ಮಂಗಳವಾರ, ಮೇ 24, 2022
30 °C

ಉಚಿತ ಅನುಚಿತ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣಾ ಪ್ರಣಾಳಿಕೆಯಲ್ಲಿ ಕೊಡುಗೆಗಳ ಮಹಾಪೂರ ಹರಿಸಿ ಮತದಾರರನ್ನು ಮರುಳು ಮಾಡುವ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ವಿಪರೀತಕ್ಕೆ ಹೋಗಿದೆ. ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಟಿ.ವಿ., ಲ್ಯಾಪ್‌ಟಾಪ್, ಮಿಕ್ಸರ್ ಗ್ರೈಂಡರ್, ಚಿನ್ನದ ತಾಳಿ ವಗೈರೆಗಳನ್ನು ಪುಕ್ಕಟೆಯಾಗಿ ಮತದಾರರ ಮನೆಬಾಗಿಲಿಗೇ ತಲುಪಿಸುವ ಭರವಸೆಗಳನ್ನು ಪ್ರಣಾಳಿಕೆಯಲ್ಲೇ ಅಳವಡಿಸತೊಡಗಿವೆ.

ಈ ಬಗೆಯ ಭರವಸೆ, ಚುನಾವಣೆ ಸಂದರ್ಭದಲ್ಲಿ ಮುಗ್ಧ ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ; ಚುನಾವಣಾ ಪ್ರಕ್ರಿಯೆ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಇರಬೇಕು ಎಂಬ ಆಶಯಕ್ಕೆ ಭಂಗ ತರುತ್ತದೆ ಎಂಬ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಉಚಿತ ಉಡುಗೊರೆಗಳ ಆಮಿಷಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವುದು ಇದೇ ನೆಲೆಯಲ್ಲಿ. ಇದಕ್ಕೆ ಕಡಿವಾಣ ಹಾಕಲು ಮಾರ್ಗಸೂತ್ರ ರೂಪಿಸುವಂತೆ ಚುನಾವಣೆ ಆಯೋಗಕ್ಕೆ ಕೋರ್ಟ್ ನೀಡಿರುವ ಸೂಚನೆ ಸಕಾಲಿಕವಾಗಿದೆ.

ಆಮಿಷ ಒಡ್ಡುವುದು, ಈಗ ಜಾರಿಯಲ್ಲಿರುವ ನಿಯಮಗಳ ಚೌಕಟ್ಟಿನಡಿ ಭ್ರಷ್ಟ ನಡೆ ಅನಿಸಿಕೊಳ್ಳುವುದಿಲ್ಲ ಮತ್ತು ಪ್ರಣಾಳಿಕೆಗಳಲ್ಲಿ ಅಳವಡಿಸುವ ವಿಷಯಗಳನ್ನು ನಿಯಂತ್ರಿಸಲು ನಿರ್ದಿಷ್ಟ ಕಾನೂನು ಸಹ ಇಲ್ಲ. ಈ ನ್ಯೂನತೆಯನ್ನು ಬಳಸಿಕೊಂಡು ರಾಜಕೀಯ ಪಕ್ಷಗಳು ಓಲೈಕೆ ಆಟದಲ್ಲಿ ತೊಡಗಿವೆ. ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಆದ್ಯತೆ ಹಾಗೂ ನೀತಿ-ನಿಯಮಗಳ ಕುರಿತು ತಮ್ಮ ಪಕ್ಷದ ಒಲವು-ನಿಲುವುಗಳನ್ನು ತಿಳಿಸಬೇಕಾದ ಪ್ರಣಾಳಿಕೆಗಳಲ್ಲಿ ಉಡುಗೊರೆಗಳೇ ಎದ್ದುಕಾಣುವಂತಾಗಿದೆ.

