ಮಂಗಳವಾರ, ಮೇ 18, 2021
30 °C

ಈರುಳ್ಳಿ ರಫ್ತು ನಿಷೇಧ ವಾಪಸಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕೇಂದ್ರ ಸರ್ಕಾರ ಕೂಡಲೇ ಈರುಳ್ಳಿ ರಫ್ತು ನಿಷೇಧ ವಾಪಸ್ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಒಂದು ವಾರದಿಂದ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಈರುಳ್ಳಿ ದರ ರೂ 1,100ರಿಂದ 450ಕ್ಕೆ ಇಳಿದಿದೆ.ಕೇಂದ್ರದ ಈರುಳ್ಳಿ ರಫ್ತು ನಿಷೇಧದಿಂದ ಪರಿಣಾಮದಿಂದ ಈರುಳ್ಳಿ ಬೆಳೆ ಬೆಲೆಕುಸಿತ ಕಂಡಿದೆ. ಇದರಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಸೆಪ್ಟೆಂಬರ್‌ಗೆ ಮುನ್ನ ಮಹಾರಾಷ್ಟ್ರದಲ್ಲಿ ಶೇ. 80ರಷ್ಟು ಈರುಳ್ಳಿ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ. ಆದರೆ, ರಾಜ್ಯದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ಅದೇ ಸಮಯಕ್ಕೆ ಕೇಂದ್ರದ ಕೃಷಿ ಮಂತ್ರಿ ಶರದ್ ಪವಾರ್ ಈರುಳ್ಳಿ ನಿಷೇಧ ಹೇರುತ್ತಾರೆ. ಇದು ಕಳೆದ ಮೂರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇದರಿಂದ ರಾಜ್ಯದ ಈರುಳ್ಳಿ ಉತ್ಪಾದಕರಿಗೆ ನಷ್ಟ ಉಂಟಾಗುತ್ತದೆ. ಹಾಗಾಗಿ, ರಾಜ್ಯ ಸರ್ಕಾರ ಕೂಡಲೇ ಕೇಂದ್ರದ ಜತೆ ಚರ್ಚಿಸಿ ಈರುಳ್ಳಿ ರಫ್ತು ನಿಷೇಧ ವಾಪಸ್‌ಗೆ ಆಗ್ರಹಿಸಬೇಕು ಎಂದರು.ರಾಜ್ಯದ ಗುಲಾಬಿ ಈರುಳ್ಳಿಗೆ ಹೊರದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಆದರೆ, ರಫ್ತು ನಿಷೇಧದಿಂದಾಗಿ ಬೆಳೆಗಾರರು ನಷ್ಟದಲ್ಲಿದ್ದಾರೆ. ಗುಲಾಬಿ ಈರುಳ್ಳಿಗೆ ರಾಜ್ಯದಲ್ಲಿ ಅಷ್ಟಾಗಿ ಮಾರುಕಟ್ಟೆ ಇಲ್ಲ. ಸರ್ಕಾರ ಇನ್ನು ಒಂದು ವಾರದೊಳಗೆ ಕೇಂದ್ರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ವಾರದ ಒಳಗೆ ಈರುಳ್ಳಿ ರಫ್ತು ನಿಷೇಧ ವಾಪಸ್ ಪಡೆಯದಿದ್ದಲ್ಲಿ ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ ರೈತರಿಂದ ರಸ್ತೆತಡೆ ನಡೆಸಲಾಗುವುದು ಎಂದು ಚಂದ್ರಶೇಖರ್ ಎಚ್ಚರಿಸಿದರು.

 

ಮಳೆ ಕಡಿಮೆಯಾಗಿರುವ ಚಿತ್ರದುರ್ಗ ಜಿಲ್ಲೆ ಸೇರಿದಂತೆ ಇತರ ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಬೇಕು. ಅಂತೆಯೇ, ವೆುಕ್ಕೆಜೋಳ ಮಾರುಕಟ್ಟೆಗೆ ಬರುವ ಮುನ್ನವೇ ಸಿದ್ಧತೆ ನಡೆಸಿ, ಬೆಂಬಲ ಬೆಲೆ ಘೋಷಿಸಿ ಖರೀದಿ ಪ್ರಕ್ರಿಯೆ ತಯಾರಿ ನಡೆಸಬೇಕು. ಕೊಪ್ಪಳ ಉಪ ಚುನಾವಣೆಯ ನೆಪದಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಸಬೂಬು ಹೇಳದೇ, ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆಗಾರರ ಹಿತರಕ್ಷಣೆಗೆ ಬದ್ಧರಾಗಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.