ಸೋಮವಾರ, ಏಪ್ರಿಲ್ 19, 2021
25 °C

ಈಜು ನಿಲ್ಲಿಸಿದ ಚಿನ್ನದ ಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜು ನಿಲ್ಲಿಸಿದ ಚಿನ್ನದ ಮೀನು

ಲಂಡನ್: `ಬಾಲ್ಟಿಮೋರ್ ಬುಲೆಟ್~, `ಫ್ಲೈಯಿಂಗ್ ಫಿಶ್~ ಖ್ಯಾತಿಯ ಈಜು ತಾರೆ ಅಮೆರಿಕದ ಮೈಕಲ್ ಫೆಲ್ಪ್ಸ್ ವೃತ್ತಿಪರ ಸ್ಪರ್ಧೆಯಿಂದ ದೂರವಾಗಿದ್ದಾರೆ. ಇದರೊಂದಿಗೆ ಕಳೆದ ಒಂದು ದಶಕಕ್ಕೂ ಅಧಿಕ ಕಾಲ ಈಜುಕೊಳದಲ್ಲಿ ಮಿರಮಿರನೆ ಮಿಂಚಿದ ನಕ್ಷತ್ರವೊಂದು ತೆರೆಮರೆಗೆ ಸರಿದಂತಾಗಿದೆ.

ಲಂಡನ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗುವುದಾಗಿ ಫೆಲ್ಪ್ಸ್ ಈ ಮೊದಲೇ ಪ್ರಕಟಿಸಿದ್ದರು. ಈ ಕಾರಣ ಒಲಿಂಪಿಕ್ ಅರೆನಾದಲ್ಲಿ ಶನಿವಾರ ನಡೆದ ಪುರುಷರ 4ಷ100 ಮೀ. ಮೆಡ್ಲೆ ರಿಲೇ ಅವರ ಕೊನೆಯ ಸ್ಪರ್ಧೆಯಾಗಿತ್ತು. ಇದರಲ್ಲಿ ಅಗ್ರಸ್ಥಾನ ಪಡೆದ ಅಮೆರಿಕದ ತಂಡ ಫೆಲ್ಪ್ಸ್‌ಗೆ `ಚಿನ್ನದ ಉಡುಗೊರೆ~ ನೀಡಿತು.

ವೃತ್ತಿಜೀವನದ ಕೊನೆಯ ಸ್ಪರ್ಧೆಯಲ್ಲೂ ಚಿನ್ನ ಗೆದ್ದದ್ದು ಫೆಲ್ಪ್ಸ್ ಅವರ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿದೆ. ಮುಂದಿನ ವಿಶ್ವಚಾಂಪಿಯನ್‌ಷಿಪ್ ಅಥವಾ 2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್ ಕೂಟದ ಈಜುಕೊಳದಲ್ಲಿ ಫೆಲ್ಪ್ಸ್ ಎಂಬ `ಚಿನ್ನದ ಮೀನ~ನ್ನು ಅಭಿಮಾನಿಗಳಿಗೆ ಕಾಣಲು ಸಾಧ್ಯವಿಲ್ಲ.
ಒಲಿಂಪಿಕ್ಸ್‌ನಲ್ಲಿ ಅತ್ಯಧಿಕ ಪದಕ ಗೆದ್ದ ಸ್ಪರ್ಧಿ (22)

ಅತಿ ಹೆಚ್ಚು ಚಿನ್ನದ ಪದಕ (18)

ವೈಯಕ್ತಿಕ ವಿಭಾಗದಲ್ಲಿ ಗರಿಷ್ಠ ಚಿನ್ನ (11)

ವೈಯಕ್ತಿಕ ವಿಭಾಗದಲ್ಲಿ ಅತಿ ಹೆಚ್ಚು ಪದಕ ಗೆದ್ದುಕೊಂಡ ಪುರುಷ ಸ್ಪರ್ಧಿ (13)

ಒಟ್ಟು 39 ಬಾರಿ (29 ವೈಯಕ್ತಿಕ; 10 ರಿಲೇ) ವಿಶ್ವದಾಖಲೆ ಮುರಿದ ಶ್ರೇಯ

ಒಂದೇ ಒಲಿಂಪಿಕ್ ಕೂಟದಲ್ಲಿ ಅತ್ಯಧಿಕ ಚಿನ್ನದ ಪದಕ (ಬೀಜಿಂಗ್ ಕೂಟದಲ್ಲಿ 8)

ಆರು ಸಲ `ವರ್ಷದ ಶ್ರೇಷ್ಠ ಈಜುಗಾರ~ ಪ್ರಶಸ್ತಿ; ಎಂಟು ಸಲ `ಅಮೆರಿಕದ ವರ್ಷದ ಶ್ರೇಷ್ಠ ಈಜು ಸ್ಪರ್ಧಿ~ ಪ್ರಶಸ್ತಿ

ಪ್ರಮುಖ ಅಂತರರಾಷ್ಟ್ರೀಯ ಕೂಟಗಳಲ್ಲಿ ಒಟ್ಟು 71 ಪದಕ (57 ಚಿನ್ನ, 11 ಬೆಳ್ಳಿ, 3 ಕಂಚು)

