ಭಾನುವಾರ, ಜೂನ್ 20, 2021
28 °C
ರಷ್ಯಾ ಪರ 200 ಬೆಂಬಲಿಗರ ದಾಳಿ

ಉಕ್ರೇನ್‌ ನೌಕಾ ಕಚೇರಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆವಾಸ್ಟೊಪೊಲ್‌ (ಉಕ್ರೇನ್‌/ಎಎಫ್‌ಪಿ): ಕ್ರಿಮಿಯಾ ಗಣರಾಜ್ಯ ತನ್ನ ಅವಿಭಾಜ್ಯ ಅಂಗ ಎಂದು ರಷ್ಯಾ ಸಾರಿದ ಬೆನ್ನಲ್ಲೇ ರಷ್ಯಾ ಬೆಂಬಲಿತ ಪಡೆಗಳು ಹಾಗೂ ಉಕ್ರೇನ್‌ ನೌಕಾ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದೆ.ಉಕ್ರೇನ್‌ ನೌಕಾಪಡೆ ಇಬ್ಬರು ಕ್ರಿಮಿಯನ್ನರನ್ನು ಹತ್ಯೆ ಮಾಡಿದೆ ಎಂದು ರಷ್ಯಾ ಆರೋಪಿಸಿದ್ದು, ಇದಕ್ಕೆ ಪ್ರತಿಕಾರವಾಗಿ ಕ್ರಿಮಿಯಾದ ಬಂದರು ನಗರ ಸೆವಾಸ್ಟೊಪೊಲ್‌ ನಲ್ಲಿರುವ ಉಕ್ರೇನ್‌ನ ನೌಕಾ ಪಡೆ ಕೇಂದ್ರ ಸ್ಥಾನದ ಮೇಲೆ ರಷ್ಯಾ ಬೆಂಬಲಿತ ಸುಮಾರು 200 ಜನ ದಾಳಿ ನಡೆಸಿ ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು.ಈ ಘಟನೆಯಲ್ಲಿ ತನ್ನ ಒಬ್ಬ ಯೋಧ ಮೃತಪಟ್ಟಿದ್ದಾನೆ ಎಂದು ಉಕ್ರೇನ್‌ ಆರೋಪಿಸಿದೆ. ಆದರೂ ತನ್ನ ಪಡೆಗಳನ್ನು ಕ್ರಿಮಿಯಾದಿಂದ ಹಿಂದಕ್ಕೆ ಪಡೆಯುವುದಿಲ್ಲ ಎಂದು ಉಕ್ರೇನ್‌ ರಕ್ಷಣಾ ಸಚಿವರು ಸ್ಪಷ್ಟಪಡಿಸಿದರು.ರಷ್ಯಾ ಬೆಂಬಲಿತರ ಈ ದಾಳಿಯ ನಡುವೆಯೂ ನಮ್ಮ ಪಡೆಗಳು ಅವರತ್ತ ದಾಳಿ ಮಾಡಿಲ್ಲ ಎಂದು ಉಕ್ರೇನ್‌ ನೌಕಾ ಪಡೆ ವಕ್ತಾರರು ತಿಳಿಸಿದರು.ಪುಟಿನ್‌ ಧೋರಣೆಗೆ ಕೆರಿ ಆಕ್ರೋಶ (ವಾಷಿಂಗ್ಟನ್‌ ವರದಿ): ಉಕ್ರೇನ್‌ ಭಾಗವಾಗಿದ್ದ ಕ್ರಿಮಿಯಾ ಗಣರಾಜ್ಯವನ್ನು ಅಂತಾರಾಷ್ಟ್ರೀಯ ಸಮುದಾಯದ ವಿರೋಧದ ನಡುವೆಯೂ ‘ಅಕ್ರಮ’ವಾಗಿ ತಮ್ಮ ದೇಶಕ್ಕೆ ಸೇರಿಸಿಕೊಳ್ಳುವ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಇತಿಹಾಸಕ್ಕೆ ಅಪಚಾರ ಎಸಗುತ್ತಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಧ್ಯಕ್ಷ ಪುಟಿನ್‌ ಇತಿಹಾಸದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿರಬಹುದು, ಆದರೆ ನನ್ನ ಪ್ರಕಾರ ಅವರು ಇತಿಹಾಸಕ್ಕೆ ಅಪಚಾರ ಎಸಗುತ್ತಿದ್ದಾರೆ’ ಎಂದರು.ಕ್ರಿಮಿಯಾ ವಿಷಯದಲ್ಲಿ ಮಾಸ್ಕೊ  ನಡೆದುಕೊಂಡ ರೀತಿ ಇಡೀ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಅದಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದೆ ಎಂದು ಶ್ವೇತಭವನ ಟೀಕಿಸಿದೆ.ಕ್ರಿಮಿಯಾವನ್ನು ಅಕ್ರಮವಾಗಿ ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿರುವ ರಷ್ಯಾ ಕ್ರಮವನ್ನು ಅಮೆರಿಕ ಎಂದಿಗೂ ಮಾನ್ಯ ಮಾಡುವುದಿಲ್ಲ. ಇದರ ಪರಿಣಾಮವನ್ನು ರಷ್ಯಾ ಎದುರಿಸಬೇಕಾಗುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆ ಕಾರ್ನಿ ಎಚ್ಚರಿಸಿದ್ದಾರೆ.ಉಕ್ರೇನ್‌ಗೆ ಬೆಂಬಲ ವ್ಯಕ್ತಪಡಿಸಿ ರಷ್ಯಾ ಕ್ರಮವನ್ನು ಖಂಡಿಸುವ ದಿಸೆಯಲ್ಲಿ ಒಬಾಮ ಆಡಳಿತ ಭಾರತ ಸೇರಿದಂತೆ ವಿಶ್ವ ಸಮುದಾಯದ ಬೆಂಬಲ ಗಳಿಸಲು ಯತ್ನಿಸುತ್ತಿದೆ ಎಂದು ಶ್ವೇತಭವನ ತಿಳಿಸಿದೆ.ಈಗಾಗಲೇ ಕ್ರಿಮಿಯಾ ಸ್ಥಿತಿಗತಿ ಕುರಿತು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್‌ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ.ಆದರೆ ರಷ್ಯಾ ಕ್ರಮವನ್ನು ಭಾರತ ಖಂಡಿಸಬೇಕು ಎಂದು ಅಮೆರಿಕ ಬಯಸುತ್ತಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.

