ಗುರುವಾರ , ಮಾರ್ಚ್ 4, 2021
30 °C

ಉಗುಳುವ ರೋಗಕ್ಕೆ ಮದ್ದುಂಟೇ?

ಬಿ.ಎಸ್. ಷಣ್ಮುಖಪ್ಪ Updated:

ಅಕ್ಷರ ಗಾತ್ರ : | |

ಉಗುಳುವ ರೋಗಕ್ಕೆ ಮದ್ದುಂಟೇ?

ರಾತ್ರಿ ಕೆಲಸ ಮುಗಿಸಿ ಕೊನೆಯ ಬಸ್‌ ಹಿಡಿಯಲು ಎಂ.ಜಿ.ರೋಡಿನಿಂದ ಶಿವಾಜಿ ನಗರಕ್ಕೆ ಧಾವಂತದ ಹೆಜ್ಜೆ ಹಾಕಿದ್ದೆ. ಬಸ್‌ ಸಿಕ್ಕಿತು ಎಂಬ ಸಂತೋಷದಲ್ಲೇ ಕಿಟಕಿ ಪಕ್ಕದ ಸೀಟೇ ಸಿಕ್ಕಿತಲ್ಲಾ ಎಂಬುದು ನೆಮ್ಮದಿಯನ್ನು ಇಮ್ಮಡಿಗೊಳಿಸಿತ್ತು.ಇನ್ನೇನು ಮನೆ ಬರುವವರೆಗೂ ಆರಾಮಾಗಿ 15–20 ನಿಮಿಷದ ಪ್ರಯಾಣವನ್ನು ಆನಂದಿಸಬಹುದಲ್ಲ ಎಂದು ಯೋಚಿಸುತ್ತಿದ್ದವನಿಗೆ ಒಮ್ಮೆಲೇ ಮತ್ತೊಂದು ಬದಿಯ ಕಿಟಕಿ ಪಕ್ಕದಲ್ಲಿ ಕುಳಿತಿದ್ದ ಮನುಷ್ಯನೊಬ್ಬ ಜೋರಾಗಿ ಕೆಮ್ಮಿದ್ದು ನನ್ನ ಚಿತ್ತವನ್ನೇ ಕದಡಿತು.ಕೆಮ್ಮುತ್ತಿದ್ದವನು ಹೊಟ್ಟೆಯೊಳಗಿನ ಕರಳು ಕಿತ್ತು ಬರುವಂತೆ ಕ್ಯಾಕರಿಸುತ್ತಾ ಕಿಟಕಿಯ ಹೊರಗೆ ತಲೆ ಇಳಿಬಿಟ್ಟ. ಇಡೀ ಬಸ್ಸಿನಲ್ಲಿದ್ದ ಜನರೆಲ್ಲಾ ಆತನನ್ನೇ ನೋಡಿದರು. ಮಧ್ಯ ವಯಸ್ಸಿನ ಕನಿಷ್ಠ ಸುಶಿಕ್ಷಿತನಂತೆ ಕಾಣುತ್ತಿದ್ದ ವ್ಯಕ್ತಿಯಾತ. ನೋಡ ನೋಡುತ್ತಿದ್ದಂತೆಯೇ ಕೆಮ್ಮಿದ ಭರದಲ್ಲೇ ಭೂಪ ಕಫವನ್ನೆಲ್ಲಾ ಒಟ್ಟುಗೂಡಿಸಿಕೊಂಡು ತೊಪ್ಪನೆ ಹೊರಗೆ ಥೂಕಿದ.ಒಂದು ಕ್ಷಣ ಮುಖವನ್ನೆಲ್ಲಾ ಕಿವುಚಿ ಕೊಂಡೆ. ಯಾಕೊ ವಾಯ್ಕ್‌ ವಾಯ್ಕೆನ್ನಿಸಿತು. ಎಂಥಾ ಹೇಸಿಗೆ ಯಪ್ಪಾ ಎಂದು ನನ್ನೊಳಗೇ ನಾನು ಹಲುಬಿದೆ. ಆತ ಮತ್ತೆ ಕೆಮ್ಮುತ್ತಾ, ಕ್ಯಾಕರಿಸುತ್ತಾ, ಕಿಟಕಿಯ ಹೊರಗೆ ಮುಖ ಹಾಕುತ್ತಾ... ಈ ಕಾರ್ಯಕ್ರಮವನ್ನು ಆತ ಮೇಖ್ರಿ ಸರ್ಕಲ್‌ನ ಸ್ಟಾಪ್‌ ಬರುವತನಕ ಮೇಲಿಂದ ಮೇಲೆ ಮಾಡುತ್ತಲೇ ಇದ್ದ. ಪಕ್ಕದಲ್ಲಿರುವವರು ಏನೆಂದುಕೊಂಡಾರು ಎಂಬ ಕಿಂಚಿತ್ತೂ ಖಬರಿಲ್ಲದೆ.