ಶನಿವಾರ, ಮೇ 15, 2021
26 °C

ಇವರು ನಮ್ಮವರು

ಭಾರತೀ ಕಾಸರಗೋಡು Updated:

ಅಕ್ಷರ ಗಾತ್ರ : | |

ಕಳೆದ ತಿಂಗಳು ಒಂದು ಮಧ್ಯಾಹ್ನ ಬಿಗ್‌ಬಜಾರಿನಲ್ಲಿ ಸುಮಾರು ಎರಡು ಸಾವಿರದಷ್ಟು ಬೆಲೆಬಾಳುವ ಬಟ್ಟೆಬರೆ ಖರೀದಿಸಿ, ಮನೆಗೆ ಹೋಗಲು ಆಟೊಗಾಗಿ ಕಾಯುತ್ತಿದ್ದೆ. ನಮ್ಮ ಮನೆ ಅಲ್ಲಿಂದ ಮಿನಿಮಮ್ ಆಗುವಷ್ಟೇ ಸಮೀಪವಿತ್ತು.

ಅಲ್ಲಿ ಒಂದಷ್ಟು ಆಟೊವಾಲಾಗಳಿದ್ದರು. ಯಾರನ್ನು ಕೇಳಿದರೂ ಮುವ್ವತ್ತು ರೂಪಾಯಿಗೆ ಕಡಿಮೆ ಒಪ್ಪಲೇ ಇಲ್ಲ. ಆದರೆ ಈ ದರ ತೆರಲು ನಾನು ಒಪ್ಪಲಿಲ್ಲ. ನನ್ನ ಪೇಚಾಟವನ್ನು ಆಟೊ ಅಣ್ಣಂದಿರ ಗುಂಪು ಗಮನಿಸುತ್ತಲೇ ಇತ್ತು. ಕಡೆಗೊಮ್ಮೆ ಅವರಲ್ಲಿ ಒಬ್ಬ ಸಣ್ಣ ಹುಡುಗ ಹತ್ತಿರ ಬಂದ. `ಕಡೇ ಮಾತು ಕಣ್ರಕ್ಕಾ. ಇಪ್ಪತ್ತೈದು ಕೊಟ್ಬುಡಿ~ ಆಗ್ರಹಿಸಿದ. ಗತ್ಯಂತರವಿಲ್ಲದೆ ಒಪ್ಪಿದೆ. ಕೈಲಿದ್ದ ಪ್ಯಾಕೆಟ್ಟುಗಳನ್ನೆಲ್ಲ ಆಟೊದಲ್ಲಿರಿಸಿ, ಇನ್ನೇನು ಹತ್ತಿಕೊಳ್ಳಬೇಕೆನ್ನುವಾಗ, ರಾಕೆಟ್ಟಿನಂತೆ ನನ್ನ ಬಿಟ್ಟು ಹೊರಟೇಹೋದ! ನಾನು ಆ ಗುಂಪಿನೆಡೆ ಓಡಿ, ನನಗೆ ಸಹಾಯ ಮಾಡುವಂತೆ ಕೇಳಿಕೊಂಡೆ. ಇದನ್ನೆಲ್ಲ ಮಂದಹಾಸದಿಂದ ವೀಕ್ಷಿಸುತ್ತಿದ್ದ ಅವರು, ನನ್ನ ಮಾತಿಗೆ ಉದಾಸೀನದ ಉತ್ತರ ಕೊಟ್ಟರಷ್ಟೆ.

