ಸೋಮವಾರ, ಮೇ 17, 2021
23 °C

ಈಗ ಕರಪತ್ರ, ಫ್ಲೆಕ್ಸ್ ಬೋರ್ಡ್ ಹಾವಳಿ

ಕೆ.ಎಚ್. ಓಬಳೇಶ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಗರಸಭೆಗೆ ಸೇರಿದ ಜಾಗದಲ್ಲಿ ಈಗ ಫ್ಲೆಕ್ಸ್ ಬೋರ್ಡ್, ಕರಪತ್ರ ಅಂಟಿಸುವ ಪರಿಪಾಠ ಉಲ್ಬಣಿಸಿದ್ದು, ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.ಯಾವುದೇ, ವ್ಯಕ್ತಿ, ಸಂಘ-ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆಗೆ ಸೇರಿದ ಸ್ಥಳದಲ್ಲಿ ಬೇಕಾಬಿಟ್ಟಿ ಯಾಗಿ ಕರಪತ್ರ ಅಂಟಿಸುವಂತಿಲ್ಲ. ಶುಭಾಶಯ ಕೋರುವ ಜಾಹೀರಾತು ಫಲಕ ಅಳವಡಿಸುವಂತಿಲ್ಲ. ನಗರಸಭೆ ನಿಗದಿಪಡಿಸಿದ ಶುಲ್ಕ ಪಾವತಿಸಿ ಅನುಮತಿ ಪಡೆದ ನಂತರವೇ ಫಲಕ ಅಳವಡಿಸಬೇಕು. ಆದರೆ, ಅಂಥ ನಿಯಮಗಳೇ ನಗರದ ವಾಪ್ತಿ ಪಾಲನೆಯಾಗುತ್ತಿಲ್ಲ.ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬರು ಯಾವುದಾದರು ಘಟಕಕ್ಕೆ ಆಯ್ಕೆಯಾದರೆ ಅವರ ಭಾವಚಿತ್ರಸಹಿತ ಶುಭ ಕೋರುವ ಫ್ಲೆಕ್ಸ್ ಬೋರ್ಡ್‌ಗಳು ರಸ್ತೆಬದಿಯಲ್ಲಿ ರಾರಾಜಿಸುತ್ತವೆ. ಇದರಿಂದ ನಾಗರಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೋಡಿರಸ್ತೆಯಲ್ಲಿ ಅಳವಡಿಸುತ್ತಿರುವ ಫ್ಲೆಕ್ಸ್ ಬೋರ್ಡ್‌ಗಳು ಇದಕ್ಕೆ ನೈಜ ಉದಾಹರಣೆ.ಪಚ್ಚಪ್ಪ ವೃತ್ತದಿಂದ ರಾಮಸಮುದ್ರದವರೆಗೆ ಜೋಡಿರಸ್ತೆಯ ಮಧ್ಯದಲ್ಲಿ ಗುತ್ತಿಗೆ ಮೇಲೆ ಜಾಹೀರಾತು ಹಾಕಲು ನಗರಸಭೆಯಿಂದ ಜಾಹೀರಾತು ಫಲಕ ನೆಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಕಂಪೆನಿ, ಅಂಗಡಿಗಳ ಜಾಹೀರಾತು ಪ್ರಕಟಗೊಂಡಿಲ್ಲ. ಜಾಹೀರಾತು ಬಂದರೆ ನಗರಸಭೆಗೆ ಆದಾಯ ಬರಲಿದೆ.ಆದರೆ, ಈ ಫಲಕಗಳಿಗೆ ಕೆಲವು ಮಂದಿ ತಮ್ಮ ವೈಯಕ್ತಿಕ ಪ್ರಚಾರದ ಫ್ಲೆಕ್ಸ್ ಬೋರ್ಡ್ ಕಟ್ಟುವ ಧೈರ್ಯ ಮಾಡಿರುವುದು ಉಂಟು. ಜೋಡಿರಸ್ತೆಯಲ್ಲಿ ಇಂಥ ಶುಭ ಕೋರುವ ಪುಕ್ಕಟೆ ಪ್ರಚಾರ ಫಲಕಗಳು ರಾರಾಜಿಸುತ್ತಿವೆ. ಆದರೆ, ಈ ಬಗ್ಗೆ ನಗರಸಭೆಯಿಂದ ಯಾವುದೇ ಕ್ರಮಕೈಗೊಂಡಿಲ್ಲ.