ತಂಬಾಕು ಮತ್ತು ಪಾನ್‌ಗಳನ್ನು ತಿಂದು ಉಗುಳುವ ಜನರಿಗಿಂತಲೂ ಸುಮ್ಮಸುಮ್ಮನೇ ಎಲ್ಲೆಂದರಲ್ಲಿ ಉಗುಳುವ ಅಸಭ್ಯ ವರ್ತನೆ ನಮಗೆ ಸಹಜವಾಗಿ ಹೋಗಿದೆ. ಹೀಗೆ ಉಗುಳಬಾರದು ಎಂದು ಹೇಳುವ ಜನರಾಗಲೀ ಅಥವಾ ಒಂದು ಸಣ್ಣ ಕಾನೂನಾಗಲೀ ನಮ್ಮನ್ನು ಎಚ್ಚರಿಸುವುದಿಲ್ಲ.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಬುದೊಂದು ಸರಿಸುಮಾರು ಒಂದೂವರೆ ಕೋಟಿ ಬೆಂಗಳೂರಿಗರ ಕಷ್ಟ ಸುಖ ಕೇಳಬೇಕಾದ ಸಾಂವಿಧಾನಿಕ ಜನಪ್ರತಿನಿಧಿಗಳ ಸಂಸ್ಥೆ. ಆದರೇನು? ನಾಗರಿಕರ ಹಕ್ಕುಗಳನ್ನು ರಕ್ಷಿಸುವ, ಊರು ಸ್ವಚ್ಛವಾಗಿಡುವ ಯಾವೊಂದೂ ತೆವಲು, ದರ್ದು ಅದಕ್ಕೆ ಇದ್ದಂತೆ ಕಾಣುವುದೇ ಇಲ್ಲ. ಇಂತಹ ನಿರ್ಲಿಪ್ತ ಕಚೇರಿಯ ಕಿವಿ ಹಿಂಡುವ ಕೆಲಸವೂ ಆಗುತ್ತಿಲ್ಲ.ಈ ಊರಿನಲ್ಲಿ ಉಚ್ಚೆ ಬಂದ ತಕ್ಷಣ ಹೊಯ್ಯಲು, ಉಗುಳಬೇಕಿನ್ನಿಸಿದ  ಕೂಡಲೇ ಎಲ್ಲಿ ಬೇಕೆಂದರಲ್ಲಿ ಥೂಕಲು, ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುವಾಗ ‘ಅಮ್ಮಾ ಇಸ್ಸಿss’ ಎಂದರೆ ಫುಟ್‌ಪಾತ್‌ನಲ್ಲೇ ಚೆಡ್ಡಿ ಬಿಚ್ಚಿಸಿ ‘ಮಾಡು ಪುಟ್ಟಾ ಮಾಡು’ ಎನ್ನುತ್ತಾ ಪುಸಲಾಯಿಸುವ ಅಪ್ಪ-- ಅಮ್ಮಂದಿರಿಗೆ ಕೊರತೆಯಿಲ್ಲ ಮತ್ತು ಇದಕ್ಕೆ ಬಡವ ಬಲ್ಲಿದರೆಂಬ ಭೇದವೂ ಇಲ್ಲ. ಎಲ್ಲೆಂದರಲ್ಲಿ ಉಗುಳುವುದು ಇಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ನಮಗೆ ಗೊತ್ತಿಲ್ಲದೆಯೇ ನಮ್ಮ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ಕಾಣಿಸುತ್ತಿರುತ್ತದೆ. ಕ್ಷಯ ಹಾಗೂ ಸಾಂಕ್ರಾಮಿಕ ರೋಗಗಳು ಹರಡಲು ಇದು ರಾಜಮಾರ್ಗ. ಆದರೆ ಈ ಬಗ್ಗೆ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ.ಎಷ್ಟೋ ದೇಶಗಳಲ್ಲಿ ಸಾರ್ವಜನಿಕವಾಗಿ ಉಗುಳುವುದನ್ನು ನಿಷೇಧಿಸಿ ಕಾನೂನುಗಳನ್ನು ಜಾರಿಗೆ ತರಲಾಗಿದೆ. ನಮ್ಮಲ್ಲೂ ಈಗ್ಗೆ ದಶಕಗಳಷ್ಟು ಹಿಂದೆಯೇ ಗೋವಾ ರಾಜ್ಯದಲ್ಲಿ ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಉಗುಳುವುದನ್ನು ನಿಷೇಧಿಸಿ ಕಾನೂನು ಜಾರಿಗೆ ತರಲಾಗಿದೆ.‘ಇಲ್ಲಿ ಉಗುಳಬಾರದು’, ‘ಇಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ’, ‘ಉಗುಳು ಡಬ್ಬಿಗಳನ್ನು ಉಪಯೋಗಿಸಿ’ ಎಂಬಿತ್ಯಾದಿ ಬೋರ್ಡ್‌ಗಳು ಅಲ್ಲಲ್ಲಿ ಕಾಣಸಿಗುತ್ತವೆಯಾದರೂ ಅವುಗಳನ್ನು ಉಪಯೋಗಿಸುವ ಪ್ರಜ್ಞಾವಂತರು ಬೆರಳೆಣಿಕೆಯಷ್ಟು ಮಾತ್ರ.ಇಲ್ಲೆಲ್ಲಾದರೂ ಉಗುಳಿಯಾರೆಂಬ ಮುಂದಾಲೋಚನೆಯಲ್ಲಿ ಬಹಳಷ್ಟು ಕಡೆ ದೇವರ ಚಿತ್ರಗಳನ್ನು ಅಂಟಿಸಲಾಗಿರುತ್ತದೆ ಅಥವಾ ಟೈಲ್ಸ್‌ಗಳಲ್ಲೇ ಮುದ್ರಿಸಲಾದ ದೇವರ ಪಟಗಳನ್ನು ಗೋಡೆಗಳಲ್ಲಿ ಜೋಡಿಸಲಾಗಿರುತ್ತದೆ. ಏನೊ ದೇವರ ಭಯಕ್ಕೆ ಜನ ಇಂತಹ ಕಡೆ ಒಂದಿಷ್ಟು ಬೆಲೆ ಕೊಡುವುದುಂಟು.ಎಲೆ ಅಡಿಕೆ ಅಗಿದು ಉಗುಳುವುದು, ಗುಟ್ಕಾ, ತಂಬಾಕು ಹಾಗೂ ಸ್ವಾಭಾವಿಕವಾಗಿ ಬರುವ ಉಗುಳನ್ನು ಉಗಿಯುವುದಕ್ಕೆಂದೇ ನಿರ್ದಿಷ್ಟ ಥೂಕುದಾನಿಗಳಿದ್ದರೂ ಅವುಗಳನ್ನು ಉಪಯೋಗಿಸುವ ಜನ ಕಡಿಮೆಯೇ.  ಅನಿಷ್ಟಗಳಿಗೆ ಆಹ್ವಾನ

