ಗುರುವಾರ , ಏಪ್ರಿಲ್ 15, 2021
22 °C

ಇಷ್ಟಲಿಂಗಯೋಗದಿಂದ ದುಃಖ ದೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಶಿವಯೋಗ ಅಥವಾ ಇಷ್ಟಲಿಂಗಯೋಗದಿಂದ ಮಾತ್ರ ಜೀವನದಲ್ಲಿ ದುಃಖ ದೂರವಾಗುತ್ತದೆ ಎಂದು ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ಅಭಿಪ್ರಾಯಪಟ್ಟರು.

ಮಹಾಶಿವರಾತ್ರಿಯ ನಿಮಿತ್ತ ನಗರದ ಶರಣ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ಇಷ್ಟಲಿಂಗಯೋಗ ಹಾಗೂ ಸರ್ವ ಶರಣರ ಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶಿವ ಎಂದರೆ ಮಂಗಲ, ಬೆಳಕು, ಕಲ್ಯಾಣ, ಏಳ್ಗೆ ಎಂದಾಗುತ್ತದೆ. ರಾತ್ರಿ ಎಂದರೆ ಕತ್ತಲು, ದುಃಖ ಎಂದರ್ಥ. ಜೀವನದಲ್ಲಿ ಬೆಳಕು ಮತ್ತು ಕತ್ತಲೆ ಅಂದರೆ ಸುಖ ಮತ್ತು ದುಃಖಗಳು ಹಾಸು ಹೊಕ್ಕಾಗಿವೆ. ಅನಾವಶ್ಯಕ ಚಿಂತೆ, ತಪ್ಪು ತಿಳಿವಳಿಕೆಯಿಂದಾಗಿ ದುಃಖ ಆವರಿಸುತ್ತದೆ ಎಂದು ಹೇಳಿದರು.ದುಃಖ ದೂರವಾಗಬೇಕಾದರೆ ಮೊದಲು ಅಜ್ಞಾನ- ಚಿಂತೆಗಳನ್ನು ಕಳೆದುಕೊಳ್ಳಬೇಕು. ಇವುಗಳನ್ನು ಕಳೆದುಕೊಳ್ಳುವ ಶ್ರೇಷ್ಠ ಮಾರ್ಗವೇ ಶಿವಯೋಗ ಅಥವಾ ಇಷ್ಟಲಿಂಗಯೋಗ ಎಂದು ತಿಳಿಸಿದರು.ಕೇವಲ ಶಿವರಾತ್ರಿಯ ಒಂದೇ ದಿನ ಪೂಜೆ, ಭಕ್ತಿ ಮೆರೆದರೆ ಸಾಲದು. ಶರಣರ ಪ್ರಕಾರ ನಿತ್ಯವೂ ಶಿವರಾತ್ರಿ ಆಗಬೇಕು. ಅದಕ್ಕಾಗಿ ಈಗಿನಿಂದಲೇ ಪೂಜೆಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಬಸವಣ್ಣನವರು ಕೊಟ್ಟ ಇಷ್ಟಲಿಂಗ ಸಾಧನೆ ಸುಲಭ ಸಾಧ್ಯವಾದ ಆಧ್ಯಾತ್ಮಿಕ ಪಥ. ಇದರಿಂದ ಸಮಯ, ಶ್ರಮ, ಬಳಲಿಕೆ ಎಲ್ಲವೂ ಉಳಿತಾಯವಾಗುತ್ತದೆ ಎಂದು ತಿಳಿಸಿದರು.ಅಕ್ಕ ಅನ್ನಪೂರ್ಣ ಹಾಗೂ ಡಾ. ಗಂಗಾಂಬಿಕೆ ಅಕ್ಕ ಅವರ ಮಾರ್ಗದರ್ಶನದಲ್ಲಿ ನೂರಾರು ಜನ ಸಾಮೂಹಿಕ ಇಷ್ಟಲಿಂಗಯೋಗದಲ್ಲಿ ಪಾಲ್ಗೊಂಡರು. ಕೆನಡಾದ ವಿಜಯ ಐಹೊಳೆ, ಪ್ರಮುಖರಾದ ಸಿದ್ಧಯ್ಯ ಕಾವಡಿ, ಕಾಶಪ್ಪ ಧನ್ನೂರ, ರಮೇಶ ಮಠಪತಿ ಉಪಸ್ಥಿತರಿದ್ದರು. ಅಶೋಕ ಎಲಿ ಅಧ್ಯಕ್ಷತೆ ವಹಿಸಿದ್ದರು.ಇಷ್ಟಲಿಂಗಯೋಗದ ನಂತರ ವಿಶ್ವನಾಥ ಮೋಳಕೇರಿ, ಪ್ರಕಾಶ ಮಾಳಗೆ, ಮಲ್ಲಿಕಾರ್ಜುನ ಜೊನ್ನಿಕೇರಿ, ಗುಂಡಪ್ಪ ಜೊನ್ನಿಕೇರಿ, ಅಶೋಕ ಶೆಳ್ಳಗಿ, ಮುರಳಿಧರ ನಾಶಿ, ಚಂದ್ರಶೇಖರ ಹೆಬ್ಬಾಳೆ ಅವರ ನೇತೃತ್ವದಲ್ಲಿ ವಚನ ಭಜನೆ ನಡೆಯಿತು. ಗೀತಾ ಪಾಟೀಲ್ ಅವರ ವಚನ ಗಾಯನ ಎಲ್ಲರ ಮನಸೂರೆಗೊಳಿಸಿತು.  ಮಾಣಿಕಪ್ಪ ಗೋರನಾಳೆ ಸ್ವಾಗತಿಸಿದರು. ಪ್ರಕಾಶ ಮಠಪತಿ ನಿರೂಪಿಸಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.