ಇನ್ನೊಬ್ಬ ತರುಣ ಬೇಗ ನನ್ನಲ್ಲಿಗೆ ಬಂದು `ಅಕ್ಕೋ, ಮಾತಾಡಕ್ಕೆ ಠೇಮಿಲ್ಲ.... ಬೇಗ ಮೂವತ್ತು ಕೊಟ್ಬಿಡಿ. ಆ ನನಮಗನ್ನ ಹಿಡಿದು ಹಾಕ್ತೀನಿ~ ಅವಸರಿಸಿದ. ಸರಿ ಮುವ್ವತ್ತಕ್ಕಿಂತ ಎರಡು ಸಾವಿರ ದೊಡ್ಡದು ತಾನೇ? ಕೂಡಲೇ ಒಪ್ಪಿ ಅವನ ಆಟೊ ಏರಿದೆ. ಇದೀಗ ಮುಂದೋಡುತ್ತಿದ್ದವನು ಹಠಾತ್ತನೆ ವೇಗ ಕಡಿಮೆ ಮಾಡಿ ಅತಿನಿಧಾನವಾಗಿ ತೆವಳತೊಡಗಿದ. ಇವನು ಅವನ ಹಿಂಭಾಗಕ್ಕೆ ಮುತ್ತು ಕೊಟ್ಟಷ್ಟೇ ನಿಕಟವಾಗಿ ತಾಗಿ, ತಾನೂ ಅಷ್ಟೇ ನಿಧಾನವಾಗಿ ಸಾಗತೊಡಗಿದ. ಈ ನಾಟಕ ಸ್ವಲ್ಪ ಹೊತ್ತು ನಡೆಯಿತು. ಹೀಗೆ ಒಂದಿಷ್ಟು ದೂರ ಚಲಿಸಿದ ನಂತರ, ನಾನು ಕೂತಿದ್ದ ಆಟೊದವನು ಏಕ್‌ದಂ ವೀರಾವೇಶದಿಂದ ಅವನನ್ನು ಓವರ್‌ಟೇಕ್ ಮಾಡಿ, ಅವನಿಗೆ ಅಡ್ಡಹಾಕಿ ನಿಂತ! `ನಿಲ್ಸೊಲೇ. ಏನು, ಅಮ್ಮಾವ್ರ ಲಗೇಜು ಹೊಡ್ಕೊಂಡು ಹೋಗ್ಬೇಕು ಅಂತ ಮಾಡಿದ್ಯಾ? ನಾವೇನು ಕಳ್ಳೆಪುರಿ ತಿಂತಾ ಇದೀನಾ?~ ಅಂತೆಲ್ಲ ರೋಪು ಹಾಕಿದ. ಮರುಕ್ಷಣ ಧ್ವನಿಯನ್ನು ವಿನಯವಾಗಿ ಮಾರ್ಪಡಿಸಿಕೊಂಡು, `ವೋಗಿ ಮೇಡಂ, ಅತ್ತಿಕೊಳ್ಳಿ. ಎಲ್ಲಿ, ನನ್ನ ಮುವ್ವತ್ತು?~ ಗಿಟ್ಟಿಸಿಕೊಂಡೇ ಪರಾರಿಯಾದ.

`ಅಕ್ಕಾ, ನೀವೂ ಅತ್ಕಂಡ್ರಿ ಅಂತ್ಲೇ ತಿಳಕೊಂಡೆ! ಅದ್ಕೇ ಮುಂದೋದ್ದು....~ ಎಂದು ಆ ಆಟೊದವನು ಬಿಕ್ಕಿದ. ಅಷ್ಟೇ ಅಲ್ಲ, ಮನೆ ಬರೋವರೆಗೂ ತನ್ನ ಪರಮ ಸಾಚಾತನವನ್ನು ಬಗೆಬಗೆಯಾಗಿ ನಿರೂಪಿಸುತ್ತಲೇ ಬಂದ!

ಸ್ವಲ್ಪ ಸಮಯದ ಬಳಿಕ ಅದೇ ಸ್ಥಳದಲ್ಲಿ ನಾನು ಮತ್ತೆ ಆಟೊ ಕಾಯಬೇಕಾದ ಪರಿಸ್ಥಿತಿ. ಅದು ಸಂಜೆಯೇ ಆಗಿತ್ತಾದರೂ, ಜಿಟಿಜಿಟಿ ಮಳೆ. ಇಂಥ ಸಂದರ್ಭದಲ್ಲಿ ಆಟೊದವರನ್ನು ಮಾತಾಡಿಸುವುದೇ ಕಷ್ಟ. ಅವತ್ತು ನನ್ನ ಅದೃಷ್ಟಕ್ಕೆ ಒಂದು ಆಟೊ ಮುಂದೆ ನಿಂತಿತು. ಅನುಮಾನದಿಂದ ವಿಳಾಸ ಹೇಳಿದೆ. `ಬನ್ನಿ ತಾಯೀ~ ಅಂದು, ತುಸುವೂ ತ್ರಾಸಿಲ್ಲದಂತೆ ಮನೆ ತಲುಪಿಸಿದ. ಮಿನಿಮಮ್ ಹಣ ಹದಿನೇಳು ರೂ. ಕೊಡಲು ಹೋದರೆ ತೆಗೆದುಕೊಳ್ಳಲಿಲ್ಲ. `ತುಂಬಾ ಹತ್ರ. ಹತ್ತು ಕೊಡಿ ಸಾಕು~ ಅಂದ. ನಾನು ಅವಾಕ್ಕಾದೆ. `ಅಯ್ಯೋ ರಾಮ. ಇದೆಂಥ ಮಾತು? ಮಿನಿಮಮ್ ಅಂತ ನಿಗದಿಯಾಗಿರೋ ಹಣ ನೀವು ತಗೊಳ್ಲೇಬೇಕು~ ಒತ್ತಾಯ ಮಾಡಿದೆ. ಆದರೂ ಆತ ನನ್ನ ಕೈಯಿಂದ ಹತ್ತು ರೂ. ನೋಟನ್ನು ಮಾತ್ರ ಸೆಳೆದುಕೊಂಡು ಜೇಬಿಗಿರಿಸಿಕೊಂಡ. `ನಿಮ್ಮಂಥವ್ರೆ ಇರ್ತಾರಾ?~ ನಾನು ಉದ್ಗರಿಸುತ್ತಿದ್ದಂತೆ, ಕಪ್ಪನೆಯ ಸಿಡುಬಿನ ಕಲೆಯ ಮೊಗದಲ್ಲಿ ಒಂದು ಭುವನಮೋಹಕ ಮುಗುಳ್ನಗೆಯನ್ನು ತುಳುಕಿಸಿ, ಭರ‌್ರನೆ ಹೊರಟೇಹೋದ.

