ಗುರುವಾರ , ಮೇ 19, 2022
24 °C

ಇವರಿಗೆ ದೀಪಾವಳಿಯೂ ಕತ್ತಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವರಿಗೆ ದೀಪಾವಳಿಯೂ ಕತ್ತಲು

ನವದೆಹಲಿ (ಐಎಎನ್‌ಎಸ್): 2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರ ಆರು ಮಂದಿಯ ಜಾಮೀನಿಗೆ ಸಂಬಂಧಿಸಿದ ಆದೇಶವನ್ನು ಸಿಬಿಐ ವಿಶೇಷ ನ್ಯಾಯಾಲಯ ನ.3ಕ್ಕೆ ಕಾಯ್ದಿರಿಸಿದೆ.ಹೀಗಾಗಿ ಕರುಣಾನಿಧಿ ಪುತ್ರಿ ದೀಪಾವಳಿಯನ್ನು ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಕನಿಮೋಳಿ ಹಾಗೂ  ಕುಸೆಗ್ನಾನ್ ನಿರ್ದೇಶಕರಾದ ಆಸಿಫ್ ಬಲ್ವಾ, ರಾಜೀವ್ ಬಿ.ಅಗರವಾಲ್, ಸಿನಿಯುಗ್ ಫಿಲ್ಮಂಸ್‌ನ ಕರೀಂ ಮೊರಾನಿ, ಮತ್ತು ಕಲೈಂಞ್ಞರ್ ಟಿ.ವಿಯ ಶರದ್ ಕುಮಾರ್ ಅವರಿಗೆ ಜಾಮೀನು ನೀಡಲು ತಮ್ಮ ಅಭ್ಯಂತರ ಇಲ್ಲ ಎಂದು ಸಿಬಿಐ ಪರ ವಕೀಲರು ನ್ಯಾಯಾಧೀಶ ಒ.ಪಿ.ಸೈನಿ ಅವರಿಗೆ ತಿಳಿಸಿದರು.ಆದರೆ ಸ್ವಾನ್ ಟೆಲಿಕಾಂ ಪ್ರವರ್ತಕ ಶಾಹಿದ್ ಬಲ್ವ ಮತ್ತು ದೂರಸಂಪರ್ಕ ಇಲಾಖೆ ಮಾಜಿ ಸಚಿವ ಎ.ರಾಜಾ ಅವರ ಕಾರ್ಯದರ್ಶಿ ಆರ್.ಕೆ.ಚಂದೂಲಿಯಾ ಅವರಿಗೆ ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿತು.ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು ಕಳೆದ ವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ರಾಜಕೀಯ ವಲಯದಲ್ಲಿ ಈ ಭೇಟಿಗೆ ಮಹತ್ವ ಬಂದಿತ್ತು. ಅಲ್ಲದೆ ಕನಿಮೊಳಿಗೆ ಜಾಮೀನು ದೊರೆಯುವ ಭರವಸೆಯೂ ಇತ್ತು.ಇದಕ್ಕೂ ಮುನ್ನ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಡಿಎಂಕೆ ವಕ್ತಾರ ಟಿಕೆಎಸ್ ಇಳಂಗೋವನ್, ಕನಿಮೊಳಿ ಅವರಿಗೆ ಜಾಮೀನು ದೊರೆಯುವ ಬಗ್ಗೆ ವಿಶ್ವಾಸ ಇದೆ. ಈ ಹಿಂದೆಯೇ ಅವರಿಗೆ ಜಾಮೀನು ದೊರೆಯಬೇಕಾಗಿತ್ತು. ಪ್ರಕರಣದ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದರು.ಕಳೆದ ಐದು ತಿಂಗಳಿನಿಂದಲೂ ಕನಿಮೊಳಿ ಜೈಲಿನಲ್ಲಿದ್ದಾರೆ. ಅವರು ಪ್ರಕರಣದಲ್ಲಿ ಆರೋಪಿ ಮಾತ್ರ. ಆರೋಪಿಗೆ ಜಾಮೀನು ನೀಡದಿರುವುದೂ ತಪ್ಪು ಎಂದರು.

