ಮಂಗಳವಾರ, ಏಪ್ರಿಲ್ 20, 2021
25 °C

ಇವರು ಹೀಗಂತಾರೆ

ಸಂದರ್ಶನ Updated:

ಅಕ್ಷರ ಗಾತ್ರ : | |

ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ಮನಬಂದಂತೆ ತೋರಿಸುವುದು ನಿಜಕ್ಕೂ ತಪ್ಪು. ಎಲ್ಲರಿಗೂ ತಮಗೆ ಬೇಕೆನಿಸಿದಂತೆ ಬದುಕುವ ಹಕ್ಕು ಇದೆ. ನಾನು ತುಂಬಾ ಜನರನ್ನು ನೋಡಿದ್ದೇನೆ. ಅದೇ ಹಳೆಯ ರೀತಿಯಲ್ಲೇ ಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ತೋರಿಸುವ ಮನಃಸ್ಥಿತಿ ಹೋಗಿಲ್ಲ.ಇವನ್ನೆಲ್ಲ ಟಿ.ವಿಯ ಟಿಆರ್‌ಪಿಯ ಸಲುವಾಗಿ ಮಾಡುತ್ತಾರೆ. ಹುಡುಗಿಯರು ಗಂಡಿನ ನೆರವಿಲ್ಲದೇ ಸಾಧನೆ ಮಾಡಿದ, ಬೆಳವಣಿಗೆ ಹೊಂದಿದ ಬೇಕಾದಷ್ಟು ಕಥೆಗಳಿವೆ. ಇಷ್ಟಾದರೂ, ಈಗಲೂ ಹಿಂದಿನ ಕಾಲದ ರೀತಿಯಲ್ಲೇ ಹೆಣ್ಣು ಮಕ್ಕಳನ್ನು ಚಿತ್ರಿಸುವುದು ತಪ್ಪು.ನಮ್ಮ ಧಾರಾವಾಹಿಗಳ ಕಥೆಗಾರರು, ನಿರ್ದೇಶಕರು ಪ್ರಗತಿಪರ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ. ಇವುಗಳ ಹೊರತಾಗಿ ಕೌಟುಂಬಿಕವಾದ ರಂಜನೆಯನ್ನೇ ಕೊಡಲು ಬೇಕಾದಷ್ಟು ವಸ್ತು, ವಿಷಯಗಳಿವೆ. ಅವರು ಅತ್ತ ಗಮನಹರಿಸಿದರೆ ಒಳ್ಳೆಯದು.ನಾವು `ಜೋಗುಳ~ ಧಾರಾವಾಹಿ ಮಾಡಿದಾಗ ನಮಗೆ ತುಂಬಾ ಜನ ಬೈದರು. ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದೀರಿ ಎಂದು ಆರೋಪಿಸಿದರು. ಗಂಡ ಹೆಂಡತಿಯನ್ನು ತನಗಿಂತ ಕಡಿಮೆ ಎನ್ನುವ ದೃಷ್ಟಿಯಿಂದ ನೋಡುತ್ತಾನೆ. ಆಗ ಅವಳು ಗಂಡನ ವಿರುದ್ಧ ಸಿಡಿದೇಳುವ ಕಥೆ ಅದು. ಇಂಥ ಕಥೆ ಕೂಡ ಸಾಕಷ್ಟು ಯಶಸ್ವಿಯಾಗಿದೆ. ಜನರ ಮೆಚ್ಚುಗೆ ಪಡೆದಿದೆ.ನಮ್ಮ ಕುಟುಂಬದಲ್ಲೇ ತಾಯಿ, ಹೆಂಡತಿಯನ್ನು ಅವರ ನೆಲೆಯಲ್ಲೇ ನೋಡುವುದು ಆರಂಭವಾಗಬೇಕು. ಹಾಗಾದಾಗ, ಧಾರಾವಾಹಿಗಳಿಗೆ ಇಂಥ ಗೋಳಿನ ಕಥೆಗಳನ್ನು ಆರಿಸಿಕೊಳ್ಳುವುದು ತಪ್ಪುತ್ತದೆ.

