ಶನಿವಾರ, ಮಾರ್ಚ್ 6, 2021
19 °C

ಇಲ್ಲಿನ ಕ್ರಿಕೆಟ್‌ ಪ್ರೀತಿಗೆ ಸೋಲಿಲ್ಲ...

-ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಇಲ್ಲಿನ ಕ್ರಿಕೆಟ್‌ ಪ್ರೀತಿಗೆ ಸೋಲಿಲ್ಲ...

ಆ ಕ್ಯಾಚ್‌ ಬಿಟ್ಟಾಗ ಆ ಹುಡುಗಿ ಅಕ್ಷರಶಃ ಅತ್ತುಬಿಟ್ಟಳು...

ಏ‌ಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ವೇಳೆ ಬಾಂಗ್ಲಾದೇಶ ಹಾಗೂ ‌ಪಾಕಿಸ್ತಾನ ನಡುವಿನ ಪಂದ್ಯದ ಈ ದೃಶ್ಯವನ್ನು ಟಿವಿಯಲ್ಲಿ ಮತ್ತೆ ಮತ್ತೆ ತೋರಿಸಲಾಗುತಿತ್ತು. ಪಾಕ್‌ ಎದುರು ಗೆಲುವಿನ ಅಂಚಿನಲ್ಲಿದ್ದ ಬಾಂಗ್ಲಾ ತಂಡದ ಫೀಲ್ಡರ್‌ಗಳು ಶಾಹಿದ್‌ ಅಫ್ರಿದಿ ನೀಡಿದ ಸುಲಭ ಕ್ಯಾಚ್‌ ಕೈಚೆಲ್ಲಿಬಿಟ್ಟರು.

ಷೇರ್‌ ಎ ಬಾಂಗ್ಲಾ ನ್ಯಾಷನಲ್‌ ಕ್ರೀಡಾಂಗಣದ ಗ್ಯಾಲರಿಯಲ್ಲಿ ತನ್ನ ಗೆಳತಿಯರೊಂದಿಗೆ ತುದಿಗಾಲಲ್ಲಿ ನಿಂತು ಖುಷಿಯಿಂದ ಆ ಪಂದ್ಯ ವೀಕ್ಷಿಸುತ್ತಿದ್ದ ಆ ಹುಡುಗಿ ಒಮ್ಮೆಲೇ ಆಘಾತಕ್ಕೊಳಗಾದಳು. ಚಿಕ್ಕ ಮಗುವಿನಂತೆ ಅಳಲಾರಂಭಿಸಿದಳು. ಅಫ್ರಿದಿ ಆರ್ಭಟದ ಎದುರು ಕೊನೆಗೂ ಬಾಂಗ್ಲಾ ಶರಣಾಯಿತು. ಆದರೆ ಕೊನೆಯಲ್ಲಿ ಕ್ಯಾಮೆರಾ ತಿರುಗಿದ್ದು ‘ನಮ್ಮ ದೇಶದ ತಂಡ ಸೋತಿರಬಹುದು. ಆದರೆ ನಮ್ಮ ಕ್ರಿಕೆಟ್ ಪ್ರೀತಿಗೆ ಸೋಲಿಲ್ಲ’ ಎಂಬ ಫಲಕ ಹಿಡಿದುನಿಂತಿದ್ದ ಯುವಕನತ್ತ...!

ಈ ಒಂದು ಘಟನೆ ಬಾಂಗ್ಲಾದೇಶದಲ್ಲಿ ಕ್ರಿಕೆಟ್‌ ಎಷ್ಟೊಂದು ಪ್ರಸಿದ್ಧಿ ಪಡೆದುಕೊಂಡಿದೆ, ಕ್ರಿಕೆಟ್‌ ಪ್ರೀತಿ ಯಾವ ರೀತಿ ಇದೆ ಎಂಬುದನ್ನು ಬಿಚ್ಚಿಡುತ್ತದೆ. ನಿಮಗೆ ಗೊತ್ತಿರಬಹುದು, 2011ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಸಮಾರಂಭ ನಡೆದಿದ್ದು ಇದೇ ಬಾಂಗ್ಲಾದಲ್ಲಿ. ಆಗ ಕ್ರಿಕೆಟ್‌ ಜಗತ್ತು ಈ ಪುಟ್ಟ ರಾಷ್ಟ್ರವನ್ನು ಹಾಡಿ ಹೊಗಳಿತ್ತು. ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ಆ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅದಕ್ಕೆ ಕಾರಣ. ಈ ವಿಶ್ವಕಪ್‌ನ ಕೆಲ ಪಂದ್ಯಗಳನ್ನು ವರದಿ ಮಾಡಲು ಹೋಗಿದ್ದಾಗ ಈ ದೇಶದಲ್ಲಿ ನಿರ್ಮಾಣವಾಗಿದ್ದ ವಾತಾವರಣವನ್ನು ಇಲ್ಲಿ ಹಂಚಿಕೊಳ್ಳಬೇಕು.