 

ಬಿ.ಎಸ್.ಯಡಿಯೂರಪ್ಪ, ಎಸ್.ಎನ್.ಕೃಷ್ಣಯ್ಯ ಶೆಟ್ಟಿ , ಡಾ. ಎಚ್.ಎನ್.ಕೃಷ್ಣ : ಇವರಿಗೂ ದೀಪಾವಳಿ ಕತ್ತಲುಪ್ರಜಾವಾಣಿ ವಾರ್ತೆ

ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ. ಎಚ್.ಎನ್.ಕೃಷ್ಣ ಅವರೆಲ್ಲ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.ಈ ಹಿನ್ನೆಲೆಯಲ್ಲಿ, ಕಟ್ಟಾ ಹೊರತುಪಡಿಸಿ ಉಳಿದವರೆಲ್ಲ ಬೆಳಕಿನ ಹಬ್ಬವನ್ನು ಪರಪ್ಪನ ಅಗ್ರಹಾರದಲ್ಲಿನ ಕಾರಾಗೃಹದಲ್ಲೇ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಕಟ್ಟಾ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದುದರಿಂದ ಜಾಮೀನು ದೊರಕದಿದ್ದರೂ ಅವರಿಗೆ ಸದ್ಯ ಜೈಲಿನಿಂದ ಬಿಡುಗಡೆ ದೊರೆತಿದೆ.ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ಅವರು ಶುಕ್ರವಾರಕ್ಕೆ (ಅ.28) ಮುಂದೂಡಿದ್ದಾರೆ. ಈ ಪೈಕಿ ಸೋಮವಾರ ಶೆಟ್ಟಿ ಅವರ ಪರ ವಕೀಲ ಟಾಮಿ ಸಬಾಸ್ಟಿನ್ ವಾದ ಮಂಡಿಸಿದರು. ಯಡಿಯೂರಪ್ಪನವರ ಪರ ವಕೀಲರು ಈಗಾಗಲೇ ವಾದ ಮಂಡನೆ ಮುಗಿಸಿದ್ದಾರೆ.ಸಬಾಸ್ಟಿನ್ ಅವರು ಇನ್ನೂ ವಾದ ಮಂಡನೆ ಬಾಕಿ ಉಳಿಸಿಕೊಂಡಿರುವ ಕಾರಣ, 28ರಂದು ಅವರ ವಾದದ ನಂತರ ದೂರುದಾರರಾಗಿರುವ ಸಿರಾಜಿನ್ ಬಾಷಾ ಪರ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಲಿದ್ದಾರೆ.ವೈದ್ಯಕೀಯ ದಾಖಲೆಗೆ ಆದೇಶ: ಜಾಮೀನು ಕೋರಿರುವ ಕಟ್ಟಾ ಹಾಗೂ ಕೃಷ್ಣ ಅವರ ಅರ್ಜಿಯು ಪ್ರಥಮ ಬಾರಿಗೆ ಸೋಮವಾರ ವಿಚಾರಣೆಗೆ ಬಂದಿತ್ತು.ಈ ಹಿನ್ನೆಲೆಯಲ್ಲಿ ಎರಡೂ ಪ್ರಕರಣಗಳಲ್ಲಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ನ್ಯಾ.ಪಿಂಟೊ ಆದೇಶಿಸಿದ್ದಾರೆ. ಇವರಿಬ್ಬರ ಅರ್ಜಿಯ ವಿಚಾರಣೆಯನ್ನು ಕ್ರಮವಾಗಿ ಅ.28 ಹಾಗೂ ಅ.31ಕ್ಕೆ ಮುಂದೂಡಲಾಗಿದೆ.ಕಟ್ಟಾ ಅವರು ಕ್ಯಾನ್ಸರ್ ಹಾಗೂ ಇತರ ತೊಂದರೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಜಾಮೀನು ಕೋರಿರುವ ಕಾರಣ, ವೈದ್ಯಕೀಯ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ಹಾಜರು ಪಡಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ಜೊತೆಗೆ ಇವರಿಗೆ ಜಾಮೀನು ನೀಡುವ ಕುರಿತು ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ ಅದನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದ್ದಾರೆ.ಆಕ್ಷೇಪಣೆ: ಈ ಮಧ್ಯೆ, ಯಡಿಯೂರಪ್ಪ ಅವರಿಗೆ ಜಾಮೀನು ನೀಡದಂತೆ ಬಾಷಾ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ. ಇವರ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಲೋಕಾಯುಕ್ತರು ಇನ್ನೂ ಹಲವು ದೂರುಗಳ ವಿಚಾರಣೆ ನಡೆಸುತ್ತಿದ್ದಾರೆ.ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯಗಳನ್ನು ನಾಶಪಡಿಸುವ ಸಂಭವವಿದೆ, ರಾಜಕೀಯ ಪ್ರಭಾವ ಬಳಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಲೂ ಬಹುದು. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.