ನಾನು ಎಂದೂ ಮರೆಯದಂಥ ಮಾತೊಂದನ್ನು ನನಗೆ ಹೇಳಿದ ಇನ್ನೊಬ್ಬ ಆಟೊವಾಲಾನ ಕತೆಯನ್ನು ನಿಮಗೆ ಹೇಳಲೇಬೇಕು. ಈತ ಮಧ್ಯವಯಸ್ಕ. ಮಾತಲ್ಲಿ, ಚಹರೆಯಲ್ಲಿ ಆನಂದ ತಾಂಡವ. ನಾನು ಆಟೊ ಹತ್ತುತ್ತಿದ್ದಂತೆ ಮಾತಿಗೆ ಶುರುಹಚ್ಚಿಕೊಂಡ.

`ನೋಡ್ರಕ್ಕಾ, ನಂಗೆ ಬೀಡಿ-ಸಿಗರೇಟು, ಕುಡ್ತ ಏನೂ ಇಲ್ರ. ಆದ್ರೆ ಊಟ-ತಿಂಡಿ ಭೋ ಆಸೆ. ಅದ್ರಲ್ಲೂ ತರ್ಕಾರಿ ಸಾರು, ಮುದ್ದೆ ನಂಗೆ ಜೀವ! ದಿನಾರಾತ್ರಿ ಅತ್ಗಂಟೆ ಆಯ್ತದೆ ಮನೆಗೋಗಾದು. ಎಂಡ್ತಿ ರುಚಿ ರುಚಿಯಾಗಿ ಪದಾರ್ಥ ಮಾಡಿರ್ತಾಳೆ. ಗಡದ್ದಾಗಿ ಉಣ್ಣಾದು. ನೆಮ್ದಿಯಾಗಿ ನಿದ್ದೆ ವಡ್ಯಾದು. ಇಷ್ಟೇ ಕಣ್ರಕ್ಕಾ ನಂಗೆ ಸ್ವರ್ಗ...

ಇನ್ನೊಂದು ನಿಯಮ ಕಣ್ರಕ್ಕಾ ನಂದು. ಯಾರ ಮುಂದೂ ಕೈಚಾಚೋನಲ್ಲ ನಾನು. ನಾನೇ ದುಡೀಬೇಕು, ನಾನು ತಿನ್ಬೇಕು. ನಂಟ್ರು ಇಷ್ಟ್ರು ಮನೆಗೆ ಬತ್ತಾರೆ. ನಾವು ತಿನ್ನೂದ್ನೇ ಅವರ್ಗೂ ನಜ್ಬೆ ತುಂಬ ಇಕ್ಕಿ ಕಳುಸ್ತೀವಿ. ಆದ್ರೆ ನಾನು ಮಾತ್ರ ನೆಂಟರ ಮನೆಗೆ ವೋಗಾಕಿಲ್ಲ. ಯಾರ ಹಂಗೂ ಬ್ಯಾಡ ಅಂತದೆ ನನ ಮನಸು. ದೇವ್ರೆನ್ನೂ ಕೇಳ್ಕಬುಟ್ಟಿದೀನಿ ಕಣ್ರಕ್ಕಾ. ಸಾಯೋ ಕಡೇಗಳಿಗೆವರ್ಗೂ ಇಂಗೇ ದುಡಿಯೋ ಸಕ್ತಿ ಕೊಟ್ಟುಬಿಡು ಸಿವನೇ~ ಅಂತ. ಆ ನಮ್ಮಪ್ಪ ಅಷ್ಟು ಮಾಡ್ಬುಟ್ರೆ ಗೆದ್ದೆ.~

ಆತನ ಮಾತು ಮುಗಿಯೋ ವೇಳೆಗೆ ನನ್ನ ಮನೆ ಬಂತು. ನಾನು ಕೊಟ್ಟ ಹಣವನ್ನು ಕಣ್ಣಿಗೊತ್ತಿ ಜೇಬಿಗಿಟ್ಟುಕೊಂಡ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.