ರಸ್ತೆಯ ಎರಡು ಬದಿಗೂ ತಾಗುವಂತೆಯೇ ಫ್ಲೆಕ್ಸ್ ಬೋರ್ಡ್ ಅಳವಡಿಸುತ್ತಿರುವುದರಿಂದ ಸುಗಮ ವಾಹನ ಸಂಚಾರಕ್ಕೂ ಕಷ್ಟವಾಗಿದೆ. ಫ್ಲೆಕ್ಸ್ ಬೋರ್ಡ್‌ಗೆ ಬಳಸುವ ಕಟ್ಟಿಗೆ, ಮೊಳೆ ಇತ್ಯಾದಿಗಳಿಂದ ಸವಾರರು ತೊಂದರೆ ಅನುಭವಿಸುವಂತಾಗಿದೆ. ಸ್ವಲ್ಪ ಎಚ್ಚರತಪ್ಪಿದರೂ ಈ ಬೋರ್ಡ್‌ಗಳಿಗೆ ವಾಹನಗಳು ಡಿಕ್ಕಿ ಹೊಡೆದು ಅವಘಡ ಸಂಭವಿಸುವುದು ಕಟ್ಟಿಟ್ಟಬುತ್ತಿ.ಜತೆಗೆ, ನಗರದ ವಿವಿಧ ಬಡಾವಣೆಯಲ್ಲಿ ರಸ್ತೆಯ ಅಂಚಿನಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳಿಗೆ ಕರಪತ್ರ ಅಂಟಿಸುವ ಪ್ರವೃತ್ತಿ ಮುಂದುವರಿದಿದೆ. ಇದರ ಪರಿಣಾಮ ಪರ ಊರುಗಳಿಂದ ಬರುವ ನಾಗರಿಕರು ಬಡಾವಣೆಯ ವಿಳಾಸ ಹುಡುಕಲು ಪರದಾಡುವಂತಾಗಿದೆ.ಬಡಾವಣೆಯ ಮಾರ್ಗಸೂಚಿ ಫಲಕಗಳಿಗೆ ಶಾಲಾ-ಕಾಲೇಜಿನ ಪ್ರವೇಶಾತಿಯ ಕರಪತ್ರ, ಸಿನಿಮಾ, ಖಾಸಗಿ ವೈದ್ಯಕೀಯ ಸೇವೆ ಇತ್ಯಾದಿ ಕರಪತ್ರ ಅಂಟಿಸುತ್ತಿರುವ ಪರಿಣಾಮ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.ಸರ್ಕಾರಿ ಕಟ್ಟಡದ ಗೋಡೆಗಳಿಗೂ ಸಿನಿಮಾ, ಸಮಾವೇಶದ ಕರಪತ್ರ ಅಂಟಿಸುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಈ ಬಗ್ಗೆ ನಗರಸಭೆ ಆಡಳಿತ ದಿಟ್ಟಕ್ರಮ ಕೈಗೊಂಡು ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂಬುದು ನಾಗರಿಕರ ದೂರು.`ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್ ಬೋರ್ಡ್‌ಗಳಿಂದ ಫುಟ್‌ಪಾತ್‌ನಲ್ಲಿ ಸಂಚರಿಸುವುದು ಕೂಡ ಕಷ್ಟಕರವಾಗಿದೆ. ಪಚ್ಚಪ್ಪ ವೃತ್ತ ಇದಕ್ಕೊಂದು ನಿದರ್ಶನ. ರಾಜಕೀಯ ಸಮಾವೇಶ ಇತ್ಯಾದಿ ನಡೆದರೆ ಸಾರ್ವಜನಿಕ ಸ್ಥಳದಲ್ಲೂ ನಿಯಮ ಬಾಹಿರವಾಗಿ ಫ್ಲೆಕ್ಸ್ ಬೋರ್ಡ್ ಅಳವಡಿಸುವುದು ಹೆಚ್ಚುತ್ತಿದೆ. ಇದರಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ.ವಾಹನ ಸವಾರರು    ಫ್ಲೆಕ್ಸ್ ಬೋರ್ಡ್ ನೋಡುವ ಆತುರದಲ್ಲಿ ಎಚ್ಚರ ತಪ್ಪಿದರೆ ಅಪಘಾತಕ್ಕೀಡಾಗುತ್ತಾರೆ. ನಗರಸಭೆ ಮಾತ್ರ ಅನಧಿಕೃತ ಫ್ಲೆಕ್ಸ್ ಬೋರ್ಡ್ ಹಾವಳಿ ತಡೆಗೆ ದಿವ್ಯಮೌನ ತಳೆದಿದೆ. ಕೂಡಲೇ, ತೆರವಿಗೆ ಮುಂದಾಗಬೇಕು~ ಎಂದು ಒತ್ತಾಯಿಸುತ್ತಾರೆ ಹಿರಿಯ ನಾಗರಿಕ ಮಹದೇವ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.