- ಸತ್ಯಮೂರ್ತಿ ಆನಂದೂರು, ಚಲನಚಿತ್ರ, ಧಾರಾವಾಹಿಗಳ ಕಥಾ ಲೇಖಕ, ಸಂಭಾಷಣೆಕಾರಜನರು ಭಾವನಾತ್ಮಕ ಅಂಶಗಳಿರುವ ಧಾರಾವಾಹಿಗಳನ್ನು ನೋಡುತ್ತಾರೆ. ಹಾಗಾಗಿಯೇ ಧಾರಾವಾಹಿಗಳಲ್ಲಿ ಅದಕ್ಕೇ ಹೆಚ್ಚು ಪ್ರಾಧಾನ್ಯ.ಗಂಡು ಮತ್ತು ಹೆಣ್ಣಿನಲ್ಲಿ ಒಂದೇ ಬಗೆಯ ಮನಃಸ್ಥಿತಿ ಇರುತ್ತದೆ. ಇವರಲ್ಲಿ ಸಣ್ಣ ಮನಸ್ಸಿನವರೇ ಹೆಚ್ಚು. ವಿಶಾಲ ಮನಸ್ಸಿನವರು ಕಡಿಮೆ. ~ಕಿಚನ್ ಡ್ರಾಮಾ~ ಎಂದು ಧಾರಾವಾಹಿಗಳಲ್ಲಿ ನಾವು ಹೇಳುತ್ತೇವಲ್ಲ ಅಲ್ಲಿ ಹೆಂಗಸರ, ಅದರಲ್ಲೂ ಅತ್ತೆ- ಸೊಸೆಯರ ಸಮಸ್ಯೆಗಳೇ ಇರುತ್ತವೆ. ಜನ ನೋಡುತ್ತಾರೆ ಎಂದು ಅದನ್ನೇ ಮಾಡುತ್ತಾರೆ.ಅದರಲ್ಲೂ ಎಲ್ಲರಿಗೂ ಗೊತ್ತಿರುವಂತೆ, ಧಾರಾವಾಹಿಗಳನ್ನು ಹೆಚ್ಚಾಗಿ ನೋಡುವುದು ಮಹಿಳೆಯರು. ಇದರಲ್ಲಿ ಶೇ 90ರಷ್ಟು ಅವರ ಪಾಲಿದ್ದರೆ, ಶೇ 5 ರಷ್ಟು ನಿವೃತ್ತರು, ಇನ್ನುಳಿದ ಶೇ 5ರಷ್ಟು ಮಂದಿ ಇತರರು.ಕ್ರಾಂತಿಕಾರಿ ವ್ಯಕ್ತಿತ್ವದ ಮಹಿಳೆಯರ ಕತೆಗಳೂ ಧಾರಾವಾಹಿಯಾಗಿ ಬಂದವು. ಎಲ್ಲ ಧಾರಾವಾಹಿಗಳೂ ಬೋಲ್ಡ್ ಆಗಿ ಬರಲು ಸಾಧ್ಯವಿಲ್ಲ. ಇದು ಪೂರ್ತಿಯಾಗಿ ಮನರಂಜನೆಗೆ ಒತ್ತು ಇರುವ ಮಾಧ್ಯಮ. ನಮ್ಮ `ಕೃಷ್ಣ ರುಕ್ಮಿಣಿ~ ಧಾರಾವಾಹಿಯಲ್ಲಿ ಗಂಡ ಹೆಂಡತಿ ಹೇಗಿರಬೇಕು ಎಂಬುದನ್ನು ತೋರಿಸಿದ್ದೇವೆ.