ಅಮೆರಿಕ ಗೆಲುವು ಪಡೆಯುತ್ತಿದ್ದಂತೆಯೇ ತಂಡದ ಇತರ ಸದಸ್ಯರಾದ ಮ್ಯಾಟ್ ಗ್ರಿವರ್ಸ್, ಬ್ರೆಂಡನ್ ಹ್ಯಾನ್ಸೆನ್ ಮತ್ತು ನಥಾನ್ ಅಡ್ರಿಯಾನ್ ಅವರು ಫೆಲ್ಪ್ಸ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.  `ಥ್ಯಾಂಕ್ ಯು ಲಂಡನ್~ ಎಂದು ಬರೆದಿದ್ದ ಬ್ಯಾನರ್‌ನ್ನು ನಾಲ್ಕು ಮಂದಿಯೂ ಪ್ರದರ್ಶಿಸಿದರು. ಅದಕ್ಕೆ ಅಭಿಮಾನಿಗಳು `ವಿ ಮಿಸ್ ಯು~ ಎಂಬ ಬ್ಯಾನರ್ ಮೂಲಕ ಪ್ರತಿಕ್ರಿಯಿಸಿದರು.

ತಮ್ಮ ಪುತ್ರನ ಕೊನೆಯ ಸ್ಪರ್ಧೆಯನ್ನು ವೀಕ್ಷಿಸಲು ಗ್ಯಾಲರಿಯಲ್ಲಿ ತಾಯಿ ಡೆಬೀ ಫೆಲ್ಪ್ಸ್ ಹಾಗೂ ಕುಟುಂಬದ ಇತರ ಸದಸ್ಯರು ಇದ್ದರು. ವಿಜಯವೇದಿಕೆಯಲ್ಲಿ ಫೆಲ್ಪ್ಸ್  ಕಣ್ಣೀರು ಸುರಿಸಿದರು. ಇದೇ ಕೊನೆಯ ಅವಕಾಶ ಎಂಬ ಭಾವನೆ ಫೆಲ್ಪ್ಸ್ ಮನದಲ್ಲಿ ಮೂಡಿರಬಹುದು.

2000 ದಲ್ಲಿ ನಡೆದಿದ್ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭ ಫೆಲ್ಪ್ಸ್ 15 ವರ್ಷದ ಹುಡುಗ. ಚೊಚ್ಚಲ ಕೂಟದಲ್ಲಿ ಅವರಿಗೆ ಪದಕ ಲಭಿಸಿರಲಿಲ್ಲ. ಇದೀಗ 27ರ ಹರೆಯದಲ್ಲಿ ಸ್ಪರ್ಧಾತ್ಮಕ ಈಜುವಿಗೆ ನಿವೃತ್ತಿ ಹೇಳಿದ್ದಾರೆ. ಈ ಅವಧಿಯಲ್ಲಿ ಮಾಡಿದ ಸಾಧನೆ, ಗೆದ್ದ ಪದಕ, ಮುರಿದ ವಿಶ್ವದಾಖಲೆಗಳು ಹಲವು. ಭವಿಷ್ಯದ ಈಜು ಸ್ಪರ್ಧಿಗಳಿಗೆ ಉತ್ತೇಜನ ಹಾಗೂ ಭಾರಿ ಸವಾಲಾಗುವಂತಹ ಸಾಧನೆಗಳನ್ನು ಮಾಡಿ   ಫೆಲ್ಪ್ಸ್ ಈಜುಕೊಳದಿಂದ ಮೇಲೇರಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಒಟ್ಟು 22 ಪದಕಗಳನ್ನು ಗೆದ್ದ ಸಾಧನೆಯಂತೂ ಅಮೋಘ. ಇದರಲ್ಲಿ 18 ಚಿನ್ನ ಒಳಗೊಂಡಿವೆ. ಬೀಜಿಂಗ್‌ನಲ್ಲಿ ಎಂಟು ಚಿನ್ನ ಜಯಿಸಿ ಐತಿಹಾಸಿಕ ಶ್ರೇಯಕ್ಕೆ ಭಾಜನರಾಗಿದ್ದರು. ಫೆಲ್ಪ್ಸ್ ಇಷ್ಟು ಸುದೀರ್ಘ ಅವಧಿಯವರೆಗೆ ಫಿಟ್‌ನೆಸ್ ಕಾಪಾಡಿಕೊಂಡದ್ದು ಮೆಚ್ಚುವಂತಹ ಅಂಶ.

ಫೆಲ್ಪ್ಸ್ ಲಂಡನ್ ಕೂಟದ ತಮ್ಮ ಮೊದಲ ಸ್ಪರ್ಧೆಯಲ್ಲಿ (400 ಮೀ. ವೈಯಕ್ತಿಕ ಮೆಡ್ಲೆ) ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು. ಆ ಬಳಿಕ ಎಂದಿನ ಫಾರ್ಮ್ ಕಂಡುಕೊಂಡು ಒಟ್ಟು ನಾಲ್ಕು ಚಿನ್ನ ಹಾಗೂ ಎರಡು ಕಂಚು ಗೆದ್ದುಕೊಳ್ಳಲು ಯಶಸ್ವಿಯಾದರು.

