ಮಂಗಳವಾರ, ಜೂನ್ 15, 2021
24 °C

ಈ ಶಾಲೆಯಲ್ಲಿ ಹಸಿರೇ ದೇವರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಳಬಾಗಲು: ಸರ್ಕಾರಿ ಶಾಲೆಗಳಿಂದರೆ ಮೂಗು ಮುರಿಯುವ ಈಚಿನ ದಿವಸಗಳಲ್ಲಿ ತಾಲ್ಲೂಕಿನ ಗಡಿ ಅಂಚಿನಲ್ಲಿರುವ ಪಟ್ರಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯು ಹಸಿರು ಪರಿಸರದೊಂದಿಗೆ ಕಂಗೊಳಿಸುತ್ತಿದೆ. ಜಿಲ್ಲಾ ಮಟ್ಟದ ಹಸಿರು ಶಾಲೆಯ ಪ್ರಶಸ್ತಿಯ ಗರಿಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಹಸಿರೇ ದೇವರು. ಶಿಕ್ಷಕರು ಮತ್ತು ಮಕ್ಕಳಿಂದ ಪ್ರಕೃತಿ ದೇವಿಗೆ ನಿತ್ಯವೂ ನಡೆಯುತ್ತಿದೆ ಪೂಜೆ.ಒಂದರಿಂದ 5ನೇ ತರಗತಿಯವರೆಗೂ ಸುಮಾರು 30 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಎರಡು ಕೊಠಡಿಗಳಿರುವ ಶಾಲೆಯ ಮುಂದಿನ ಹಸಿರು ಪರಿಸರದ ನಡುವೆ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿದೆ. ಈ ಮೂಲಕ ಮಕ್ಕಳಲ್ಲಿನ ಪರಿಸರ ಜಾಗೃತಿಯೂ ಮೂಡುತ್ತಿದೆ.ಶಾಲೆಯ ಆವರಣದಲ್ಲಿ ಆಕರ್ಷಕ ಕೈತೋಟವಿದೆ. ಮಕ್ಕಳ ಮಧ್ಯಾಹ್ನ ಬಿಸಿಯೂಟಕ್ಕೆ ಉಪಯೋಗಿಸಲು ಬದನೆಕಾಯಿ, ಸೊಪ್ಪು,ಟೊಮೆಟೊ ಮುಂತಾದ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತಿದೆ.  ಜೊತೆಗೆ ಜಮ್ಮುನೇರಳೆ, ಸಂಪಿಗೆ, ಹಲಸು, ಮಾವು, ಅಶೋಕ ಗಿಡಗಳು, ತೆಂಗಿನ ಮರ, ನೆಲ್ಲಿಕಾಯಿ, ಕರಿಬೇವು, ನುಗ್ಗೆಕಾಯಿ ಮರ, ಪರಂಗಿ, ಸಿಲ್ವರ್, ಟೀಕ್ ಮರಗಳೂ ಎತ್ತರಕ್ಕೆ ಬೆಳೆದುನಿಂತು ನೆರಳು ಕೊಡುತ್ತಿವೆ.

ಪರಿಣಾಮವಾಗಿ ಉಲ್ಲಾಸಮಯ ವಾತಾವರಣವೂ ಶಾಲೆಯ ಆವರಣದಲ್ಲಿ ನಿರ್ಮಾಣವಾಗಿದೆ.ನಂದಿವರಣ, ಚೆಂಡುಹೂ, ಮಲ್ಲಿಗೆ ಹೂವುಗಳೂ ಪರಿಮಳ ಚೆಲ್ಲುತ್ತವೆ. ಹೀಗಾಗಿ ಶಾಲೆಯನ್ನು ಪ್ರವೇಶಿಸುವವರಿಗೆ ಸುಗಂಧವೂ ಮೂಗಿಗೆ ಅಡರುತ್ತದೆ. ಅಷ್ಟೇ ಅಲ್ಲದೇ ಮಣ್ಣಿನ ಸವಕಳಿ ತಡೆಯಲು ಬದುಗಳನ್ನು ನಿರ್ಮಿಸಿರುವುದು ಶಾಲೆಯ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಕಸ ವಿಲೇವಾರಿಗೆ ಕಾಂಪೋಸ್ಟ್ ಗುಂಡಿಯನ್ನೂ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಈ ಶಾಲೆ ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಸಿಕೊಳ್ಳುವಲ್ಲಿ ಪರಿಣಾಮಕಾರಿಯಾದ ಪ್ರಯೋಗಶೀಲ ಪಾಠಗಳನ್ನು ಹೇಳಿಕೊಡುತ್ತಿದೆ.ಇಲ್ಲಿ ಸಮರ್ಪಕ ಬೋಧನಾ ಸಾಮಗ್ರಿಗಳಿವೆ. ಹಸಿರು ಪರಿಸರದ ನಡುವೆ ಮನಸ್ಸನ್ನು ಉಲ್ಲಸಿತಗೊಳಿಸುವ ಅಂದವಾದ ಗೋಡೆಬರಹ, ರಾಷ್ಟ್ರನಾಯಕರ ಮತ್ತು ದೇವರ ಭಾವಚಿತ್ರಗಳೂ ಇಲ್ಲಿವೆ. ಇವು ಶಾಲೆಗೆ ಮತ್ತಷ್ಟು ಮೆರುಗು ನೀಡಿವೆ.ಇಂಗ್ಲಿಷ್ ಬೋಧನೆ: ಶಾಲೆಯಲ್ಲಿ 1ರಿಂದ 3ನೇ ತರಗತಿಯ ವಿದ್ಯಾರ್ಥಿಗಳ ನಲಿ-ಕಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲಾ ಮಕ್ಕಳಿಗೆ ಇಂಗ್ಲಿಷ್ ಬೋಧನೆ ಸಹ ಮಾಡಲಾಗುತ್ತದೆ.ಕ್ರೀಡೆ, ಕಲೆ, ಪರಿಸರ, ಜಲಸಂರಕ್ಷಣೆ, ನಾಡಿನ ಪರಂಪರೆ, ಸಾಂಸ್ಕೃತಿಕ ಕಾರ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ  ಮತ್ತು ಸಾರ್ವಜನಿಕರಿಗೆ ಪರಿಸರದ ಅರಿವು ಕುರಿತು ಗೋಡೆ ಬರಹಗಳನ್ನು ಕೂಡ ಬರೆಯಲಾಗಿದೆ. ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ. ಸೋಮೇಶ್ ಹಾಗೂ ಸಹಶಿಕ್ಷಕಿ ಎಂ.ರೇವತಿ ಅವರ ಶಾಲಾ ಅಭಿವೃದ್ಧಿ ಸಮಿತಿ ಮಾರ್ಗದರ್ಶನದಲ್ಲಿ ಈ ಎಲ್ಲಾ ಕಾರ್ಯಗಳು ನಡೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.