ಭಾನುವಾರ, ಜನವರಿ 26, 2020
18 °C

ಉತ್ತಮ ಧರ್ಮಾಚರಣೆಗೆ ತಡೆ: ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ‘ಧರ್ಮದ ಹೆಸರಿನಲ್ಲಿ ಎಲ್ಲಾ ಸಮುದಾಯದ ಜನರ ಹಾದಿ ತಪ್ಪಿಸುವ ಕಂದಾಚರಣೆಗಳನ್ನು ವಿರೋಧಿಸಬೇಕು. ಆದರೆ, ಮೂಢನಂಬಿಕೆಗಳ ಹೆಸರಿನಲ್ಲಿ ಉತ್ತಮ ಧರ್ಮಾಚರಣೆಗಳನ್ನು ತಡೆ ಹಿಡಿಯಲಾಗುತ್ತಿದೆ’ ಎಂದು ತಾಲ್ಲೂಕಿನ ಸುಕ್ಷೇತ್ರ ನಂದೀಪುರ ಮಹೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ತಾಲ್ಲೂಕಿನ ಹಂಚಿನಾಳು ಗ್ರಾಮದ ವಿವಿಧೆಡೆ ಬುಧವಾರ ಕರಗಲ್ಲು ಪ್ರತಿಷ್ಠಾಪನೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಆಧುನಿಕತೆಯ ಗುಂಗಿನಲ್ಲಿ ಬದುಕು ಯಾಂತ್ರಿಕವಾಗುತ್ತಿರುವ ಸಂಕೀರ್ಣ ಸಂದರ್ಭದಲ್ಲಿ ಧರ್ಮಾಚರಣೆಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರೆಯುವ ಜೊತೆಗೆ ಸದ್ವಿಚಾರ ಹಾಗೂ ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಕೊಳ್ಳಬಹುದು ಎಂದು ನುಡಿದರು ನಮ್ಮ ದೇಶದ ಸಂಸ್ಕೃತಿ ಹಾಗೂ ಧರ್ಮವನ್ನು ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡಿ ಮೆಚ್ಚಿಕೊಂಡಿದೆ. ಆದರೆ, ಕೆಲವು ಆಷಾಢಭೂತಿ ಸ್ವಯಂಘೋಷಿತ ಬುದ್ಧಿಜೀವಿಗಳು ಸಮಾಜದ ಸ್ವಾಸ್ಥ್ಯ ಹಾಳುಗೆಡವಲೆತ್ನಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಕರಿಬಸವನಗೌಡರ್‌ ಮಾತನಾಡಿ, ನಾವೆಲ್ಲರೂ ಗಳಿಸಿದ್ದರಲ್ಲಿ ಅಲ್ಪ ಭಾಗವನ್ನಾದರೂ ಧಾರ್ಮಿಕ ಶಾಂತಿಗಾಗಿ ಹಾಗೂ ಸಮಾಜದ ಒಳಿತಿಗಾಗಿ ಖರ್ಚು ಮಾಡ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಾನ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ ಮಾನಸಿಕ ನೆಮ್ಮದಿ ಹಾಗೂ ಶಾಂತಿಯನ್ನು ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.ಕರಗಲ್ಲು ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳನ್ನು ಚಾನುಕೋಟಿ ಚನ್ನಬಸವಯ್ಯ ಶಾಸ್ತ್ರಿ ಮತ್ತು ಕರಿ ನಿಂಗಪ್ಪ ನಿರ್ವಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್‌.ಜೆ. ಚನ್ನಬಸವರಾಜು, ಮುಖಂಡರಾದ ಎನ್‌.ಜೆ. ಕರಿಬಸಪ್ಪ, ಶಿಕ್ಷಕ ಡಿ.ಬೆಟ್ಟಪ್ಪ, ಗ್ರಾಮದ ಮುಖಂಡರಾದ ನಿಂಗಪ್ಪ, ಜಂಬಗಿ ನಾಗಪ್ಪ, ಕನ್ನಿಹಳ್ಳಿ ಕೊಟ್ರಪ್ಪ, ಶಿವಾನಂದಪ್ಪ, ಮೂಗಪ್ಪ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)