ಬುಧವಾರ, ಜೂನ್ 16, 2021
21 °C

ಉಡುಪಿ ಜಿಲ್ಲೆ: ಶೇ 72.15 ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಭಾನುವಾರ ನಡೆದ ಉಪ ಚುನಾವಣೆ ಮತದಾನ ಪ್ರಕ್ರಿಯೆ ಭಾನುವಾರ ಶಾಂತಿಯುತವಾಗಿ ಪೂರ್ಣಗೊಂಡಿದ್ದು ಉಡುಪಿ ಜಿಲ್ಲೆಯಲ್ಲಿ ಶೇ. 72.15 ಮತದಾನವಾಗಿದೆ.

ಜ್ಲ್ಲಿಲೆಯ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ. 73.08, ಉಡುಪಿ ಕ್ಷೇತ್ರದಲ್ಲಿ 71.98, ಕಾಪು ಕ್ಷೇತ್ರದಲ್ಲಿ 69.51ಹಾಗೂ ಕಾರ್ಕಳ ಕ್ಷೇತ್ರದಲ್ಲಿ  74.04 ಮತದಾನವಾಗಿದೆ.ನಗರದ ಮತದಾರರು ಉತ್ಸಾಹದಿಂದ ಮತ ದಾನದಲ್ಲಿ ಪಾಲ್ಗೊಂಡರೆ, ಗ್ರಾಮೀಣ ಪ್ರದೇಶದಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂತು. ಬೆಳಗಿನ ಹೊತ್ತಿನಲ್ಲಿ ಸಾಧಾರಣವಾಗಿದ್ದ ಮತದಾನ ಸಂಜೆಯಾಗುತ್ತಿದ್ದಂತೆ ಒಂದಿಷ್ಟು ವೇಗ ಪಡೆದುಕೊಂಡಿತು.

 

ಬೆಳಿಗ್ಗೆ 11 ಗಂಟೆ ಸುಮಾರಿಗೆ ಜಿಲ್ಲೆಯಲ್ಲಿ  ಶೇ 14ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆ 10.15ಕ್ಕೆ ಪೆರ್ಡೂರಿನ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶೇ 20 ರಷ್ಟು ಮತದಾನವೂ ಆಗಿರಲಿಲ್ಲ. ಮಧ್ಯಾಹ್ನ 2.30ರ ಹೊತ್ತಿಗೆ ಉಡುಪಿಯ ಪುತ್ತೂರಿನಲ್ಲಿ ಶೇ 55ರಷ್ಟು, ನಿಟ್ಟೂರಿನಲ್ಲಿ ಶೆ 65ರಷ್ಟು ಮತದಾನವಾಗಿತ್ತು. ಉಡುಪಿ ನಗರದಲ್ಲಿ ಶೇ 75ಕ್ಕೂ ಹೆಚ್ಚು ಮತದಾನವಾಗಿತ್ತು. ನಕ್ಸಲ್ ಪೀಡಿತ ಪ್ರದೇಶ: ಸಾಧಾರಣ ಮತದಾನ: ಒಂದು ಕಡೆಯಲ್ಲಿ ಎತ್ತರದ ಗಿರಿ ಶಿಖರಗಳು, ಇನ್ನೊಂದೆಡೆ ದಟ್ಟ ಕಾಡಿನ ಹಾದಿ, ನಡುವೆ ಹರಡಿಕೊಂಡಿರುವ ಜಿಲ್ಲೆಯ ಗಡಿ ಭಾಗಗಳ ನಕ್ಸಲ್ ಪೀಡಿತ ಪ್ರದೇಶದ ಮತದಾರರಲ್ಲಿ ಮತ ಚಲಾಯಿಸಲು ಹೆಚ್ಚಿನ ಹುರುಪು ಇದ್ದಂತೆ ತೋರಲಿಲ್ಲ. ನಕ್ಸಲ್ ಪೀಡಿತ ಪ್ರದೇಶದ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಿದ್ದು ಭಾನು ವಾರ `ಪ್ರಜಾವಾಣಿ~ ಅಲ್ಲಿಗೆ ಭೇಟಿ ನೀಡಿದಾಗ ಕಂಡು ಬಂತು. ಅತಿಸೂಕ್ಷ್ಮ ಮತಗಟ್ಟೆ ಎಂದು ಗುರು ತಿಸಲಾಗಿದ್ದ ಹೆಬ್ರಿ ಬ್ಲಾಕ್‌ನ ಸೀತಾನದಿ ಪ್ರದೇಶದಲ್ಲಿ  ಒಟ್ಟು 507 ಮತದಾರರಿದ್ದು, ಬೆ.11.15ಕ್ಕೆ ಶೇ 50ರಷ್ಟು ಮತದಾನವಾಗಿತ್ತು.  346 ಮತದಾರರಿರುವ ನಾಡ್ಪಾಲು ಪ್ರದೇಶದಲ್ಲಿ ಬೆ.11.30ಕ್ಕೆ ಶೇ 47ರಷ್ಟು ಮತದಾನವಾಗಿತ್ತು. ಇನ್ನೊಂದು ನಕ್ಸಲ್ ಪೀಡಿತ ಸೂಕ್ಷ್ಮ ಪ್ರದೇಶವಾದ ಗಡಿಭಾಗದ ಸೋಮೇಶ್ವರದಲ್ಲಿ ಒಟ್ಟು 1196 ಮತದಾರರಿದ್ದು ಅಲ್ಲಿ 12 ಗಂಟೆಯ ಹೊತ್ತಿಗೆ ಶೇ 35ರಷ್ಟು  ಮತದಾನವಾಗಿತ್ತು.

