜ.17ರಂದು ನುಗ್ಗಿದ ದುಷ್ಕರ್ಮಿಗಳು ವಯರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಇಪ್ಪತ್ತು ಗ್ರಾಂ ಚಿನ್ನಾಭರಣ ದೋಚಿದ್ದರು. ಘಟನೆಯ ನಂತರ ಚಂದ್ರ ತಲೆಮರೆಸಿಕೊಂಡಿದ್ದಾನೆ. ಯೋಗಾನಂದ ಅಪರಾಧ ಹಿನ್ನೆಲೆಯುಳ್ಳವನಾಗಿದ್ದು ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳಿವೆ’ ಎಂದು ಸಿದ್ದರಾಮಪ್ಪ ತಿಳಿಸಿದ್ದಾರೆ. ಬ್ಯಾಟರಾಯನಪುರ ಠಾಣೆಯ ಇನ್‌ಸ್ಪೆಕ್ಟರ್ ಡಿ.ಎಸ್ ರಾಜೇಂದ್ರ ಮತ್ತು ಅವರ ತಂಡ ಪ್ರಕರಣ ಭೇದಿಸಿ ಆರೋಪಿಗಳನ್ನು ಬಂಧಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.