ಈಶ್ವರ ದೇವರ ಕೆರೆಯಲ್ಲಿ ವಲಸೆ ಹಕ್ಕಿಗಳ ಕಲರವ

ಅಕ್ಕಿಆಲೂರ: ಇಲ್ಲಿಯ ಇತಿಹಾಸ ಪ್ರಸಿದ್ಧ ಈಶ್ವರ ದೇವರ ಕೆರೆಯಲ್ಲಿ ವಲಸೆ ಹಕ್ಕಿಗಳ ಕಲರವ ಕಣ್ಮನ ತಣಿಸುತ್ತಿದೆ. ಸ್ವದೇಶಿ ಮತ್ತು ವಿದೇಶಿ ಹಕ್ಕಿಗಳು ಕಳೆದ ಹಲವು ದಿನಗಳಿಂದ ಕೆರೆಯಲ್ಲಿ ಬಿಡಾರ ಹೂಡಿರುವುದು ಪರಿಸರ ಪ್ರೀಯರು ಸಂಭ್ರಮಿಸುವಂತೆ ಮಾಡಿದೆ.
ಹೌದು! ಇಲ್ಲಿಯ ಈಶ್ವರ ದೇವರ ಕೆರೆಯಲ್ಲಿ ಬಾನಾಡಿಗಳ ಚಿಲಿಪಿಲಿ ಕಲರವ ಮೋಹಕವಾಗಿ ಕೇಳಿಬರುತ್ತಿದೆ. ಕೆರೆ ಅಂಗಳದಲ್ಲಿ ಹಿಂಡು ಹಿಂಡಾಗಿ ಜಮಾಯಿಸುತ್ತಿರುವ ಪಕ್ಷಿ ಪ್ರೀಯರು ಹಕ್ಕಿಗಳ ಮನಮೋಹಕ ಸೊಬಗನ್ನು ಸವಿಯುತ್ತಿದ್ದಾರೆ. ಜಗತ್ಪ್ರಸಿದ್ಧ ಗುಡವಿ ಪಕ್ಷಿ ಧಾಮ ಇಲ್ಲಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿದೆ. ಸ್ವದೇಶಿ ಮತ್ತು ವಿದೇಶಿ ಹಕ್ಕಿಗಳ ಆಶ್ರಯ ತಾಣ ನರೇಗಲ್ಲ ಕೆರೆಯೂ ಸನಿಹದಲ್ಲಿದೆ.
ಇವೆರಡೂ ಪಕ್ಷಿ ಧಾಮಗಳಿಗೆ ಭೇಟಿ ನೀಡುವ ಪಕ್ಷಿಗಳು ದಾರಿ ಮಧ್ಯೆ ಇಲ್ಲಿಯ ಈಶ್ವರ ದೇವರ ಕೆರೆಯನ್ನು ವಿಶ್ರಾಂತಿ ತಾಣವನ್ನಾಗಿ ಪರಿವರ್ತಿಸಿಕೊಂಡಂತಿವೆ.
ವರ್ಷದಿಂದ ವರ್ಷಕ್ಕೆ ಕೆರೆಯ ಅಂಗಳದಲ್ಲಿ ಪಕ್ಷಿಗಳ ನಿನಾದ ಹೆಚ್ಚಲಾರಂಭಿಸಿದೆ. ಬರೋಬ್ಬರಿ 145 ಎಕರೆಗಳಷ್ಟು ವಿಶಾಲ ಪ್ರದೇಶದಲ್ಲಿ ಹರಡಿರುವ ಈಶ್ವರ ದೇವರ ಕೆರೆ ಬಾನಾಡಿಗಳನ್ನು ಕೈಬೀಸಿ ಕರೆಯುವ ಸೊಬಗು ಹೊಂದಿದೆ. ಇಲ್ಲಿಯ ಹಸಿರಿನ ವಾತಾವರಣ, ಸುತ್ತಲಿನ ತೋಟಪಟ್ಟಿಗಳು, ಆನಂದ ಭಾವನೆಯನ್ನು ಉಂಟು ಮಾಡುವ ಪರಿಸರವೇ ಕೆರೆಯನ್ನು ಪಕ್ಷಿಗಳ ವಿಶ್ರಾಂತಿ ಧಾಮವನ್ನಾಗಿ ಪರಿವರ್ತಿಸಿದೆ. ಸ್ಥಳೀಯ ಸೇರಿದಂತೆ ಸುತ್ತಲಿನ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸುವ ಮುಖ್ಯ ನೀರಿನ ಮೂಲ ಈಶ್ವರ ದೇವರ ಕೆರೆ ಇದೀಗ ಪಕ್ಷಿ ಧಾಮವಾಗಿ ಬದಲಾಗುತ್ತಿರುವುದು ಜನತೆಯಲ್ಲಿ ಸಂತಸ ತರಿಸಿದೆ.
ಪಕ್ಷಿಗಳೇನೋ ಈ ಕೆರೆಗೆ ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿವೆ. ಆದರೆ ಭೇಟಿ ನೀಡುತ್ತಿರುವ ಪಕ್ಷಿ ಪ್ರಭೇದಗಳ ಕುರಿತು ಸ್ಪಷ್ಟ ಮಾಹಿತಿ ದೊರೆಯುತ್ತಿಲ್ಲ. ಕೆಲ ಪಕ್ಷಿ ಪ್ರೀಯರ ಪ್ರಕಾರ ಇಲ್ಲಿ ಬಾರ್ಹೆಡೆಡ್ ಗೂಸ್ (ಶಿರಾರೇಖಿ), ಕಾರ್ಮೊರಾಂಟ್ (ನೀರುಕಾಗೆ), ಗ್ರೆಹೆರಾನ್ (ಬೂದಬಕ), ಪಾಂಡ್ ಹೆರಾನ್ (ಕೊಳದಬಕ), ಓಪನ್ ಬಿಲ್ (ಕೊಕ್ಕರೆ), ಸ್ಪಾಟ್ ಬಿಲ್ (ಚುಕ್ಕೆಬಾತು) ಮುಂತಾದ ಪಕ್ಷಿಗಳು ಕಂಡು ಬರುತ್ತಿವೆ. ಇನ್ನಿತರ ಪಕ್ಷಿ ಪ್ರಭೇದಗಳ ನಿರ್ಧಿಷ್ಟತೆಯ ಕುರಿತು ಮಾಹಿತಿ ಲಭಿಸುತ್ತಿಲ್ಲ.
ಪಕ್ಷಿಗಳಿಗೆ ಮೊಟ್ಟೆಯನ್ನಿಡಲು ಈಶ್ವರ ದೇವರ ಕೆರೆಯ ಸುತ್ತಲಿನ ಪ್ರದೇಶ ಹೇಳಿ ಮಾಡಿಸಿದಂತಿದೆ. ಅಲ್ಲಲ್ಲಿ ಕಂಡು ಬರುವ ಹುಲ್ಲುಗಾವಲಿನಂತಹ ಪ್ರದೇಶ ಪಕ್ಷಿಗಳ ವಾಸಕ್ಕೆ ಯೋಗ್ಯವಾಗಿದೆ. ಜನವಸತಿ ಪ್ರದೇಶವೂ ಇಲ್ಲಿಂದ ಬಹುದೂರದಲ್ಲಿದೆ. ಹೀಗಾಗಿ ಪಕ್ಷಿಗಳು ಇಲ್ಲೊಂದು ಪುಟ್ಟ ವಿಶ್ರಾಂತಿ ಧಾಮವನ್ನು ಮಾಡಿಕೊಂಡಂತಿವೆ. ಕೆಲ ಸಮಯ ಮಾತ್ರವೇ ಕೆರೆ ದಡದಲ್ಲಿ ಕಳೆಯುವ ಪಕ್ಷಿಗಳು ದಿನದ ಬಹುತೇಕ ಸಮಯವನ್ನು ಕೆರೆಯ ಮಧ್ಯ ಭಾಗದಲ್ಲಿ ಕಳೆಯುತ್ತಿರುವುದರಿಂದ ಅವುಗಳ ನೈಜ ಸೌಂದರ್ಯದ ದರ್ಶನ ಭಾಗ್ಯ ಬಹುತೇಕರಿಗೆ ದೊರೆಯುತ್ತಿಲ್ಲ. ಸೌಂದರ್ಯವನ್ನು ಸವಿಯುವ ನಿಶ್ಚಿತ ಮನಸ್ಸಿನೊಂದಿಗೆ ಕೆಲ ಪಕ್ಷಿ ಪ್ರೀಯರು ಗಂಟೆಗಟ್ಟಲೇ ಕೆರೆ ದಡದಲ್ಲಿ ಕಾಯ್ದು ಕುಳಿತುಕೊಳ್ಳುವಂತಾಗಿದೆ.
ಈಶ್ವರ ದೇವರ ಕೆರೆ ನಿಧಾನವಾಗಿ ಪಕ್ಷಿ ಧಾಮವಾಗಿ ಬದಲಾಗುತ್ತಿರುವ ಈ ಸಂದರ್ಭದಲ್ಲಿ ಕೆರೆಯನ್ನು ಪಕ್ಷಿಗಳ ವಾಸಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಶೇಷ ಗಮನ ಹರಿಸಿದರೆ ಮಂದಿನ ದಿನಗಳಲ್ಲಿ ಇದು ಪ್ರವಾಸಿ ತಾಣವಾಗಿ ಪರಿವರ್ತನೆಗೊಳ್ಳುವುದರಲ್ಲಿ ಸಂದೇಹವಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.