ಶುಕ್ರವಾರ, ಜನವರಿ 24, 2020
21 °C

ಈ ನಿಷ್ಕ್ರಿಯತೆ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರದ ಪ್ರಜ್ಞೆಯನ್ನು ಕಲಕಿದ ದೆಹಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ನಂತರದ ಆಕೆಯ ಸಾವು ಸಂಭವಿಸಿ ಒಂದು ವರ್ಷವಾಗಿದೆ.  ಈ ಪ್ರಕರಣದ ನಂತರ  ಅತ್ಯಾಚಾರ ನಿಗ್ರಹಕ್ಕೆ ಕಠಿಣ ಕಾನೂನುಗಳನ್ನು ರೂಪಿಸಲಾಯಿತು. ಹಾಗೆಯೇ  ಈ ಪ್ರಕರಣದಿಂದ ಎಚ್ಚೆತ್ತುಕೊಂಡ  ಸರ್ಕಾರ, ಕೇಂದ್ರ ಬಜೆಟ್‌ನಲ್ಲಿ  ಮಹಿಳೆಯರ ಸುರಕ್ಷತೆ ಹಾಗೂ ಸಶಕ್ತೀಕರಣಕ್ಕಾಗಿ  ರೂ1000 ಕೋಟಿ ಮೊತ್ತದ ‘ನಿರ್ಭಯಾ ನಿಧಿ’  ಯನ್ನು ಘೋಷಿಸಿತು. ಆದರೆ  ಈ ನಿಧಿಯ ಒಂದು ಪೈಸೆಯನ್ನೂ  ಈವರೆಗೆ  ಖರ್ಚು ಮಾಡಿಲ್ಲ  ಎಂಬುದು ಅಧಿಕಾರಶಾಹಿಯ ಕಾರ್ಯವೈಖರಿಗೆ ಹಿಡಿದ ಕನ್ನಡಿ.‘ನಿರ್ಭಯಾ ನಿಧಿ’ ಬರೀ ಕಾಗದದಲ್ಲಷ್ಟೇ ಉಳಿದಿದೆ. ವಿಪರ್ಯಾಸ ಎಂದರೆ, ಬಹಳಷ್ಟು ಸದ್ದು ಗದ್ದಲದ ಪ್ರಚಾರದೊಂದಿಗೆ ಈ ನಿಧಿಯನ್ನು ಆರಂಭಿಸಲಾಗಿತ್ತು.  ನಿಧಿ ನಿಯಂತ್ರಣ ಯಾರು ಮಾಡಬೇಕೆಂಬ ಗೊಂದಲವೇ ಹಣ ಖರ್ಚಾಗದೆ ಉಳಿಯಲು ಕಾರಣ ಎಂಬ ಸಮಜಾಯಿಷಿ ನಿಜಕ್ಕೂ ಒಪ್ಪಲಾಗದು. ಮಹಿಳೆ ವಿಚಾರಗಳ ಬಗ್ಗೆ ಸರ್ಕಾರದ ನಿಷ್ಕಾಳಜಿಗೆ ಇದು ಮತ್ತೊಮ್ಮೆ ಕನ್ನಡಿ ಹಿಡಿದಿದೆ.  ಈ ನಿಧಿ ಬಳಕೆಯ ಸ್ವರೂಪ, ವ್ಯಾಪ್ತಿಯನ್ನು ಯೋಜಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಹೊಣೆಗಾರಿಕೆ ವಹಿಸಿದಾಗಲೇ  ಅಪಸ್ವರದ ಎಳೆ ಎದ್ದಿತ್ತು.   ಆಗ  ನಿಧಿ ಬಳಕೆ ಕುರಿತಂತೆ ಯಾವ  ಮಾರ್ಗಸೂಚಿಯೂ ಇರಲಿಲ್ಲ. ಇದಕ್ಕಾಗಿ  ನಿಧಿ ಬಳಕೆಗೆ ರೂಪುರೇಷೆ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಮಹಿಳಾ ವಿಚಾರಗಳಲ್ಲಿ ಕೆಲಸ ಮಾಡುತ್ತಿರುವ ತಜ್ಞರು