- ರವಿ ಗರಣಿ, ಸಿನಿಮಾ, ಧಾರಾವಾಹಿ ನಿರ್ದೇಶಕಧಾರಾವಾಹಿಗಳಲ್ಲಿ ಹೆಣ್ಣು ಮಕ್ಕಳನ್ನು ಯಾಕೆ ಆ ರೀತಿ ತೋರಿಸುತ್ತಾರೆ ಎಂದರೆ ಜನ ಇಷ್ಟಪಡುವುದರಿಂದ, ಟಿಆರ್‌ಪಿಯ ಕಾರಣದಿಂದ. ಧಾರಾವಾಹಿ ಸಿನಿಮಾದಂತಲ್ಲ. ಮನೆ ಮಂದಿಯೆಲ್ಲ ಕೂತು ನೋಡುವುದರಿಂದ ತಮ್ಮದೇ ಜೀವನವನ್ನು ಜನ ಅದರಲ್ಲಿ ನಿರೀಕ್ಷೆ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಬೆಳೆಸುವ ಆದರ್ಶ, ಸಂಪ್ರದಾಯ, ಮನುಷ್ಯ ಸಂಬಂಧಗಳನ್ನು ತೋರಿಸುತ್ತಾರೆ. ಏಕೆಂದರೆ ಅವರ ಮನೆಯಲ್ಲಿ ಅವೆಲ್ಲ ಇಲ್ಲದಿದ್ದರೂ ಇದು ನಮ್ಮ ಮನೆ ಕಥೆ ಎನ್ನುವ ಮಟ್ಟಿಗೆ ಅವರ ನಿರೀಕ್ಷೆ ಇರುತ್ತದೆ.ನಮ್ಮಲ್ಲಿ ಸಶಕ್ತ ಬರಹಗಾರರು ಕಡಿಮೆ. ಹಿಂದಿ, ತೆಲುಗಿನಲ್ಲಿ ಜನಪ್ರಿಯವಾದ ಧಾರಾವಾಹಿಗಳನ್ನು ತಂದು ಇಲ್ಲಿ ರೀಮೇಕ್ ಮಾಡಲಾಗುತ್ತದೆ. ಏಕೆಂದರೆ ಶ್ರಮ ಕಡಿಮೆ, ಹಣ ಹೆಚ್ಚು ಬರುತ್ತದೆ ಎಂಬ ಕಾರಣಕ್ಕೆ. ಈ ರೀಮೇಕ್ ಕಥೆಗಳಿಂದಾಗಿ ಇಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದೆ. ಅಲ್ಲಿನ ಅದೇ ಹೆಂಗಸರು, ಹೆಣ್ಣು ಮಕ್ಕಳು ಇಲ್ಲೂ ಇರುತ್ತಾರೆ. ಅದೇ ವೇಷಭೂಷಣ, ಸಂಪ್ರದಾಯ ಕೂಡ ಇರುತ್ತದೆ.ಸಂಸಾರವನ್ನು ಒಡೆಯುವ, ಅಕ್ರಮ ಸಂಬಂಧದ, ಒಬ್ಬ ಗಂಡ, ಇಬ್ಬರು ಹೆಂಡತಿಯರು, ಇಬ್ಬರು ಗಂಡಂದಿರು ಒಬ್ಬಳು ಹೆಂಡತಿಯಂಥ ಕಥೆಗಳೇ ಇಲ್ಲಿ ಬರುತ್ತವೆ. ಈಗ ಧಾರಾವಾಹಿಗಳಲ್ಲಿ `ಮನೆಯೊಂದು ಮೂರು ಬಾಗಿಲು~ ಇರುತ್ತದೆ. ~ಒಂದೇ ಬಾಗಿಲು~ ಎನ್ನುವುದು ಹೋಗಿದೆ. ಕ್ರಿಯಾಶೀಲ ಬರಹಗಾರರು ಈ ರಂಗದಲ್ಲಿ ಕಾಣಿಸಿಕೊಳ್ಳದಿದ್ದಾಗ, ನಿರ್ದೇಶಕರು, ನಿರ್ಮಾಪಕರು ಜವಾಬ್ದಾರಿಯಿಂದ ಯೋಚಿಸದೇ ರೀಮೇಕ್‌ಗಷ್ಟೇ ಸೀಮಿತರಾದರೆ ಹೆಣ್ಣು ಮಕ್ಕಳನ್ನು ಅದೇ ಹಳೆಯ ರೀತಿಯಲ್ಲಿ ತೋರಿಸುವುದು ನಡೆದೇ ಇರುತ್ತದೆ.

- ಹೂಲಿ ಶೇಖರ, ನಾಟಕಕಾರ, ಧಾರಾವಾಹಿ ಕಥಾ ಲೇಖಕ, ಸಂಭಾಷಣೆಕಾರಇಂದು ಸಾಂಪ್ರದಾಯಿಕ ಎರಕದಲ್ಲಿ ಧಾರಾವಾಹಿಗಳನ್ನು ತೋರಿಸುತ್ತಾರೆ. ನಾನು, ಟಿ.ಎನ್. ಸೀತಾರಾಂ ಅಂತಹವರು ನಿರ್ದೇಶಿಸುವ ಕೆಲವು ಧಾರಾವಾಹಿಗಳಲ್ಲಿ ಮಹಿಳೆಯರನ್ನು ಈ ಬಗೆಯ ಸಾಂಪ್ರದಾಯಿಕತೆಯಲ್ಲಿ ತೋರಿಸುವುದಿಲ್ಲ. ನಾವು ಮಹಿಳೆಯರ ಹೋರಾಟವನ್ನು ಚಿತ್ರಿಸಿದ್ದೇವೆ.ಇವೆಲ್ಲ ಬಾಲಾಜಿ ಟೆಲಿಫಿಲಮ್ಸನ ಧಾರಾವಾಹಿಗಳಿಂದ ರೂಪುಗೊಂಡ ಕಥೆಗಳು. ಉತ್ತರದ ಗುಜರಾತಿ, ಸಿಂಧಿ ಗುಣಗಳನ್ನು ನಮ್ಮ ಕನ್ನಡದ ಧಾರಾವಾಹಿಗಳಿಗೆ ಆರೋಪಿಸಲಾಗಿರುತ್ತದೆ.

