ಶುಕ್ರವಾರ, ಮೇ 27, 2022
21 °C

ಉಡುಪಿ: ನುಡಿತೇರಿಗೆ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಕನ್ನಡ ಜಾಗೃತಿಗಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ನುಡಿ ತೇರು ಜಾಗೃತಿ ಜಾಥಾ ತೇರು ಶನಿವಾರ ಬೆಳಿಗ್ಗೆ ಉಡುಪಿ ತಾಲ್ಲೂಕು ಪ್ರವೇಶಿಸಿದಾಗ ಸ್ಥಳೀಯ ಶಾಸಕರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸ್ಥಳೀಯರು ಬರಮಾಡಿಕೊಂಡರು. ಆದರೆ ನಗರದ ಜನತೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು. ನಂತರ ನಗರ ಬೋರ್ಡ್ ಹೈಸ್ಕೂಲ್ ಬಳಿಯಿಂದ 10 ಗಂಟೆಗೆ ಮೆರವಣಿಗೆ ಜಾಥಾ ಪ್ರಾರಂಭವಾಯಿತು. ಹಲಗೆ ಕುಣಿತ, ಡೊಳ್ಳು ಕುಣಿತ, ಹೂವಿನಕೋಲು, ಪೂಜಾ ಕುಣಿತ, ನಂದಿಧ್ವಜ ಹಿಡಿದ ವಿವಿಧ ಜಾನಪದ ಕಲಾ ತಂಡಗಳನ್ನು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದಲೇ ಕರೆತರಲಾಗಿತ್ತು. ಅವರೊಂದಿಗೆ ಸ್ಥಳೀಯ ಕಲಾತಂಡಗಳು, ಮಹಿಳಾ ಚೆಂಡೆ ಮದ್ದಳೆ, ಸ್ಕೌಟ್ಸ್, ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 200 ಮಂದಿ ಜಾನಪದ ಕಲಾವಿದರು ಭಾಗವಹಿಸಿದರು.ಬೋರ್ಡ್ ಹೈಸ್ಕೂಲ್ ಬಳಿಯಿಂದ ಕೆಂ.ಎಂ.ಮಾರ್ಗ ಮೂಲಕ ಸಾಗಿ ಬಂದ ಮೆರವಣಿಗೆ ಡಯಾನ ವೃತ್ತ, ತಾಲ್ಲೂಕು ಕಚೇರಿ ಎದುರಿನಿಂದ ಸಾಗಿ ಜೋಡುಕಟ್ಟೆ ಬಳಿ ಸಮಾಪನಗೊಂಡಿತು.  ನುಡಿತೇರಿನಲ್ಲಿ ಮುಖ್ಯಮಂತ್ರಿ ಚಂದ್ರು, ಶಾಸಕ ರಘುಪತಿ ಭಟ್, ಅಂಬಾತನಯ ಮುದ್ರಾಡಿ, ಡಾ.ಗಣನಾಥ ಎಕ್ಕಾರು, ಕಟಪಾಡಿ ಶಂಕರ ಪೂಜಾರಿ, ದೇವದಾಸ್ ಹೆಬ್ಬಾರ್ ಮತ್ತಿತರರು ಇದ್ದರು.ನಗರದಲ್ಲಿ ನುಡಿತೇರು ಹಾದು ಬರುವಾಗ ಕನ್ನಡ ನಾಮಫಲಕ ಇಲ್ಲದ ಅಂಗಡಿಗಳ ಮುಂದೆ ಬರುತ್ತಿದ್ದಾಗ ನಾಮಫಲಕ ಕನ್ನಡದಲ್ಲಿ ಹಾಕುವಂತೆ ಮೈಕ್‌ನಲ್ಲಿ ಸೂಚಿಸಲಾಯಿತು. ಆದರೆ ಈ ಮೆರವಣಿಗೆಯಲ್ಲಿ ಸಾರ್ವಜನಿಕರು ಮಾತ್ರ ಪಾಲ್ಗೊಳ್ಳಲಿಲ್ಲ.ಜನರು ಅಂಗಡಿ ಮುಂಗಟ್ಟುಗಳಿಂದ, ಕಟ್ಟಡಗಳಿಂದ ಇಣುಕಿ ನೋಡಿದರಷ್ಟೇ.ಸಭಾ ಕಾರ್ಯಕ್ರಮವಿದ್ದ ಅಂಬಲಪಾಡಿ ದೇವಸ್ಥಾನದ ಸಭಾಂಗಣದಲ್ಲಿ ಕೂಡ ಸಾರ್ವಜನಿಕ ಸಂಖ್ಯೆ  ಕಡಿಮೆಯಾಗಿತ್ತು. ಸ್ಥಳೀಯ ಟಿಸಿಎಚ್ ಕಾಲೇಜಿನ ವಿದ್ಯಾರ್ಥಿಗಳಿಂದಾಗಿ ಹಾಲ್ ಭರ್ತಿಯಾದಂತೆ ಕಂಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.