ಗುರುವಾರ , ಮೇ 19, 2022
21 °C

ಉತ್ತಮ ಬೆಟ್ಟ ಪ್ರಶಸ್ತಿ ನೀಡಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಉತ್ತಮ ರೀತಿಯಲ್ಲಿ ಬೆಟ್ಟ ಅಭಿವೃದ್ಧಿಪಡಿಸಿದ ರೈತರನ್ನು ಗುರುತಿಸಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಇಲ್ಲಿಯ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಂದಾ ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಜೊತೆ ಈ ಯೋಜನೆ ಹಮ್ಮಿಕೊಳ್ಳಲಾಗಿದ್ದು ಕೃಷಿ ಜಯಂತಿ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದರು.ಬೆಟ್ಟ ಭೂಮಿ ಅಭಿವೃದ್ಧಿಗಾಗಿ ಸರಕಾರ ಕ್ಯಾಬಿನೆಟ್ ಉಪಸಮಿತಿಯನ್ನು ರಚನೆ ಮಾಡಿದೆ. ಈ ಉಪ ಸಮಿತಿ ರಚಿಸಿರುವುದಕ್ಕೆ  ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸುವುದಾಗಿ ಆಶೀಸರ ಹೇಳಿದರು.ಬೆಟ್ಟ ಅಭಿವೃದ್ಧಿಯ ಬಗ್ಗೆ ಈಗಾಗಲೇ ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಕಳೆದ ಒಂದೂವರೆ ವರ್ಷದ ಹಿಂದೆ ಭೈರುಂಬೆಯಲ್ಲಿ ರೈತ ತಜ್ಞರ ಕಾರ್ಯಾಗಾರ ನಡೆಸಿ ಚರ್ಚಿಸಲಾಗಿತ್ತು. ಶಿರಸಿ ಮತ್ತು ಬೆಂಗಳೂರಿನ ಅರಣ್ಯ ಭವನ, ಸಾಗರ, ಶೃಂಗೇರಿ ಹಾಗೂ ಮಡಿಕೇರಿಗಳಲ್ಲಿ ಬೆಟ್ಟ ಅಭಿವೃದ್ಧಿಯ ಬಗ್ಗೆ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ ಎಂದರು.ಕ್ಯಾಬಿನೆಟ್ ಉಪ ಸಮಿತಿಯು ಮಾ.8ರಂದು ಸಭೆ ಸೇರುತ್ತಿದೆ. ಬೆಟ್ಟ ಅಭಿವೃದ್ಧಿಯ ಬಗ್ಗೆ ಈಗಾಗಲೇ ನಡೆದಿರುವ ಪ್ರಯತ್ನಗಳ ವರದಿಯನ್ನು ಸಭೆಗೆ ನೀಡಲಾಗುವುದು ಅಲ್ಲದೆ ಈ ಬಗ್ಗೆ ಶಿಫಾರಸು ನೀಡಲಾಗುತ್ತಿದೆ ಎಂದು ಆಶೀಸರ ತಿಳಿಸಿದರು.ಪಶ್ಚಿಮಘಟ್ಟ ಕಾರ್ಯಪಡೆ ಹೈನುಗಾರಿಕೆ ಹಾಗೂ ಮೇವು ವೃಕ್ಷಗಳ ಅಭಿವೃದ್ಧಿ ಕುರಿತು ಯಲ್ಲಾಪುರದಲ್ಲಿ ಮಾ. 19ರಂದು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಯಜ್ಞ ವೃಕ್ಷಗಳ ಸಂರಕ್ಷಣೆಯ ಮತ್ತು ಅಭಿವೃದ್ಧಿಯ ಬಗ್ಗೆ ಹೊನ್ನಾವರ ಕವಲಕ್ಕಿ ಸಂಸ್ಕೃತಿ ಕಾಲೇಜಿನಲ್ಲಿ ಗೋಷ್ಠಿ ಆಯೋಜಿಸಲಾಗಿದೆ ಎಂದರು.  ವಿವಿಧ ದೇವಾಲಯಗಳ ಜೊತೆಗೂಡಿ ಪವಿತ್ರವನ ನಿರ್ಮಾಣ ಕುರಿತು ಸಮಾಲೋಚನಾ ಸಭೆಯನ್ನು ಹೇರೂರ ದೇವಸ್ಥಾನದಲ್ಲಿ  ನಡೆಸಲು ಉದ್ದೇಶಿಸಲಾಗಿದೆ. ಪವಿತ್ರವನ ಮತ್ತು ಔಷಧಿ ಸಸ್ಯಗಳನ್ನು ತಯಾರಿಸಿ ವಿತರಿಸಲು ವಿಶೇಷ ಸರಕಾರಿ ಕಾರ್ಯಕ್ರಮಗಳನ್ನು ಒಂಬತ್ತು ಜಿಲ್ಲೆಗಳಲ್ಲಿ ಕೈಗೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ 25 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ ಎಂದರು.

ಅರಣ್ಯ ಕಾಲೇಜಿನ ಡೀನ್ ಡಾ. ಜನಗೌಡರ್, ಡಾ. ಆರ್.ವಾಸುದೇವ, ಡಾ. ವಿ.ಎಸ್.ಸೊಂದೆ, ಅರ್ಥವಾಚ್ ಸಂಸ್ಥೆಯ ಪ್ರಭಾರಕ ಭಟ್, ನರೇಂದ್ರ ಹೊಂಡಗಾಶಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.