ಢಾಕಾದ ಹೃದಯ ಭಾಗದಿಂದ ಮೀರ್‌ಪುರ್‌ಗೆ ತೆರಳುವ ಹಾದಿಯಲ್ಲಿ ಸಿಗುವ ತುರಗ್ ನದಿಯ ತೀರದಲ್ಲಿನ ಸ್ಲಮ್‌ಗಳಲ್ಲಿ ಆಗ ನೆಲೆಸಿದ್ದ ಕ್ರಿಕೆಟ್ ಕ್ರೇಜ್ ನೋಡಬೇಕಿತ್ತು. ಅಲ್ಲಿನ ಪುಟ್ಟ ಪುಟ್ಟ ಗುಡಿಸಲುಗಳಲ್ಲೂ ಗುಂಪುಕಟ್ಟಿ ನಿಂತು ಟಿವಿಯಲ್ಲಿ ಕ್ರಿಕೆಟ್‌ ವೀಕ್ಷಿಸುತ್ತಿದ್ದ ರೀತಿ ಈ ದೇಶದ ಕ್ರಿಕೆಟ್ ಪ್ರೀತಿ ಯನ್ನು ಬಿಚ್ಚಿಡುತ್ತದೆ. ಹಜ್ರತ್ ಶಹಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕ್ರೀಡಾಂಗಣದವರೆಗೆ ಆಟಗಾರರ ಪೋಸ್ಟರ್‌ಗಳದ್ದೇ ಮೆರವಣಿಗೆ.ವಿಶೇಷವೆಂದರೆ ಆ ವಿಶ್ವಕಪ್‌ ವೇಳೆ ಬಾಂಗ್ಲಾದೇಶದ ಪಂದ್ಯಗಳು ಇದ್ದಾಗ ಅಲ್ಲಿನ ಸರ್ಕಾರ ರಜೆ ಘೋಷಿಸಿತ್ತು. ಬಾಂಗ್ಲಾ ತಂಡ ಆಡುವಾಗ ಕೆಲಸದ ಮೇಲೆ ಹೆಚ್ಚು ಗಮನ ಹರಿಸಲು ಸಾಧ್ಯವಾಗು ವುದಿಲ್ಲ ಎನ್ನುವುದು ಅದಕ್ಕೆ ಮತ್ತೊಂದು ಕಾರಣ. ಪ್ರತಿದಿನ ಸಂಜೆ ಆರು ಗಂಟೆ ಕಾಲ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ಆದೇಶಿಸ ಲಾಗಿತ್ತು. ಮನೆಗಳಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಲು ವಿದ್ಯುತ್ ಅಭಾವ ಉಂಟಾಗದಿರಲಿ ಎಂಬುದು ಅದಕ್ಕೊಂದು ಕಾರಣ.

