ಮಂಗಳವಾರ, ಏಪ್ರಿಲ್ 13, 2021
30 °C

ಈಡೇರದ ರೈಲ್ವೆ ಫ್ಲೈ ಓವರ್ ಭರವಸೆ

ಪ್ರಜಾವಾಣಿ ವಾರ್ತೆ/ ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದ ವಿವಿಧೆಡೆ ರೈಲುಗಳ ಆಗಮನದ ಸಂದರ್ಭ ಲೇವೆಲ್ ಕ್ರಾಸಿಂಗ್‌ಗಳಲ್ಲಿನ ಮಾವನಸಹಿತ ಗೇಟ್‌ಗಳನ್ನು ಮುಚ್ಚುವುದರಿಂದ, ಕಾಯುವ ಅನಿವಾರ್ಯತೆಗೆ ಒಳಗಾಗಿರುವ ವಾಹನ ಸವಾರರ ಸಮಯದ ಉಳಿತಾಯ ಮತ್ತು ಪ್ರಾಣದ ಹಂಗು ತೊರೆದು ಗೇಟ್‌ಗಳ ಕೆಳಗಿಂದ ನುಸುಳುವ `ತಾಳ್ಮೆರಹಿತರ~ ಸುರಕ್ಷತೆಗಾಗಿ ಕೆಳಸೇತುವೆ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ನೀಡಿರುವ ಭರವಸೆ ಈಡೇರದೆ ಉಳಿದಿದೆ.ನಗರದ ಸುಧಾ ವೃತ್ತ, ಕೌಲ್‌ಬಝಾರ್‌ನ ಮೊದಲ ಗೇಟ್, ರೇಡಿಯೋ ಪಾರ್ಕ್ ಗೇಟ್ ಹಾಗೂ ಸತ್ಯನಾರಾಯಣ ಪೇಟೆಯಲ್ಲಿರುವ ರೇಲ್ವೆ ಲೆವೆಲ್ ಕ್ರಾಸಿಂಗ್‌ಗಳ ಪೈಕಿ ಸತ್ಯನಾರಾಯಣ ಪೇಟೆಯಲ್ಲಿ ಮಾತ್ರ ಕೆಳ ಸೇತುವೆ ನಿರ್ಮಾಣವಾಗಿದೆ.ಆ ರೇಲ್ವೆ ಕೆಳಸೇತುವೆಯ ಅಡಿಯಲ್ಲಿ ಮಳೆ ಸುರಿದ ಸಂದರ್ಭ ನೀರು ನಿಂತು, ಆ ಮೂಲಕ ಸಂಚರಿಸುವ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಭಾರಿ ಮಳೆ ಸುರಿದಾಗ ಕೆಳ ಸೇತುವೆ ಅಪ್ರಯೋಜಕವಾಗಿ ಪರಿಣಮಿಸಿ, ಬೇರೆಡೆ ತೀವ್ರ ಸಂಚಾರ ದಟ್ಟಣೆಗೂ ಕಾರಣವಾಗುತ್ತಿದೆ.ಮೂರು ವರ್ಷಗಳ ಹಿಂದೆಯೇ ಸತ್ಯನಾರಾಯಣ ಪೇಟೆ ಬಳಿಯ ರೇಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಮೇಲ್ಸೇತುವೆ (ಫ್ಲೈ ಓವರ್) ನಿರ್ಮಿಸುವ ಕಾಮಗಾರಿ ಆರಂಭವಾಗಿದ್ದರೂ, ಈವರೆಗೆ ಪೂರ್ಣಗೊಳ್ಳದ್ದರಿಂದ ವಾಹನ ಸವಾರರ ಸಮಸ್ಯೆಗೆ ಪರಿಹಾರ ದೊರೆತಿಲ್ಲ.ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರಂಭಿಕ ಕಾಮಗಾರಿಯನ್ನು ರೇಲ್ವೆ ಇಲಾಖೆ  ಪೂರ್ಣಗೊಳಿಸಿದ್ದರೂ, ಲೋಕೋಪಯೋಗಿ ಇಲಾಖೆ ಮತ್ತು  ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗಳ ನಿರ್ಲಕ್ಷ್ಯದಿಂದಾಗಿ ಈ ಕಾಮಗಾರಿ ಪೂರ್ಣಗೊಂಡಿಲ್ಲ.ಲೋಕೋಪಯೋಗಿ ಇಲಾಖೆ ಮೂಲಗಳ ಪ್ರಕಾರ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯ ತಾಂತ್ರಿಕ ಮಂಜೂರಾತಿ ವಿಳಂಬದಿಂದಾಗಿ ಕಾಮಗಾರಿಯೇ ನಿಧಾನವಾಗುತ್ತಿದೆ.