ಸಾರ್ವಜನಿಕ ಸ್ಥಳಗಳಲ್ಲಿ ನೆಲದ ಮೇಲೆ ಉಗುಳುವುದು ಅನಿಷ್ಟಗಳಿಗೆ ಆಹ್ವಾನ ನೀಡಿದಂತೆ ಎಂಬ ಭಾವನೆ ಇವತ್ತಿಗೂ ಪೌರ್ವಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿರುವ ನಂಬಿಕೆ. ನಮ್ಮ ಕಣ್ಣಿಗೆ ಕಾಣದ ಅನೇಕ ಜೀವಿಗಳು ಉಗುಳಿಗೆ ಸಿಲುಕಿ ಸತ್ತು ಹೋಗುವಾಗ ಉಗುಳಿದವರಿಗೆ ಶಾಪ ಹಾಕುತ್ತವೆ ಎಂಬುದು ಇದರ ಹಿನ್ನೆಲೆ.

ಇಂದಿಗೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳಿಗೆ ಏನಾದರೂ ಸಣ್ಣಪುಟ್ಟ ಜ್ವರ ಕಾಣಿಸಿಕೊಂಡರೆ, ಊಟ ಮಾಡದಿದ್ದರೆ, ಅಸ್ವಸ್ಥತೆ ಉಂಟಾದರೆ ದೃಷ್ಟಿ ತೆಗೆಯುವ ಅಥವಾ ರಂಚು ಹಾಕುವ ಪದ್ಧತಿ ರೂಢಿಯಲ್ಲಿದೆ. ಈ ಸಮಯದಲ್ಲಿ ವೀಳ್ಯದೆಲೆಯನ್ನು ನೀವಳಿಸಿ ನಂತರ ಅದನ್ನು ಎದುರಿಗಿನ ತಟ್ಟೆಯ ಕುಂಕುಮದ ನೀರಿನಲ್ಲಿ ಅದ್ದಿ ಎಡಗೈ ಬೆರಳ ಮಧ್ಯೆ ಸಿಕ್ಕಿಸಿಕೊಂಡು ಮೂರು ಬಾರಿ ಮುಖದ ಮೇಲೆ ನೀವಳಿಸಿ ನಂತರ ಥೂ ಥೂ ಥೂ ಎಂದು ಪಕ್ಕಕ್ಕೆ ಉಗುಳಲಾಗುತ್ತದೆ.ಹಾಡಿ ಹಾಡಿ ರಾಗ...

‘ಹಾಡಿ ಹಾಡಿ ರಾಗ ಬಂತು, ಉಗುಳಿ ಉಗುಳಿ ರೋಗ ಬಂತು...’ ಎಂಬಂತೆ ನಾವೇನು ಮಾಡುತ್ತಿದ್ದೇವೆ ಎಂಬ ಅರಿವೆಯೇ ನಮಗಿರುವುದಿಲ್ಲ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿಟ್ಟುಕೊಳ್ಳುವುದು ಹಾಗೂ ಉಗುಳುವುದು ರೋಗವಾಗುವ ಮುನ್ನ ನಾವು ಮಕ್ಕಳಿಗೆ ಶಾಲಾ ಪಠ್ಯಕ್ರಮದಲ್ಲೇ ಇಂತಹ ಅಭ್ಯಾಸಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ.

ಉಗುಳುವವರು ಒಂದಷ್ಟು ಟಿಶ್ಯು ಪೇಪರ್‌ಗಳಿಟ್ಟುಕೊಂಡು, ಅದಕ್ಕೆ ಉಗುಳಿ, ಮಡಿಚಿ ಎಸೆಯುವುದು ಒಂದು ಉತ್ತಮ ಅಭ್ಯಾಸ.–ದಿವ್ಯಾ, ಗೃಹಿಣಿ, ಕೆಇಬಿ ಲೇ ಔಟ್‌ಉಗಿಯುವ ಚಳವಳಿ

ಪ್ರೊಫೆಸರ್‌ ಎಂ.ಡಿ.ನಂಜುಂಡಸ್ವಾಮಿ ಅವರು ಉಗುಳುವ ವಿಧಾನವನ್ನು ತಮ್ಮ ಚಳವಳಿಯ ಒಂದು ಭಾಗವಾಗಿಯೂ ಬಳಸಿಕೊಂಡಿದ್ದರು. 1994ರಲ್ಲಿ ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಾವಿರಾರು ರೈತರೊಂದಿಗೆ ಕುಳಿತು ಥೂಥೂ ಎಂದು ಉಗಿಯುವ ಚಳವಳಿಯನ್ನು ನಡೆಸಿದ್ದರು.

ನಮಗೆ ಆಗದಿದ್ದವರಿಗೆ ಅಥವಾ ಕೋಪ ಬಂದವರ ಮೇಲೆ ಕ್ಯಾಕರಿಸಿ ಉಗಿಯಬೇಕು ಎಂದು ಹೇಳುವ ಮನಸ್ಥಿತಿಯೊಂದು ಇದೆಯೆಲ್ಲಾ ಅದೇ ಇದಕ್ಕೆ ಪ್ರೇರಣೆ. ಹೀಗಾಗಿ ಉಗುಳುವುದು ಪ್ರತಿಭಟನೆಯ ಅಸ್ತ್ರವಾಗಿಯೂ ನಮಗೆ ಇತಿಹಾಸದ ಪುಟಗಳಲ್ಲಿ ಕಂಡುಬರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.