ಅಥವಾ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಪ್ರಯತ್ನಗಳೂ ನಡೆಯಲಿಲ್ಲ. ಯಥಾಪ್ರಕಾರ,  ಈ  ‘ನಿರ್ಭಯಾ ನಿಧಿ’  ಈವರೆಗೆ ಮಹಿಳೆಯರ ನೆರವಿಗೆ ಸಿಕ್ಕದೆ ಸಾಂಕೇತಿಕವಾಗಷ್ಟೇ ಉಳಿದಿದ್ದು ವಿಷಾದದ ಸಂಗತಿ. ಈಗ,  ‘ನಿರ್ಭಯಾ ನಿಧಿ’ ಅಡಿ ಮಹಿಳೆ ಸುರಕ್ಷತೆ ಹೆಚ್ಚಿಸಲು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು  ಕೇಂದ್ರ ಸರ್ಕಾರ ಪ್ರಕಟಿಸಿದೆ.   ಈ ಪ್ರಕಾರ ಮೊಬೈಲ್ ಹ್ಯಾಂಡ್ ಸೆಟ್‌ಗಳಲ್ಲಿ  ‘ಎಸ್ಒಎಸ್ ಅಲರ್ಟ್ ಬಟನ್’ ಅಳವಡಿಕೆಯನ್ನು ಕಡ್ಡಾಯ ಮಾಡುವ ಯೋಜನೆ ಇದೆ. ಇದರಿಂದ ಸಂಕಷ್ಟದಲ್ಲಿ ಸಿಲುಕಿದ ಮಹಿಳೆ ಬಳಿಗೆ  ಕನಿಷ್ಠ ಅವಧಿಯಲ್ಲಿ ತಲುಪುವುದು ಪೊಲೀಸರಿಗೆ ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ರೈಲುಗಳಲ್ಲೂ  ‘ಎಸ್ಒಎಸ್ ಅಲರ್ಟ್’   ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಜಿಪಿಎಸ್ ಮತ್ತು ಸಿ.ಸಿ. ಟಿ.ವಿ. ಕ್ಯಾಮೆರಾಗಳ ಅಳವಡಿಕೆಗೆ  ಈ ನಿಧಿಯನ್ನು ಬಳಸಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಲಾಗಿದೆ.ಅಷ್ಟಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಚಾಲಕರು ಹಾಗೂ ಕಂಡಕ್ಟರ್‌ಗಳನ್ನು ನೇಮಕ ಮಾಡುವ ವಿಚಾರವೂ ಪರಿಶೀಲನೆಯಲ್ಲಿದೆ.  ರಾಷ್ಟ್ರದಾದ್ಯಂತ ಪೊಲೀಸ್ ಪಡೆಯಲ್ಲಿರುವ ಮಹಿಳೆಯರ ಪ್ರಮಾಣ ಕೇವಲ ಶೇ 6.  ಮಹಿಳಾ ಪೊಲೀಸ್ ಪಡೆ ಬಲವರ್ಧನೆಗೆ   ಈ ನಿಧಿ ಬಳಕೆಯ ಉದ್ದೇಶವೂ ಈವರೆಗೆ ಈಡೇರಿಲ್ಲ. ಸಂವೇದನಾಶೂನ್ಯತೆ ಆವರಿಸಿಕೊಂಡಿರುವ ಅಧಿಕಾರಶಾಹಿಯ ಜಡತ್ವಕ್ಕೆ ಇದು ಸಾಕ್ಷಿ. ರಾಷ್ಟ್ರದ ಮಹಿಳೆಯರ ಸುರಕ್ಷತೆ ಹಾಗೂ ಅಭಿವೃದ್ಧಿಗೆ ಈಗಲಾದರೂ ಈ ಹಣ ಸದ್ವಿನಿಯೋಗ ಮಾಡುವತ್ತ ಸರ್ಕಾರ ಕೂಡಲೇ ಕಾರ್ಯಪ್ರವೃತ್ತವಾಗಲಿ.

ಪ್ರತಿಕ್ರಿಯಿಸಿ (+)