ಭಾರತದ ನೆರೆಯ ಈ ರಾಷ್ಟ್ರದಲ್ಲಿ ಶನಿವಾರ ಮುಗಿದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈ ಟೂರ್ನಿಯಿಂದಾಗಿ ಬಾಂಗ್ಲಾ ಕ್ರಿಕೆಟ್‌ ಮಂಡಳಿ (ಬಿಸಿಬಿ) ಆರ್ಥಿಕವಾಗಿ ಮತ್ತಷ್ಟು ಬಲಾಢ್ಯವಾಗಿದೆ. ಫಟುಲ್ಲಾ ಹಾಗೂ ಮೀರ್‌ಪುರದಲ್ಲಿ ನಡೆದ ಎಲ್ಲಾ ಪಂದ್ಯಗಳು ರೋಚಕ ಹೋರಾಟಕ್ಕೆ ಕಾರಣವಾದವು. ಭಾರತ ತಂಡವೂ ಇದ್ದ ಕಾರಣ ಟೂರ್ನಿಗೆ ಪ್ರಾಯೋಜಕರ ಕೊರತೆ ಇರಲಿಲ್ಲ. ಈ ಟೂರ್ನಿಯ ಆದಾಯದ ಶೇಕಡಾ 50ರಷ್ಟು ಹಣ ಬಿಸಿಬಿ ಪಾಲಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ನೆರವಾಗಿದೆ. ಈಗ ಬಾಂಗ್ಲಾ ಕ್ರಿಕೆಟ್‌, ಪಾಕಿಸ್ತಾನ ಹಾಗೂ ಶ್ರೀಲಂಕಾಕ್ಕಿಂತ ಹೆಚ್ಚು ಆದಾಯ ಹೊಂದಿರುವ ಮಂಡಳಿ!ಅಂದಹಾಗೆ, ‘ದಿ ಲ್ಯಾಂಡ್ ಆಫ್ ಟೈಗರ್’ ನಾಡಿನಲ್ಲಿ ಮಾರ್ಚ್‌ 16ರಿಂದ ಮತ್ತೆ ಕ್ರಿಕೆಟ್‌ ಕಲರವ. ಏಕೆಂದರೆ ಟ್ವೆಂಟಿ-–20 ವಿಶ್ವಕಪ್‌ ಕ್ರಿಕೆಟ್‌ ಉತ್ಸವ ಶುರುವಾಗಲಿದೆ. ಇತ್ತೀಚೆಗೆ ರಾಜಕೀಯ ಬೆಳವಣಿಗೆಗಳಿಂದಾಗಿ ಈ ದೇಶದಲ್ಲಿ ಹಿಂಸೆ ನೆಲೆಸಿತ್ತು. ಏಷ್ಯಾಕಪ್‌ ಹಾಗೂ ಚುಟುಕು ವಿಶ್ವಕಪ್‌ ನಡೆಯುವುದೇ ಅನುಮಾನ ಎಂಬಂತಾ ಗಿತ್ತು. ಜೊತೆಗೆ ಕ್ರೀಡಾಂಗಣ ಕಾಮಗಾರಿ ಕೂಡ ಪೂರ್ಣವಾಗಿ ಮುಗಿದಿರಲಿಲ್ಲ. ಆದರೆ ಈಗ ಎಲ್ಲವೂ ಸರಿಯಾಗಿದೆ. ಏಷ್ಯಾಕಪ್‌ ಯಶಸ್ವಿಯಾಗಿ ನಡೆದಿರುವುದು ಭರವಸೆ ಮೂಡಿಸಿದೆ. ಅದಕ್ಕೆ ಕಾರಣ ಬಿಸಿಸಿಐ ನೀಡಿದ ಬೆಂಬಲ. ಒಂದು ಕಾಲದಲ್ಲಿ ಫುಟ್‌ಬಾಲ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಈ ದೇಶದಲ್ಲಿ ಈಗ ಕ್ರಿಕೆಟ್‌ಗೆ ಮಹತ್ವದ ಸ್ಥಾನ. ಫುಟ್‌ಬಾಲ್ ಮೈದಾನವಾಗಿದ್ದ ಮೀರ್‌ಪುರದಲ್ಲಿನ ಕ್ರೀಡಾಂಗಣ ಈಗ ಸಂಪೂರ್ಣ ಕ್ರಿಕೆಟ್‌ಗೆ ಮೀಸಲು. ರಾಜಕೀಯ ಏರುಪೇರಿನಿಂದಾಗಿ ಪದೇ ಪದೇ ಹಿಂಸೆಗೆ ಕಾರಣವಾಗುವ ಈ ದೇಶದ ಜನರ ಮನಸ್ಸಿಗೆ ಕ್ರಿಕೆಟ್‌ ಮುದ ನೀಡುತ್ತಿದೆ. ಇಲ್ಲಿನ ರಿಕ್ಷಾ ವಾಲಾಗಳು, ಆಟೋ ಚಾಲಕರೂ ಕ್ರಿಕೆಟ್‌ ಆಡದೇ ಮಲಗುವುದಿಲ್ಲ. ಐಪಿಎಲ್‌ ಮಾದರಿಯಲ್ಲಿ ಆಯೋಜಿಸಲಾಗಿದ್ದ ಬಾಂಗ್ಲಾ ಪ್ರೀಮಿಯರ್‌ ಲೀಗ್‌ (ಬಿಪಿಎಲ್‌) ಕೂಡ ಇಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಷೇರ್‌ ಎ ಬಾಂಗ್ಲಾ ನ್ಯಾಷನಲ್‌ ಕ್ರೀಡಾಂಗಣ ಕೂಡ ಅದ್ಭುತ ವಾಗಿದೆ. ವಿಶ್ವದ ಕೆಲವೇ ದೇಶಗಳಲ್ಲಿ ಇರುವ ಹೋವರ್‌–-ಕವರ್‌ ಯಂತ್ರ ಇಲ್ಲಿದೆ. ಮಳೆ ಬಂದಾಗ ಪಿಚ್ ಹಾಗೂ ಅದರ ಸುತ್ತಮುತ್ತ ಲಿನ ಸ್ಥಳವನ್ನು ಮುಚ್ಚುವ ಯಂತ್ರವೇ ಹೋವರ್–-ಕವರ್. ಫಟುಲ್ಲಾ, ಚಿತ್ತಗಾಂಗ್‌, ಖುಲ್ನಾ, ಸೈಲೆಟ್‌ನಲ್ಲೂ ಅತ್ಯುನ್ನತ ಕ್ರೀಡಾಂಗಣಗಳಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತ್ತೀಚೆಗೆ ಈ ತಂಡದ ಪ್ರದರ್ಶನ ಅಷ್ಟಕಷ್ಟೇ. ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಅದಕ್ಕಾಗಿಯೇ ಮಾಜಿ ಆಟಗಾರ ಹಾಗೂ ಕ್ರಿಕೆಟ್ ವಿಶ್ಲೇಷಕ ನವಜೋತ್ ಸಿಂಗ್ ಸಿಧು ಈ ತಂಡವನ್ನು ಜಿರಲೆಗೆ  ಹೋಲಿಸಿದ್ದಾರೆ. ‘ಪಕ್ಷಿಯಂತೆ ಹಾರಾಡಲು ಜಿರಲೆ ಪ್ರಯತ್ನಿಸುತ್ತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