 

ಇಲ್ಲಿ ನಮ್ಮ ಪ್ರಾದೇಶಿಕತೆ ಕಂಡುಬರುವುದಿಲ್ಲ. ನಾವು ವೈಶಾಲಿ ಕಾಸರವಳ್ಳಿಯವರು ಮಾಡಿದ ರೀತಿಯ ಪ್ರಾದೇಶಿಕ ಗುಣದ ಧಾರಾವಾಹಿಗಳನ್ನು ಮಾಡಿದರೆ ನೋಡುವ ಜನರು ಇಲ್ಲ ಎಂದಲ್ಲ, ಅವರ ಸಂಖ್ಯೆ ಕಡಿಮೆ. ಆದ್ದರಿಂದ ಅದೇ ಗುಜರಾತಿ, ಸಿಂಧಿ ಕಥೆಗಳ, ಸಂಸ್ಕೃತಿಯ ಎರಕದಲ್ಲಿ ನಮ್ಮ ಧಾರಾವಾಹಿಗಳೂ ಬರುತ್ತಿವೆ. ಇದು ಯಶಸ್ಸಿನ ಅನುಕರಣೆ ಹಾಗೂ ಹಿಂಬಾಲಿಸುವಿಕೆಯಾಗಿದೆ. ಇದು ಸಾಂಸ್ಕೃತಿಕವಾಗಿ ನಕಲು ಮಾಡುವ  ದೊಡ್ಡ ಅಪಾಯ.ಹೆಣ್ಣು ಮಕ್ಕಳನ್ನು ಈ ರೀತಿ ತೋರಿಸುವುದಕ್ಕೂ ಟಿಆರ್‌ಪಿಗೂ ನೇರ ಸಂಬಂಧ ಇದೆ. ಮುಖಾಲಂಕಾರ ಮಾಡಿಕೊಳ್ಳುವ ವಸ್ತುಗಳನ್ನು ಮಾರುವ ಕಾಸ್ಮೆಟಿಕ್ ಕೈಗಾರಿಕೆ ಇದರ ಹಿಂದಿದೆ.

 

ಈ ಗುಜರಾತಿ ಸಂಪ್ರದಾಯದ ಧಾರಾವಾಹಿಗಳನ್ನೇ ನೋಡಿ. ಅಲ್ಲಿನ ಮಹಿಳೆಯರು ಮಾಡಿಕೊಳ್ಳುವ ಅಲಂಕಾರ ಕಾಸ್ಮೆಟಿಕ್ ವಸ್ತುಗಳನ್ನು ಕೊಳ್ಳಲು ಹೆಣ್ಣು ಮಕ್ಕಳನ್ನು ಪ್ರಚೋದಿಸುವಂತಿರುತ್ತದೆ. ಮಾರುಕಟ್ಟೆ ನಮ್ಮನ್ನು ನಿರ್ದೇಶಿಸಬಾರದು, ಅದನ್ನೇ ನಾವು ನಿರ್ದೇಶಿಸಬೇಕು. ನಮ್ಮಲ್ಲಿ ಮೊದಲಿನದು ಆಗುತ್ತಿದೆ. ಹಾಗಾಗಿ ಮಹಿಳೆಯರನ್ನು ಈ ರೀತಿ ತೋರಿಸುವ ಧಾರಾವಾಹಿಗಳು ಬರುತ್ತಲೇ ಇರುತ್ತವೆ.

- ಬಿ. ಸುರೇಶ್, ನಾಟಕಕಾರ, ಸಿನಿಮಾ, ಧಾರಾವಾಹಿಗಳ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.