ಬುಧವಾರ, ಜೂಲೈ 8, 2020
21 °C

ಉದ್ಯೋಗ ಖಾತರಿ ಬಾಕಿ ಕೂಲಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರು ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.‘ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ ತಾಲ್ಲೂಕಿನ ಕೆಲ ಗ್ರಾಮ ಪಂಚಾಯಿತಿಗಳು, ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಹಣ ಪಾವತಿಸದೆ ವಿಳಂಬ ಮಾಡುತ್ತಿದ್ದು, ಕೂಡಲೇ ಹಣ ಬಿಡುಗಡೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ಆಗ್ರಹಪಡಿಸಿದರು.ಮಳವಳ್ಳಿ ತಾಲ್ಲೂಕಿನ ಬಂಡೂರು, ಸುಜ್ಜಲೂರು, ಶೆಟ್ಟಹಳ್ಳಿ, ಹುಸ್ಕೂರು, ನೆಲಮಾಕನಹಳ್ಳಿ, ಕಗ್ಗಲೀಪುರ, ತಳಗವಾದಿ, ದುಗ್ಗನಹಳ್ಳಿ ಮತ್ತು ಹಾಡ್ಲಿ; ಮದ್ದೂರಿನ ಬಿದರಹಳ್ಳಿ, ಭಾರತೀನಗರ, ಮೆಣಸಗೆರೆ; ನಾಗಮಂಗಲದಲ್ಲಿ ಕರಡಹಳ್ಳಿ, ಪಾಂಡವಪುರದಲ್ಲಿ ಗುಮ್ಮನಹಳ್ಳಿ ಗ್ರಾಪಂ ಹಣ ಬಿಡುಗಡೆ ಮಾಡದೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿವೆ ಎಂದು ದೂರಿದರು.ದುಡಿಯುವ ಕೈಗಳಿಗೆ ವಾರ್ಷಿಕ ನೂರು ದಿನ ಕೆಲಸ ನೀಡಬೇಕೆಂಬ ನಿಯಮಾವಳಿಯಿದೆ. ಆದರೂ, ಕೆಲ ಗ್ರಾಪಂಗಳು ಕೆಲಸವೂ ನೀಡುತ್ತಿಲ್ಲ. ನಿರುದ್ಯೋಗ ಭತ್ಯೆಯನ್ನೂ ಪಾವತಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲಸವನ್ನು ಕೋರಿ ನಮೂನೆ-6ರ ಅರ್ಜಿ ನೀಡಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ.ಅಲ್ಲದೆ, ಗುತ್ತಿಗೆದಾರರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಆಗ್ರಹಪಡಿಸಿದರು.ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪದಾಧಿಕಾರಿಗಳಾದ ಕೆ.ಬಸವರಾಜು, ಬಿ.ಹನುಮೇಶ್, ಬಿ.ನಾಗರಾಜು, ಸಿ.ಕೆ.ಕುಮಾರ್, ಮಹದೇವಮ್ಮ, ಶಾಂತಮ್ಮ, ಜನವಾದಿ ಸಂಘಟನೆಯ ಸಿ.ಕುಮಾರಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.