`ಫಿನಾ~ದಿಂದ ಗೌರವ: ನಿವೃತ್ತಿ ಪ್ರಕಟಿಸಿದ ಫೆಲ್ಪ್ಸ್ ಅವರನ್ನು ಅಂತರರಾಷ್ಟ್ರೀಯ ಈಜು ಫೆಡರನೇಷನ್ (ಫಿನಾ) ಶನಿವಾರ ಗೌರವಿಸಿತು. ಫೆಡರೇಷನ್‌ನ ಅಧ್ಯಕ್ಷ ಜೂಲಿಯೊ ಮ್ಯಾಗ್ಲಿಯೊನಿ ಟ್ರೋಫಿಯನ್ನು ನೀಡಿದರು. ಅದರಲ್ಲಿ `ಫೆಲ್ಪ್ಸ್ ಸಾರ್ವಕಾಲೀಕ ಶ್ರೇಷ್ಠ ಒಲಿಂಪಿಕ್ ಅಥ್ಲೀಟ್~ ಎಂದು ಬರೆಯಲಾಗಿತ್ತು.

`ಬಯಸಿದ್ದೆಲ್ಲವನ್ನೂ ಮಾಡಿ ತೋರಿಸಿದೆ~

ಲಂಡನ್ (ರಾಯಿಟರ್ಸ್): `ಏನು ಮಾಡಬೇಕೆಂದು ಬಯಸಿದ್ದೇನೋ, ಅವೆಲ್ಲವನ್ನೂ ಮಾಡಿ ತೋರಿಸಿದ್ದೇನೆ. ನನ್ನ ಮನಸ್ಸಿನಲ್ಲಿ ಹಲವು ಗುರಿಗಳಿದ್ದವು. ಎಲ್ಲವೂ ಈಡೇರಿವೆ. ಕೋಚ್ (ಬಾಬ್ ಬೌಮನ್) ಅವರ ನೆರವಿನಿಂದ ಇದನ್ನೆಲ್ಲ ಮಾಡಲು ಸಾಧ್ಯವಾಗಿದೆ~

ಕಳೆದ ಕೆಲ ವರ್ಷಗಳಿಂದ ಈಜುಕೊಳದ ರಾಜನಾಗಿ ಮೆರೆದ ಫೆಲ್ಪ್ಸ್ ಲಂಡನ್ ಒಲಿಂಪಿಕ್ಸ್‌ನಲ್ಲಿ ತಮ್ಮ ಕೊನೆಯ ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ್ದು ಹೀಗೆ. `ಅತ್ಯುತ್ತಮ ಫಾರ್ಮ್‌ನಲ್ಲಿದ್ದರೂ ಏಕೆ ನಿವೃತ್ತಿಯಾಗುವಿರಿ?~ ಎಂಬ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು.

`30 ವರ್ಷ ವಯಸ್ಸಿನ ಬಳಿಕ ಈಜುವುದಿಲ್ಲ ಎಂದು ನನ್ನಲ್ಲೇ ಹೇಳಿಕೊಂಡಿದ್ದೆ. ಅದಕ್ಕಾಗಿ ಇನ್ನೂ ಮೂರು ವರ್ಷಗಳಿವೆ. ಆದರೂ ನನಗೆ ಮೂರು ವರ್ಷಗಳ ಕಾಲ ಕಾಯಲು ಸಾಧ್ಯವಿಲ್ಲ~ ಎಂದರು. 

`ಅಂತಿಮ ಪದಕ ಪಡೆಯಲು ವಿಜಯ ವೇದಿಕೆಗೆ ಏರಿದಾಗ ಕಣ್ಣುಗಳು ತೇವಗೊಂಡವು. ಕಣ್ಣೀರನ್ನು ತಡೆಯಲು ಪ್ರಯತ್ನಿಸಿದೆ. ಬಳಿಕ ಆ ಪ್ರಯತ್ನ ಕೈಬಿಟ್ಟೆ. ವೃತ್ತಿಜೀವನದ ಕೊನೆಯ ಕೆಲವು ದಿನಗಳನ್ನು ಎಂದೆಂದಿಗೂ ಮರೆಯಲಾರೆ~ ಎಂದರು.

`ವಿಶ್ವದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳುವುದು ಮುಂದಿನ ಗುರಿ. ಏಕೆಂದರೆ ಈಗಾಗಲೇ ವಿಶ್ವದ ಹಲವು ಕಡೆಗಳಿಗೆ ಪ್ರಯಾಣಿಸಿದ್ದೇನೆ. ಆದರೆ ಆ ಪ್ರವಾಸವನ್ನು ಅನುಭವಿಸಿಲ್ಲ~ ಎನ್ನುತ್ತಾ ನಗು ಬೀರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.