ಸೋಮವಾರ, ಜೂನ್ 14, 2021
24 °C

ಉತ್ಸಾಹದ ಪುಟದಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ಸಾಹದ ಪುಟದಲಿ...

ಹೀಗೂ ಉಂಟೇ? ಹಾಡಿನ ಸಾಹಿತ್ಯವೇ ಸಿದ್ಧವಾಗಿರಲಿಲ್ಲ. ಆಗಲೇ `ಮನಸಿನ ಪುಟದಲಿ~ ಚಿತ್ರದ ನಿರ್ದೇಶಕ ಪ್ರಶಾಂತ ಕೆ.ಶೆಟ್ಟಿ ನೃತ್ಯ ಸಂಯೋಜನೆಗೆ ಮನಸ್ಸು ಮಾಡಿದ್ದರು.ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಲು ಬಂದ ಶಶಿ ಆರಕ್ಷಕ್ ಅವರ ಕೈಯಲ್ಲೇ ಹಾಡಿಗೆ ಸಾಹಿತ್ಯ ಬರೆಸಲು ಮುಂದಾದರು! ಸರಿ ಕುಳಿತಲ್ಲೇ ಸಾಹಿತ್ಯ ಒದಗಿಸುವ ಸರದಿ ಶಶಿ ಅವರಿಗೆ. ಅರ್ಧಗಂಟೆಗೊಂದರಂತೆ ಚಿತ್ರದ ಮೂರು ಹಾಡುಗಳು ಸಿದ್ಧವಾದವು; ಅದೂ ಕಾರಿನಲ್ಲಿ ಓಡಾಡುವಾಗ. ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ಸ್ವತಃ ನಿರ್ದೇಶಕರು ಸಾಹಿತ್ಯ ರಚನೆಕಾರರು ಹೇಳಿಕೊಂಡ ಅನುಭವ ಇದು.ಚಿತ್ರದ ಮುಹೂರ್ತ ಆರಂಭವಾಗಿತ್ತು. ಆದರೂ ನಿರ್ಮಾಪಕರು ಯಾರು ಎಂಬುದು ಖಚಿತವಾಗಿರಲಿಲ್ಲ! ಕಡೆಗೆ ಮೈಸೂರಿನ ಅವರ ಸಂಬಂಧಿ ಸುನಂದ ಶಾಮಣ್ಣಶೆಟ್ಟಿ ಚಿತ್ರಕ್ಕೆ ಹಣ ಹೊಂದಿಸಿದರು. ಐದಾರು ವರ್ಷಗಳ ಹಿಂದೆಯೇ ಸಿನಿಮಾ ಮಾಡಬೇಕು ಎಂದು ಬಂದ ಪ್ರಶಾಂತ್ ಅವರಿಗೆ ಸಂಗೀತ ನಿರ್ದೇಶಕ ರಾಜ್‌ನಾರಾಯಣ್ ದಾಸ್ ಬುದ್ಧಿಮಾತು ಹೇಳಿದ್ದರು. ಸಿನಿಮಾ ಹುಚ್ಚು ಬಿಟ್ಟು ಒಂದೊಳ್ಳೆ ಕೆಲಸ ಹಿಡಿದು ಆರಾಮವಾಗಿ ಜೀವನ ಕಳೆಯುವಂತೆ ಸೂಚಿಸಿದ್ದರು.

 

ಆದರೆ ಸಿನಿಮಾ ಒಂದೇ ಪ್ರಶಾಂತರ `ಮನಸಿನ ಪುಟದಲಿ~ ಅಚ್ಚಳಿಯದೆ ಉಳಿದಿತ್ತು. 2010ರ ಜುಲೈನಲ್ಲಿ ಆರಂಭವಾದ ಚಿತ್ರ ಈಗ ಮುಕ್ತಾಯ ಹಂತ ತಲುಪಿದೆ.

