ಮಂಗಳವಾರ, ಜನವರಿ 21, 2020
29 °C

ಇರಾನ್‌ಗೆ ಕಠಿಣ ನಿರ್ಬಂಧ: ಸರ್ಕೋಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್/ ವಾಷಿಂಗ್ಟನ್ (ಪಿಟಿಐ,ಐಎಎನ್‌ಎಸ್, ಆರ್‌ಐಎ ನೊವೋಸ್ತಿ): ಯಾವುದೇ ಪೂರ್ವ ಷರತ್ತುಗಳಿಲ್ಲದೆ ಇರಾನ್ ತನ್ನ ಪರಮಾಣು ಯೋಜನೆ ಸ್ಥಗಿತಗೊಳಿಸದಿದ್ದರೆ ಆ ದೇಶದ ವಿರುದ್ಧ ಮತ್ತಷ್ಟು ದೃಢ ಮತ್ತು ಕಠಿಣವಾದ ನಿರ್ಬಂಧಗಳನ್ನು ಹೇರಬೇಕು ಎಂದು ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಹೇಳಿದ್ದಾರೆ.    ಇದೇ ವೇಳೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್, ಇರಾನ್ ಎದುರು `ಸಂಧಾನ ಅಥವಾ ನಿರ್ಬಂಧ~ದ ಆಯ್ಕೆ ಇಟ್ಟಿದ್ದಾರೆ.ಪ್ಯಾರಿಸ್‌ನಲ್ಲಿ `ಫ್ರೆಂಚ್ ರಾಜನೀತಿ~ ಕುರಿತು ಮಾತನಾಡಿದ ಸರ್ಕೋಜಿ, ಇರಾನ್‌ನಿಂದ ತೈಲ ಖರೀದಿ ತಡೆಯಲು ಮತ್ತು ಆ ದೇಶದ ಪ್ರಧಾನ ಬ್ಯಾಂಕ್ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಠಿಣ ನಿರ್ಬಂಧ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಸೇನೆಯ ಮಧ್ಯಪ್ರವೇಶ ತಡೆಯಲು ಅಗತ್ಯ ಕ್ರಮ ಕೈಗೊಂಡಿದ್ದರೂ ಸಮಯ ಕೈಜಾರುತ್ತಿದೆ ಎಂದು ಎಚ್ಚರಿಸಿದರು. ಇರಾನ್ ವಿರುದ್ಧದ ನಿರ್ಬಂಧಕ್ಕೆ ಯೂರೋಪ್ ರಾಷ್ಟ್ರಗಳ ಒಕ್ಕೂಟದ ವಿದೇಶಾಂಗ ಸಚಿವರು ಸೋಮವಾರ ಒಪ್ಪಿಗೆ ಸೂಚಿಸುವ ನಿರೀಕ್ಷೆ ಇದೆ. ಸೇನೆಯ ಮಧ್ಯಪ್ರವೇಶದ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕ ಮತ್ತು ಇಸ್ರೇಲ್ ನಿರಾಕರಿಸಿವೆ.ಇರಾನ್ ಮೇಲೆ ಪಾಶ್ಚಾತ್ಯ ರಾಷ್ಟ್ರಗಳ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೈ ಲಾರ್ವೊವ್, ಒಂದು ವೇಳೆ ದಾಳಿ ನಡೆದರೆ ಅದೊಂದು ಮಹಾ ದುರಂತವಾಗಲಿದೆ. ದೇಶದಲ್ಲಿ ನಡೆಯುತ್ತಿರುವ ಸುನ್ನಿ-ಶಿಯಾ ಸಂಘರ್ಷದ ಬೆಂಕಿಗೆ ಎಣ್ಣೆ ಸುರಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)