ಪಕ್ಷದಿಂದ ಪಕ್ಷಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಕಾಡಿನ ಬೆಂಕಿಯಂತೆ ಹಬ್ಬುತ್ತಿರುವ ಈ ಪಿಡುಗಿಗೆ ಕಡಿವಾಣ ಹಾಕುವುದು ತುರ್ತು ಆಗತ್ಯವಾಗಿದೆ. ಭ್ರಷ್ಟಾಚಾರದ ಮೂಲ ಚುನಾವಣೆಯೇ ಆಗಿದೆ. ಚುನಾವಣೆಗೆ ಹಣ ಸುರಿಯುವುದನ್ನು ಕೆಲವರು ಹೂಡಿಕೆ ಎಂದು ಭಾವಿಸಿದಂತಿದೆ. ಕೋಟಿಗಟ್ಟಲೆ ತೊಡಗಿಸಿದವರು ಗೆದ್ದು ಬಂದ ಬಳಿಕ ಬಾಚಿಕೊಳ್ಳಲು ಆರಂಭಿಸುತ್ತಾರೆ. ಚುನಾವಣಾ ಸುಧಾರಣೆಗಳ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆ ಆಗಬೇಕಾಗಿದೆ.

ಉಚಿತ ಉಡುಗೊರೆಗಳ ಸಾಧಕ-ಬಾಧಕಗಳೂ ಆ ಚರ್ಚೆಯ ಭಾಗವಾಗಬೇಕು. ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರ ಜತೆ ಸಮಾಲೋಚನೆಗೆ ಚುನಾವಣಾ ಆಯೋಗ ವೇದಿಕೆ ಒದಗಿಸಬೇಕು. ಮಾದರಿ ನೀತೆ ಸಂಹಿತೆಯಲ್ಲಿ ಪ್ರಣಾಳಿಕೆಗಳಿಗಾಗಿಯೇ ಪ್ರತ್ಯೇಕ ಮಾರ್ಗಸೂಚಿಯನ್ನು ಅಡಕಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ಮಾಡಿದೆ. ಆಯೋಗ ಈ ಕುರಿತು ಗಂಭೀರವಾಗಿ ಚಿಂತಿಸಬೇಕು.

ಪ್ರಣಾಳಿಕೆಗಳಿಗೂ ಚುನಾವಣಾ ಪ್ರಕ್ರಿಯೆಗೂ ನೇರ ಸಂಬಂಧ ಇರುವುದರಿಂದ ಈ ದಿಸೆಯಲ್ಲಿ ಆಯೋಗ ಕ್ರಮ ಕೈಗೊಳ್ಳಬೇಕು. ಕೊಡುಗೆಯ ವಾಗ್ದಾನಗಳಿಗೆ ಲಗಾಮು ಹಾಕಲು ಬಿಗಿಯಾದ ಕಾನೂನು ರೂಪಿಸುವ ಹೊಣೆ ಕೇಂದ್ರ ಸರ್ಕಾರದ ಮೇಲಿದೆ. ಇದರ ಅಗತ್ಯವನ್ನು ಕೇಂದ್ರ ಮನಗಾಣಬೇಕು.

ಇಲ್ಲದೇ ಹೋದಲ್ಲಿ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಸೂಚಿ ನೇಪಥ್ಯಕ್ಕೆ ಸರಿದು ಉಡುಗೊರೆಗಳ ಮೇಲಾಟವೇ ಮುಖ್ಯವೆನಿಸಬಹುದು. ತಮ್ಮ ಮನೆ ಬಾಗಿಲಿಗೆ ನೇರವಾಗಿ ತಲುಪುವ ಇಂತಹ ಪುಡಿ `ಕಾಣಿಕೆ'ಗಳಲ್ಲಿಯೇ ಮತದಾರರೂ ಹಿತಾನುಭವ ಕಂಡರೆ ಬೊಕ್ಕಸದ ಹಣ, ಉಡುಗೊರೆಗಳ ಖರೀದಿಗೇ ಸಾಲದೇ ಹೋಗುವ ಸ್ಥಿತಿ ಎದುರಾದರೂ ಆಶ್ಚರ್ಯಪಡಬೇಕಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.