ಪ್ರೀತಿ ಒಡೆದು ಹೋದರೆ ಯಾರಾದರೂ ಭಯೋತ್ಪಾದಕರಾಗುತ್ತಾರೆಯೇ? ಅದು ಚಿತ್ರದಲ್ಲಿ ಸಾಧ್ಯವಾಗಿದೆ. ಭಗ್ನಪ್ರೇಮಿಯಾಗುವ ನಾಯಕಿ ಕಡೆಗೆ ಹಿಡಿಯುವುದು ಶಸ್ತ್ರವನ್ನು.ಅಲ್ಲಿಗೆ ಬಂದೂಕಿನ ಬಾಯಲ್ಲಿ ಗುಬ್ಬಚ್ಚಿ ಗೂಡು ಕಟ್ಟುವುದು ದೂರದ ಮಾತು! ಇದೊಂದು ನಾಯಕಿ ಪ್ರಧಾನ ಚಿತ್ರ. ಹೊಸ ಮುಖಗಳನ್ನು ಹೊತ್ತ ಚಿತ್ರ ಚೆನ್ನಾಗಿ ಮೂಡಿ ಬರುತ್ತದೆ ಎಂಬ ನಂಬಿಕೆ ಪ್ರಶಾಂತ್ ಅವರಿಗೆ ಇರಲಿಲ್ಲ. ಆದರೆ ಚಿತ್ರತಂಡ ಆ ನಂಬಿಕೆಯನ್ನು ಹುಸಿಗೊಳಿಸಿದೆಯಂತೆ.ಹಿರಿಯ ನಟ ಚೇತನ್ ರಾಮರಾವ್ ನಾಯಕಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು ಇದು 301ನೇ ಸಿನಿಮಾ. ಜತೆಗೆ ಅವರು ಚಿತ್ರರಂಗ ಪ್ರವೇಶಿಸಿ ಈಗ ಸರಿಯಾಗಿ ಐವತ್ತು ವರ್ಷಗಳು ತುಂಬುತ್ತವೆ. `ಆಪ್ತರಕ್ಷಕ~ ಚಿತ್ರದ ನಂತರದ ಸುದೀರ್ಘ ವಿರಾಮದ ಬಳಿಕ ಅವರು ನಟಿಸುತ್ತಿರುವ ಚಿತ್ರ ಇದು. ಚಿತ್ರದಲ್ಲಿ ದುರಂತವೂ ಇದೆ ಎಂದರು ಅವರು.ನಾಯಕಿ ಸಾವನ್ನಪ್ಪುತ್ತಾಳೆ ಎಂಬ ಪ್ರೇಕ್ಷಕರ ನಿರೀಕ್ಷೆಯನ್ನು ಚಿತ್ರ ಹುಸಿಯಾಗಿಸಿದೆಯಂತೆ. ಆಕೆಯನ್ನು ಹೆತ್ತ ಅಪ್ಪ ಅಮ್ಮಂದಿರೇ ಆತ್ಮಹತ್ಯೆಗೆ ಶರಣಾಗುತ್ತಾರಂತೆ. ಚಿತ್ರರಂಗಕ್ಕೆ ಕಾಲಿಡುವ ಕಿರಿಯರನ್ನು ಪ್ರೋತ್ಸಾಹಿಸುವ ಜತೆಗೆ ಹಿರಿಯರನ್ನೂ ಬೆಂಬಲಿಸಬೇಕು ಎನ್ನುತ್ತ ಅವರು ಮಾತು ಮುಗಿಸಿದರು.ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಕಿವಿಮಾತೊಂದನ್ನು ಹೇಳಿದರು. `ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಇಡೀ ಚಿತ್ರತಂಡ ಒಮ್ಮೆ ಚಿತ್ರವನ್ನು ವೀಕ್ಷಿಸುವುದು ಒಳಿತು. ಯಾವುದು ಬೇಡ ಅನ್ನಿಸುತ್ತದೆಯೋ ಅಂತಹ ಭಾಗಗಳನ್ನು ತೆಗೆದುಹಾಕಿ ಮರು ಚಿತ್ರೀಕರಣಕ್ಕೆ ಮುಂದಾಗಬೇಕು.ಎಲ್ಲಾ ಸರಿಯಾದ ನಂತರವಷ್ಟೇ ಪ್ರೇಕ್ಷಕರ ಮುಂದೆ ಬರಬೇಕು~ ಎನ್ನುವುದು ಅವರ ಮನವಿ. ಚಿತ್ರದ ನಾಯಕಿ ರಕ್ಷಾ ಮೂಲತಃ ಮೈಸೂರಿನವರು. ಮಾಡೆಲಿಂಗ್ ಜಗತ್ತಿನಿಂದ ಸಿನಿಮಾ ಪ್ರಪಂಚಕ್ಕೆ ಜಿಗಿದಾಕೆ. `ಚಿತ್ರದಲ್ಲಿ ಅಳುವ ಸನ್ನಿವೇಶ ಬಂದಾಗ ನಿರ್ದೇಶಕರನ್ನು ಬೈಯುವಂತೆ ಕೇಳಿಕೊಳ್ಳುತ್ತಿದ್ದೆ. ಆಗಷ್ಟೇ ನಾನು ಭಾವುಕಳಾಗಲು ಸಾಧ್ಯವಾಗುತ್ತಿತ್ತು~ ಎಂಬ ವಿಚಿತ್ರ ಗುಟ್ಟನ್ನು ಅವರು ಬಿಟ್ಟುಕೊಟ್ಟರು.ಚಿತ್ರದ ನಾಯಕ ಕಿಶನ್ ಭಂಡಾರಿ ಅವರದು ಕನ್ನಡದಲ್ಲಿ ತೊದಲು ನುಡಿ. ಸಂಗೀತ ಉತ್ತಮವಾಗಿದೆ ಎನ್ನುತ್ತ ನಿರ್ದೇಶಕರಿಗೂ ನಮನ ಸಲ್ಲಿಸಿದ ಅವರು ತಮ್ಮ ಅಭಿನಯದ ಕುರಿತು ಸೊಲ್ಲೆತ್ತಲಿಲ್ಲ. ಛಾಯಾಗ್ರಾಹಕ ರಾಜ್ ಕಡೂರ್ ಶ್ರಮಪಟ್ಟಿದ್ದಾರೆ ಎನ್ನುವುದನ್ನು ಚಿತ್ರದ ಕೆಲವು ಹಾಡುಗಳು ಹಾಗೂ ಪ್ರೋಮೊಗಳು ಸಾರುತ್ತಿವೆ. ಇದು ಒಟ್ಟು ಐದು ಹಾಡುಗಳಿರುವ ಚಿತ್ರ. ಕರುಣಾಕರ್ ಅವರಿಗೆ ಖಳನಾಯಕನ ಪಾತ್ರ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.