ಆಸ್ಟ್ರೇಲಿಯಾ ನಿರ್ಬಂಧ: ರಷ್ಯಾ ವಿರುದ್ಧ ಆಸ್ಟ್ರೇಲಿಯಾ, ಹಣಕಾಸು ಹಾಗೂ ಪ್ರವಾಸಿ ನಿರ್ಬಂಧಗಳನ್ನು ವಿಧಿಸಿದ್ದು ಕ್ರಿಮಿಯಾ ವಿಷಯದಲ್ಲಿ ಮಾಸ್ಕೊ ನಡೆದುಕೊಂಡ ರೀತಿಯನ್ನು ಖಂಡಿಸಿದೆ.‘ಜನಮತಗಣನೆಯ ಆಧಾರದಲ್ಲಿ ಒಂದು ದೇಶದ ಗಡಿಯನ್ನು ಮತ್ತೊಂದು ದೇಶ ಕಬಳಿಸಲು ಅಂತಾರಾಷ್ಟ್ರೀಯ ಕಾನೂನು ಅವಕಾಶ ನೀಡುವುದಿಲ್ಲ’ ಎಂದು ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಜೂಲಿ ಬಿಷಪ್‌ ಹೇಳಿದರು.

ರಷ್ಯಾ ವಿರುದ್ಧ ನಿರ್ಬಂಧ: ಭಾರತ ವಿರೋಧ

ನವದೆಹಲಿ (ಪಿಟಿಐ): ಕ್ರಿಮಿಯಾ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದ ವಿರುದ್ಧ ಹಲವು ನಿರ್ಬಂಧ ವಿಧಿಸಿರುವ ಅಮೆರಿಕ ಮತ್ತಿತರ ಪಾಶ್ಚಾತ್ಯ ದೇಶಗಳ ಧೋರಣೆಯನ್ನು ಭಾರತ ‘ಏಕಪಕ್ಷೀಯ’ ಎಂದು ಟೀಕಿಸಿದ್ದು ಇಂತಹ ಕ್ರಮಗಳಿಗೆ ತನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದೆ.‘ಇರಾಕ್‌, ಇರಾನ್‌ನಂತಹ ದೇಶಗಳ ವಿರುದ್ಧ ವಿಧಿಸಿದ್ದ ಏಕಪಕ್ಷೀಯ ನಿರ್ಬಂಧಗಳನ್ನು ಭಾರತ ಯಾವತ್ತೂ ಬೆಂಬಲಿಸಿಲ್ಲ, ಈಗಲೂ ಸಹ ರಷ್ಯಾ ವಿರುದ್ಧ ವಿಧಿಸಿರುವ ನಿರ್ಬಂಧಕ್ಕೆ ಬೆಂಬಲ ಇಲ್ಲ’ ಎಂದು ವಿದೇಶಾಂಗ ಸಚಿವಾಯದ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.