 

ಮಡಾಮಕ್ಕಿ ಮತಗಟ್ಟೆಯಲ್ಲಿ ಒಟ್ಟು 674 ಮತದಾರರಿದ್ದು ಮ.12.30ಕ್ಕೆ ಶೇ 50ರಷ್ಟು ಮತದಾನವಾಗಿತ್ತು. ಯಾವ ಮತಗಟ್ಟೆ ಬಳಿಯೂ ತಂಡೋಪತಂಡವಾಗಿ ಜನರು ಕಾಣಿಸಿಕೊಳ್ಳಲಿಲ್ಲ. ಎಲ್ಲೆಡೆ ಮತದಾರರು ಗೊಂದಲಕ್ಕೆ ಆಸ್ಪದವಿಲ್ಲದಂತೆ ಶಾಂತಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾರರು ಬೂತ್‌ಗೆ ಬರಲಿಕ್ಕೆ ಹಿಂಜರಿಯುವಷ್ಟರಮಟ್ಟಿಗೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿತ್ತು. `ನಮಗೆ ಇಷ್ಟೊಂದು ಬಂದೂಕಿನ ಭದ್ರತೆಯಲ್ಲಿ ಮತಗಟ್ಟೆಗೆ ಬರಲಿಕ್ಕೆ ಭಯ, ಹೀಗಾಗಿ ಮತ ಹಾಕುವುದೇ ಬೇಡವೇನೋ ಎಂದೆಣಿಸಿತ್ತು~ ಎಂದು ನಕ್ಸಲ್ ಪೀಡಿತ ಪ್ರದೇಶದ ಸೀತಾನದಿ ಕೃಷ್ಣ ಹಿಂಜರಿಕೆ ಯಿಂದಲೇ ಹೇಳಿಕೊಂಡರು.ಯಾರು ಆರಿಸಿ ಬಂದರೂ ಅಷ್ಟೆ ಎನ್ನು ವಿಷಾದವನ್ನು ಬಂಗಾರಗುಡ್ಡೆಯ ಸಾಧು ಹೆಗ್ಡೆ ತೋಡಿ ಕೊಂಡರು. `ಯಾರು ಗೆದ್ದರೂ ನಕ್ಸಲ್ ಬಾಧಿತ ಪ್ರದೇಶದ ಸ್ಥಿತಿಯೇನೂ ಸುಧಾರಣೆ ಆಗುವುದಿಲ್ಲ. ಈ ಭಾಗದಲ್ಲಿ  ಸುಮಾರು 200 ಮನೆ ಇದೆ ಕುಡಿಯಲು ಸರಿಯಾಗಿ ನೀರಿಲ್ಲ. ರಸ್ತೆ ಆಗಿಲ್ಲ, ಮತ್ತೆ ಏಕೆ ಮತ ಹಾಕಬೇಕು ಮಾರಾಯ್ರೆ?~ ಎಂದು ನೋವಿನಿಂದಲೇ ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.