ಸುಧಾ ವೃತ್ತ, ಕೌಲ್‌ಬಝಾರ್ ಮತ್ತು ರೇಡಿಯೋ ಪಾರ್ಕ್ ಲೆವೆಲ್ ಕ್ರಾಸಿಂಗ್ ಬಳಿ ಕೇವಲ ಮೇಲ್ಸೇತುವೆ ಇದ್ದರೆ ಸಾಕು ಎಂಬ ನಿಲುವು ಪಾಲಿಕೆಯದ್ದಾಗಿದೆ. ಆದರೆ, ಮೇಲ್ಸೇತುವೆಯ ಜತೆಗೆ ಕೆಳ ಸೇತುವೆಯನ್ನೂ ನಿರ್ಮಿಸುವ ಅಗತ್ಯವಿದೆ. ಕೆಳ ಸೇತುವೆ ಇಲ್ಲದಿದ್ದರೆ ಅಲ್ಲಿ ಮೊದಲಿನಂತೆಯೇ ಗೇಟ್ ವ್ಯವಸ್ಥೆಯನ್ನೂ ಮುಂದುವರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಳ ಸೇತುವೆ ಅತ್ಯಗತ್ಯ ಎಂದು ರೇಲ್ವೆ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುವ ಸಾಧ್ಯತೆಗಳಿವೆ ಎಂದು ಮೇಯರ್ ಇಬ್ರಾಹಿಂ ಬಾಬು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಈ ಕಾಮಗಾರಿಗಳ ನಿರ್ಮಾಣ ಕಾರ್ಯ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಪಾಲಿಕೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.ಸತ್ಯನಾರಾಯಣ ಪೇಟೆ ಬಳಿಯ ಮೇಲ್ಸೇತುವೆ ಕಾಮಗಾರಿಯನ್ನು ರೇಲ್ವೆ ಇಲಾಖೆ ಪೂರ್ಣಗೊಳಿಸಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಾಮಗಾರಿ ಕುರಿತ ಟೆಂಡರ್ ಪ್ರಕ್ರಿಯೆ ನಡೆದಿದೆ. ತಾಂತ್ರಿಕ ಮಂಜೂರಾತಿ ದೊರೆತ ನಂತರವಷ್ಟೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮೇಲ್ಸೇತುವೆ ಸಿದ್ಧಗೊಂಡು, ಸಂಚಾರ ಮುಕ್ತವಾಗಲಿದೆ ಎಂದು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ್ ಸ್ಪಷ್ಟಪಡಿಸಿದ್ದಾರೆ.ಭರದಿಂದ ಬೆಳೆಯುತ್ತಿರುವ ಬಳ್ಳಾರಿ ನಗರದಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಇಲಾಖೆಗಳ ವಿಳಂಬ ನೀತಿಯಿಂದಾಗಿ ನಿತ್ಯವೂ ಸಾರ್ವಜನಿಕರು ಪರದಾಡುವಂತಾಗಿದೆ. ಸರಕು ಸಾಗಣೆ ರೈಲುಗಳ ಕಾಟದಿಂದಾಗಿ ನಿತ್ಯವೂ ಹತ್ತಾರು ಬಾರಿ ಬಂದ್ ಆಗುವ ಗೇಟ್ ಅನೇಕ ವಾಹನ ಸವಾರರು ಕಾಯುವಂತೆ ಮಾಡಿ, ಸಮಸ್ಯೆ ತಂದೊಡ್ಡಿದೆ.ಇನ್ನು ಗಣಿಗಾರಿಕೆ ಆರಂಭವಾದ ನಂತರ, ಅದಿರು ಸಾಗಣೆ ರೈಲುಗಳ ಸಂಚಾರ ಆರಂಭವಾದರಂತೂ ಮತ್ತಷ್ಟು ಕಾಯಬೇಕಾಗುತ್ತದೆ ಎಂಬುದು ಸಾರ್ವಜನಿಕರ ದೂರು. ಆದಷ್ಟು ಶೀಘ್ರವೇ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ವಾಹನ ಸವಾರರ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವತ್ತ ಇಲಾಖೆಗಳು ಗಮನ ಹರಿಸಬೇಕು ಎಂದೂ ಅನೇಕರು ಕೋರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.