ಬಾಂಗ್ಲಾದಲ್ಲಿ ಕನ್ನಡದ ಕಂಪು...

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ನಡೆಯುವಾಗ ಬಾಂಗ್ಲಾದೇಶದಲ್ಲಿ ಕನ್ನಡದ ಕಂಪು ನೆಲೆಸಿತ್ತು. ಇದಕ್ಕೆ ಕಾರಣ ಈ ಟೂರ್ನಿಗೆ ಪ್ರಾಯೋಜಕತ್ವ ವಹಿಸಿದ್ದು ಮೈಸೂರು ಮೂಲದ ‘ಎನ್‌.ಆರ್‌  ಸಮೂಹದ ಒಡೆತನಕ್ಕೆ ಸೇರಿದ ‘ಸೈಕಲ್‌ ಬ್ರ್ಯಾಂಡ್‌’ ಪ್ಯೂರ್‌ ಅಗರಬತ್ತಿ. ಕ್ರಿಕೆಟ್‌ ಪಂದ್ಯಗಳ ವೇಳೆ ಈ ಪ್ಯೂರ್‌ ಅಗರಬತ್ತಿಯ ಜಾಹೀರಾತು ಟಿವಿ ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡಾಗ ಏನೋ ಪುಳಕ.  ನಮ್ಮ ನಾಡಿನ ಸಂಸ್ಥೆ ಎಂಬ ಭಾವ. 2008ರಿಂದ ಕ್ರಿಕೆಟ್‌ ಮತ್ತಿತರ ಕ್ರೀಡೆಗಳ ಜತೆ ಸೈಕಲ್‌ ಬ್ರ್ಯಾಂಡ್‌ ಪ್ರಾಯೋಜಕತ್ವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.