ಮಂಗಳವಾರ, ಮೇ 24, 2022
30 °C

ಉಜ್ಜಯನಿ ಸದ್ಧರ್ಮಪೀಠದ ಶ್ರೀ ಲಿಂಗೈಕ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯನಿ ಸದ್ಧರ್ಮ ಪೀಠದ ಜಗದ್ಗುರು ಮರುಳಸಿದ್ದೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ (46) ತೀವ್ರ ಅನಾರೋಗ್ಯದಿಂದಾಗಿ ಸೋಮವಾರ ರಾತ್ರಿ ಲಿಂಗೈಕ್ಯರಾದರು.

ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಇತ್ತೀಚೆಗಷ್ಟೇ ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಆದರೆ, ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದ ಶ್ರೀಗಳ ಆರೋಗ್ಯ ಸ್ಥಿತಿಯಲ್ಲಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ದೆಹಲಿಯಿಂದ ತೋರಣಗಲ್ ಬಳಿಯ ಜಿಂದಾಲ್ ಉಕ್ಕಿನ ಕಾರ್ಖಾನೆಯ ವಿಮಾನ ನಿಲ್ದಾಣಕ್ಕೆ ಕರೆತಂದು, ಅಲ್ಲಿಂದ ರಸ್ತೆಯ ಮೂಲಕ ರಾತ್ರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಉಜ್ಜಯನಿ ಪೀಠಕ್ಕೆ ತಲುಪಿಸಲಾಗಿತ್ತು. ಉಜ್ಜಯನಿ ತಲುಪಿದ ಕೆಲವೇ ಕ್ಷಣಗಳಲ್ಲಿ ಶ್ರೀಗಳು ಲಿಂಗೈಕ್ಯರಾಗಿದ್ದಾಗಿ ಘೋಷಿಸಲಾಯಿತು. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ವಿಷಯ ಸೋಮವಾರ ಬೆಳಿಗ್ಗೆ ತಿಳಿಯುತ್ತಿದ್ದಂತೆಯೇ, ಭಕ್ತಸಮೂಹ ತೀವ್ರ ಆಘಾತಕ್ಕೆ ಒಳಗಾಗಿದ್ದು,  ಉಜ್ಜಯನಿ ಗ್ರಾಮವಿಡೀ ಮೌನಕ್ಕೆ ಶರಣಾಗಿದೆ.

ಶ್ರೀಗಳು 1995ರ ನವೆಂಬರ್ 5ರಂದು ಅಂದಿನ ಮುಖ್ಯಮಂತ್ರಿ ದೇವೇಗೌಡ ಅವರ ಸಮ್ಮುಖದಲ್ಲಿ ಉಜ್ಜಯನಿ ಸದ್ಧರ್ಮ ಪೀಠಕ್ಕೆ ಸ್ಥಿರ ಪಟ್ಟಾಧ್ಯಕ್ಷರಾಗಿ ನೇಮಕಗೊಂಡಿದ್ದರು. ನಂತರ ಶ್ರೀಪೀಠವು ಕ್ಷಿಪ್ರಗತಿಯಲ್ಲಿ ಪ್ರಗತಿ ಕಂಡಿತು.

ಆರೋಗ್ಯ ದಿನೇದಿನೇ ಹದಗೆಟ್ಟಿದ್ದರಿಂದ ಅನೇಕ ಕಡೆಗಳಲ್ಲಿ ಚಿಕಿತ್ಸೆ ನೀಡಿದರೂ ಸುಧಾರಣೆ ಕಂಡುಬರಲಿಲ್ಲ. ಶ್ರೀಗಳ ಅಂತ್ಯಕ್ರಿಯೆಯು ಮಂಗಳವಾರ ಸಂಜೆ 4.30ಕ್ಕೆ ಉಜ್ಜಯನಿಯ ಸಿದ್ದರವನದಲ್ಲಿ ವಿವಿಧ ಮಠಾಧೀಶರ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಲಿದೆ ಎಂದು ಮಠದ ಮೂಲಗಳು ಹೇಳಿವೆ.

ಹಿನ್ನೆಲೆ: 1965ರಲ್ಲಿ ಆಂಧ್ರಪ್ರದೇಶದ ಡಿ.ಹಿರೇಹಾಳ್ ಗ್ರಾಮದಲ್ಲಿ ಸಿದ್ದಯ್ಯ ಮತ್ತು ಚೆನ್ನಬಸಮ್ಮ ದಂಪತಿಳ ಪುತ್ರನಾಗಿ ಜನಿಸಿದ್ದ ಶ್ರೀಗಳ ಮೂಲನಾಮ ಬಸವರಾಜ.  ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ನಂತರ, ತಾಯಿಯ ತವರೂರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮಕ್ಕೆ ಬಂದು ಅಲ್ಲಿನ ಮಠದ ಸ್ವಾಮೀಜಿಯವರಿಂದ ಸಂಸ್ಕೃತ ವಿದ್ಯಾಭ್ಯಾಸ ಮಾಡಿ, ಅದೇ ಮಠದ ಮರಿ ಸ್ವಾಮಿಯಾಗಿ ನೇಮಕಗೊಂಡಿದ್ದರು.

1995ರಲ್ಲಿ ಉಜ್ಜಯನಿ ಪೀಠದ ಸಿದ್ದೇಶ್ವರ ಶಿವಾಚಾರ್ಯರ ಶಿಷ್ಯರಾಗಿ, ಪೀಠದ 111ನೇ ಜಗದ್ಗುರುವಾಗಿ ಪಟ್ಟಕ್ಕೇರಿದ್ದರಲ್ಲದೆ, ಸಂಸ್ಕೃತ ವಿಷಯದಲ್ಲಿ ಕಾಶಿಯ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಶ್ರೀಗಳು ಪಡೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.